ಬೆಂಗಳೂರು: ಮುಸ್ಲಿಮ್ ಮೀಸಲಾತಿಯನ್ನು ವಿರೋಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಬಗ್ಗೆ ಮೋದಿಯವರ ಆಪ್ತಮಿತ್ರ ಮತ್ತು ಬಿಜೆಪಿಯ ಹೊಸ ಸಂಗಾತಿಯಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪ್ರತಿಕ್ರಿಯೆ ಏನು ಎನ್ನುವುದನ್ನು ನಾನು ತಿಳಿದುಕೊಳ್ಳಬಯಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕದಲ್ಲಿ ಮುಸ್ಲಿಂ ಮೀಸಲಾತಿಯನ್ನು ಜಾರಿಗೊಳಿಸಿದ್ದೇ ನಾನು ಎಂದು ಕೊಚ್ಚಿಕೊಳ್ಳುತ್ತಿದ್ದ ದೇವೇಗೌಡರು ಈಗಲೂ ತಮ್ಮ ನಿಲುವಿಗೆ ಬದ್ಧರಾಗಿದ್ದಾರಾ? ಇಲ್ಲವೇ ನರೇಂದ್ರ ಮೋದಿಯವರಿಗೆ ಶರಣಾಗಿ ತಮ್ಮ ಹಿಂದಿನ ನಿಲುವನ್ನು ಬದಲಾಯಿಸಿಕೊಳ್ಳುತ್ತರಾ? ಎಂಬುದನ್ನು ಅವರು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು ಎಂದಿದ್ದಾರೆ.
ಕಳೆದ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದರೂ ತಮ್ಮ ಸಾಧನೆಯ ಬಗ್ಗೆ ಹೇಳಲು ಏನೂ ಇಲ್ಲದಿರುವುದು ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ವಿಫಲ ಪ್ರಧಾನಿ ಎನ್ನುವುದನ್ನು ಸಾಬೀತುಪಡಿಸಿದೆ. ಒಬ್ಬ ಅನಕ್ಷರಸ್ಥ ಮಾತ್ರ ಈ ರೀತಿಯ ಆಧಾರ ರಹಿತ ಆರೋಪಗಳನ್ನು ಮಾಡಲು ಸಾಧ್ಯ. ಪ್ರಧಾನಿಯವರು ಸ್ವಯಂ ಪ್ರದರ್ಶಿಸುತ್ತಿರುವ ಅಜ್ಞಾನವನ್ನು ನೋಡಿದರೆ ಇವರ ಪದವಿ ಶಿಕ್ಷಣದ ಬಗೆಗಿನ ಸಂಶಯಗಳು ನಿಜ ಇರುವಂತೆ ಕಾಣಿಸುತ್ತದೆ ಎಂದಿದ್ದಾರೆ.
ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಿರುವ ಹಸಿ ಸುಳ್ಳು ಅವರ ಅಜ್ಞಾನವನ್ನಷ್ಟೇ ಅಲ್ಲ ಸೋಲಿನ ಭೀತಿಯಲ್ಲಿರುವ ಅವರ ಹತಾಶೆಯನ್ನೂ ಸೂಚಿಸುತ್ತದೆ. ದೇಶದಲ್ಲಿ ಇಲ್ಲಿಯ ವರೆಗಿನ ಯಾರೂ ಕೂಡಾ ಪ್ರಧಾನಿ ಪಟ್ಟವನ್ನು ಇಂತಹ ಕೀಳು ಮಟ್ಟಕ್ಕೆ ಇಳಿಸಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜವಾಬ್ದಾರಿ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಒಂದೋ ಈ ಬೇಜವಾಬ್ದಾರಿತನದ ಆರೋಪವನ್ನು ಆಧಾರಗಳನ್ನು ನೀಡಿ ಸಾಬೀತುಪಡಿಸಬೇಕು ಇಲ್ಲದೆ ಇದ್ದರೆ ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.