ನ್ಯೂಸ್

ಒಳಿತು, ಕೆಡುಕು ಅರಿಯುವ ವಿವೇಚನೆ ಬೆಳೆಸಿಕೊಳ್ಳಿ : ಬಿರ್ಲಾ ಕಂಪನಿ ನಿವೃತ್ತ ಪ್ರಧಾನ ವ್ಯವಸ್ಥಾಪಕ ಎಂ. ಚಿನ್ನಸ್ವಾಮಿ ಕರೆ

ಮೈಸೂರು: ಸಮಾಜದಲ್ಲಿ ಒಳ್ಳೆಯದ್ದು, ಕೆಟ್ಟದ್ದು ಎಲ್ಲವೂ ಇದ್ದು, ಒಳ್ಳೆಯದ್ದನ್ನು ಮಾತ್ರ ಆಯ್ದುಕೊಳ್ಳುವ ವಿವೇಚನೆಯನ್ನು ಮನುಷ್ಯರು ಬೆಳೆಸಿ ಕೊಳ್ಳಬೇಕು ಎಂದು ಬಿರ್ಲಾ ಕಂಪನಿಯ ನಿವೃತ್ತ ಪ್ರಧಾನ ವ್ಯವಸ್ಥಾಪಕ ಎಂ. ಚಿನ್ನಸ್ವಾಮಿ ಕರೆ ನೀಡಿದರು.

ಶರಣ ಸಾಹಿತ್ಯ ಪರಿಷತ್ ನಗರ ಘಟಕ, ಶ್ರೀ ನಿರಂಜನ ಮಠ ಹೋರಾಟ ಸಮಿತಿ ವತಿಯಿಂದ ನಗರದ ಶ್ರೀ ನಿರಂಜನ ಮಠದ ಆವರಣದಲ್ಲಿ ಶನಿವಾರ ಹಮ್ಮಿಕೊಂಡ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ಉತ್ತಮ ನಡೆ ನುಡಿಯನ್ನು ಬೆಳೆಸಿಕೊಳ್ಳಬೇಕು, ಸಮಾಜದಲ್ಲಿರುವ ಪ್ರತಿಯೊಬ್ಬರು ನಮ್ಮವರೆಂಬ ಭಾವನೆಯಿಂದ ಕಾಣಬೇಕು. ಪ್ರತಿಯೊಂದು ಧರ್ಮವೂ ನ್ಯಾಯ, ಸತ್ಯದ ಮಾರ್ಗವನ್ನು ತೋರಿಸುತ್ತದೆ. ಆ ಮಾರ್ಗದಲ್ಲಿ ಎಲ್ಲರು ಮುನ್ನಡೆಯಬೇಕು ಎಂದು ಕರೆ ನೀಡಿದರು.

‘ಷಟ್ ಸ್ಥಲ-ಒಂದು ಚಿಂತನೆ’ ವಿಷಯದ ಕುಮಾರಬೀಡು ಪಂಡಿತ್ಸ್ ದಿ ಆರ್ಕಿಡ್ಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ದೇವರಾಜ ಪಿ. ಚಿಕ್ಕಳ್ಳಿ ಮಾತನಾಡಿ, ಷಟ್ ಎಂದರೆ ಆರು, ಸ್ಥಲ ಎಂದರೆ ಹಂತ. ನಮ್ಮ ಬದುಕಿನಲ್ಲಿ ಭಗವಂತನ ದರ್ಶನ ಪಡೆಯಲು ಆರು ಹಂತಗಳನ್ನು ದಾಟಬೇಕು. ಇದಕ್ಕೆ ಶರಣರ ವಿಚಾರಧಾರೆಗಳು ನಮಗೆ ಅತ್ಯಂತ ಅವಶ್ಯಕವಾಗಿದ್ದು, ಶರಣರ ವಿಚಾರಧಾರೆ ಮೂಲಕ ನಾವು ಭಗವಂತನನ್ನು ಕಾಣಬೇಕು ಎಂದು ಹೇಳಿದರು.

ಭೂಮಿಯಲ್ಲಿರುವ ಪ್ರತಿಯೊಂದು ವಸ್ತು ಕೂಡ ಭಗವಂತನ ಕೊಡುಗೆ. ಪ್ರಕೃತಿಯಲ್ಲಿ ದೊರೆಯುವ ಹೂ, ಹಣ್ಣು ಎಲ್ಲವೂ ಭಗವಂತನ ಸೃಷ್ಟಿ. ಭಗಂತ ನಮಗೆ ನೀಡಿದ ವಸ್ತುಗಳನ್ನು ಅವನಿಗೆ ಅರ್ಪಿಸಲು ನಾವು ಯಾರು? ಈ ರೀತಿ ಪ್ರಕೃತಿಯಲ್ಲಿ ದೊರೆಯುವ ವಸ್ತುಗಳನ್ನು ದೇವರಿಗೆ ಅರ್ಪಿಸುವುದು ನಿಜವಾದ ಭಕ್ತಿಯಲ್ಲ, ನಮ್ಮ ಮನದಲ್ಲಿರುವ ಭಕ್ತಿ ಎಂಬ ಸುಮವನ್ನೇ ಭಗವಂತನಿಗೆ ಅರ್ಪಿಸಬೇಕು. ಭಕ್ತಿಯೇ ಭಗವಂತನಿಗೆ ಅತ್ಯಂತ ಪ್ರಿಯವಾದದ್ದು ಎಂದರು.

ವೇದಿಕೆಯಲ್ಲಿ ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷ ಮ.ಗು. ಸದಾನಂದಯ್ಯ, ಕಾರ್ಯದರ್ಶಿ ಟಿ.ಎಸ್. ಕುಮಾರಸ್ವಾಮಿ, ಖಜಾಂಚಿ ಶಿವಕುಮಾರ ಸ್ವಾಮಿ, ಸಂಚಾಲಕಿ ಜಯಾಗೌಡ, ಹೆಬ್ಬಾಳು-ವಿಜಯನಗರದ ಬಸವ ಸಮಿತಿ ಅಧ್ಯಕ್ಷ ಹಿನಕಲ್ ಬಸವರಾಜ, ದತ್ತಿ ದಾನಿ ವೈ.ಬಿ. ಪ್ರಭುಸ್ವಾಮಿ ಹಾಗೂ ಇತರರು ಇದ್ದರು.