ರಾವಂದೂರು: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಹೆಚ್ಚು ಗಮನ ಹರಿಸಬೇಕು ಎಂದು ಅಕ್ಷರ ದಾಸೋಹ ನಿರ್ದೇಶಕ ಎಂ.ಸಿ. ಪ್ರಶಾಂತ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಕಿರನಲ್ಲಿ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ಇರಬೇಕು ಹಾಗೂ ನಮ್ಮಲ್ಲಿರುವ ಅಂಧಕಾರ ಮೌಢ್ಯತೆಯನ್ನು ಹೋಗಲಾಡಿಸಲು ವಿಜ್ಞಾನ ಸಹಕಾರಿಯಾಗಿದೆ. ತಾಲೂಕಿನ ಮೊದಲ ಪಿಎಂಶ್ರೀ ಶಾಲೆಯಾದ ಇಲ್ಲಿ ಮಕ್ಕಳ ಕಲಿಕೆಗೆ ಭೋದನಾ ಮಾದರಿ ಅಳವಡಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಿದ್ದಾರೆ. ಈ ಶಾಲೆಯಲ್ಲಿ ವಿಜ್ಞಾನದ ಬಗ್ಗೆ ಮಕ್ಕಳು ತುಂಬ ಹೆಚ್ಚಿನ ಉತ್ಸಾಹಕತೆಯಿಂದ ಇದ್ದು ಇದಕ್ಕೆ ಶಿಕ್ಷಕರ ಪ್ರೋತ್ಸಾಹು ಮುಖ.್ಯ ಗ್ರಾಮೀಣ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚು ಅರಿವು ಮೂಡಿಸಲು ಶಿಕ್ಷಕರ ಬೋಧನಾ ವಿಧಾನ ಸಹ ಬಹಳ ಮುಖ್ಯವಾಗಿರುತ್ತದೆ. ನಮ್ಮ ದೇಶದ ವಿಜ್ಞಾನಿಗಳು ಅವರ ಆದರ್ಶಗಳನ್ನು ಮಕ್ಕಳಿಗೆ ತಿಳಿಸಿದಾಗ ಡಾಕ್ಟರ್ ಅಬ್ದುಲ್ ಕಲಾಂ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ. ಇವರ ತತ್ವ, ಆದರ್ಶಗಳನ್ನು ಮಕ್ಕಳಿಗೆ ಈಗಿನಿಂದಲೇ ತಿಳಿಸಬೇಕು. ಉತ್ತಮ ಭವಿಷ್ಯವನ್ನು ರೂಪಿಸಲು ಶಿಕ್ಷಕರ ಸಹಕಾರದ ಜತೆಗೆ ಪಾಲಕರ ಸಹಕಾರ ಮುಖ್ಯ ಎಂದು ತಿಳಿಸಿದರು.
ಡಿವೈಎಸ್ಪಿ ಶೋಭಾ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಗಮನಹರಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾಗುವ ಕಡೆ ಗಮನ ಹರಿಸಬೇಕು. ಈ ವಿಜ್ಞಾನ ಮೇಳದಿಂದ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಹೊಮ್ಮಿಸಲು ಅದನ್ನು ಪ್ರೋತ್ಸಾಹಿಸುವುದು ಶಿಕ್ಷಕರ ಆದ್ಯ ಕರ್ತವ್ಯ ಎಂದು ತಿಳಿಸಿದರು.
ವಿಜ್ಞಾನ ಮೇಳದ ಅಂಗವಾಗಿ ಆಯೋಜಿಸಿದ್ದ ವಸ್ತು ಪ್ರದರ್ಶನವನ್ನು ಡಯಟ್ ಹಿರಿಯ ಉಪನ್ಯಾಸಕಿ ನಳಿನಾಕ್ಷಿ ಉದ್ಘಾಟಿಸಿದರು. ವಿಶೇಷವೆಂದರೆ ಶಾಲೆಯಲ್ಲಿ ಪಿಎಂಶ್ರೀ ಕ್ಲಿನಿಕ್ ತೆರೆದು ಮಕ್ಕಳಿಂದ ತಮ್ಮ ಪಾಲಕರಿಗೆ ತೂಕ, ಎತ್ತರ ಪರೀಕ್ಷೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಚಂದ್ರು, ಗ್ರಾಪಂ ಸದಸ್ಯ ಅಶ್ವಿನಿ, ಸಿಆರ್‌ಪಿ ಸುದರ್ಶನ್, ಮುಖ್ಯ ಶಿಕ್ಷಕ ಶ್ರೀಧರ್ ಸೇರಿದಂತೆ ಶಾಲೆಯ ಶಿಕ್ಷಕರು ಮತ್ತು ಪಾಲಕರು ಹಾಜರಿದ್ದರು.