ಶಿವಮೊಗ್ಗ: ತಾಲೂಕಿನ ಕೊನೆಯ ಭಾಗವಾಗಿರುವ ಹಾಡೋನಹಳ್ಳಿ ಗ್ರಾಮದ ಮುಖ್ಯ ರಸ್ತೆ ಗುಂಡಿಬಿದ್ದು ಸಂಪೂರ್ಣ ಹಾಳಾಗಿದೆ. ಕೂಡಲೇ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮಸ್ಥರು ಬುಧವಾರ ಡಿಸಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು.
ಹಾಡೋನಹಳ್ಳಿ ಗ್ರಾಮಕ್ಕೆ ಶಿವಮೊಗ್ಗ-ಹೊನ್ನಾಳಿ ರಸ್ತೆಯಿಂದ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದೆ. ಸುಮಾರು ಎರಡೂವರೆ ಕಿಮೀ ಉದ್ದದ ರಸ್ತೆಯಲ್ಲಿ ಊರಿನ ವಾಹನಗಳು, ಸರ್ಕಾರಿ ಬಸ್‌ಗಳು ನಿತ್ಯ ಸಂಚರಿಸುತ್ತಿವೆ. ಶಾಲಾ ವಾಹನಗಳೂ ಇಲ್ಲಿಗೆ ಬರುತ್ತವೆ. ಈ ರಸ್ತೆ ಅತ್ಯಂತ ಕಿರಿದಾಗಿದ್ದು, ಮಗ್ಗುಲಲ್ಲೇ ವಿದ್ಯುತ್ ಕಂಬಗಳಿವೆ. ನ್ಯೂನತೆಗಳನ್ನು ಸರಿಪಡಿಸಿ ರಸ್ತೆ ದುರಸ್ತಿಗೆ ಮುಂದಾಗಬೇಕು.
ಗ್ರಾಮದ ಗಿರಿಜಾಬಾಯಿ ಅವರ ಮನೆ ಮುಂಭಾಗದಿಂದ ಆಲಕಟ್ಟೆ ಚೌಡಮ್ಮನ ದೇವಸ್ಥಾನದವರೆಗೂ ರಸ್ತೆ ಸರಿಪಡಿಸಬೇಕು ಎಂದು ಮನವಿ ಮಾಡಿದರು. ಗ್ರಾಮಸ್ಥರಾದ ಡಿ.ಸಿ.ಜಗದೀಶ್ವರ್, ಈಶ್ವರಪ್ಪ, ಎಚ್.ಎಂ.ಮಧು ಉಪಸ್ಥಿತರಿದ್ದರು.