ಶಿವಮೊಗ್ಗ ಸಹಚೇತನ ನಾಟ್ಯಾಲಯ ಸಂಸ್ಥೆಯಲ್ಲಿ ಭರತನಾಟ್ಯ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಹನಾ ಚೇತನ್, ಎಂ.ಸತೀಶ್, ಸ್ನೇಹಾ, ಆರ್.ಮಂಜುಳಾ ಇದ್ದರು. 
ನ್ಯೂಸ್

ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳ ಅಭಿರುಚಿ ಬೆಳೆಸಿ

ನವೀನ ಬಿ.ಎಂ

ಶಿವಮೊಗ್ಗ: ಮಕ್ಕಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳ ಅಭಿರುಚಿ ಮತ್ತು ಸೃಜನಶೀಲನ ಕಲೆಯನ್ನು ಬೆಳೆಸಬೇಕು. ಅದು ಮುಂದಿನ ಜೀವನಕ್ಕೆ ಅನುಕೂಲ ಆಗಲಿದೆ ಎಂದು ಸಹಚೇತನ ನಾಟ್ಯಾಲಯ ಸಂಸ್ಥೆಯ ಅಧ್ಯಕ್ಷೆ ಸಹನಾ ಚೇತನ್ ಹೇಳಿದರು.

ನಗರದ ಸಹಚೇತನ ನಾಟ್ಯಾಲಯ ಸಂಸ್ಥೆಯಲ್ಲಿ ಶನಿವಾರ ಬೆಂಗಳೂರು ರಾಜ್ಯ ಬಾಲಭವನ ಸೊಸೈಟಿ, ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಮಿತಿ ಸಹಯೋಗದಲ್ಲಿ 2025-26ನೇ ಸಾಲಿನ ವಾರಾಂತ್ಯ ಕಾರ್ಯಕ್ರಮದ ಪಠ್ಯೇತರ ಚಟುವಟಿಕೆಗಳ ವಿವಿಧ ಸಾಂಸ್ಕೃತಿಕ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಭವಿಷ್ಯವನ್ನು ರೂಪಿಸುವುದಕ್ಕೆ ಪಠ್ಯವೊಂದೇ ದಾರಿಯಲ್ಲ. ಅದರ ಜತೆ ಜತೆಗೆ ಸಾಕಷ್ಟು ದಾರಿಗಳಿವೆ. ಬಾಲ್ಯದಲ್ಲೇ ಸಂಗೀತ, ನೃತ್ಯದ ಬೀಜ ಮೊಳಕೆಯೊಡುವಂತೆ ಮಾಡಬೇಕು. ಅದು ಅವರ ಭವಿಷ್ಯಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಂತೆ ಆಗಲಿದೆ. ಇಂದು ನೃತ್ಯವು ಭಾರತೀಯ ಸಂಸ್ಕೃತಿಯನ್ನು ಇಡೀ ಜಗತ್ತಿನ ತೋರಿಸಿಕೊಡುವ ಮಟ್ಟಿಗೆ ಬೆಳೆದಿದೆ ಎಂದರು.

ಭರತನಾಟ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಮಾದವ ನೆಲೆ ಸಂಸ್ಥೆ ಮೇಲ್ವಿಚಾರಕ ಎಂ.ಸತೀಶ್, ಸ್ನೇಹಾತೀರ್ಪುಗಾರರಾಗಿದ್ದರು. 50ರಿಂದ 60 ಮಕ್ಕಳು ಭಾಗವಹಿಸಿದ್ದರು. ನಂತರ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು. ಜಿಲ್ಲಾ ಬಾಲ ಭವನ ಸಮಿತಿ ಕಾರ್ಯಕ್ರಮ ಸಂಯೋಜಕಿ ಆರ್.ಮಂಜುಳಾ ಸೇರಿ ಮಾಧವ ನೆಲೆಯ ಸಂಸ್ಥೆಯ ಸಿಬ್ಬಂದಿ ವರ್ಗದವರು, ಸಹಚೇತನ ನಾಟ್ಯಾಲಯದ ಮಕ್ಕಳು, ಕಲಾ ಪೋಷಕರು ಉಪಸ್ಥಿತರಿದ್ದರು.