ನ್ಯೂಸ್

ದೇವರಗುಡ್ಡಕ್ಕೆ ಕಮಿಟಿ ಬದಲು ಪ್ರಾಧಿಕಾರ ರಚಿಸಲು ಆಗ್ರಹ; ಸೈನಿಕ ಗುಡ್ಡಪ್ಪ ಕೆಂಗಲ್ಲ

Haveri - Kariyappa Aralikatti

ರಾಣೆಬೆನ್ನೂರ: ತಾಲೂಕಿನ ಸುಕ್ಷೇತ್ರದ ದೇವರಗುಡ್ಡದ ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನದ ದರ್ಶನಕ್ಕೆ ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಆದರೆ, ದೇವರಗುಡ್ಡದಲ್ಲಿ ಶೌಚಗೃಹ ಸೇರಿ ಅಗತ್ಯ ಮೂಲ ಸೌಕರ್ಯವಿಲ್ಲದೆ ಭಕ್ತರು ಪರದಾಡುತ್ತಿದ್ದಾರೆ. ಇದಕ್ಕೆ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರೇ ನೇರಹೊಣೆ ಎಂದು ಗ್ರಾಮದ ನಿವಾಸಿ ಹಾಗೂ ಸೈನಿಕ ಗುಡ್ಡಪ್ಪ ಕೆಂಗಲ್ಲ ಆರೋಪಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ದೇವಸ್ಥಾನ ಆಡಳಿತ ಮಂಡಳಿಯವರು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿಲ್ಲ. ಭಕ್ತರು ಶೌಚಗೃಹ ನಿರ್ಮಾಣಕ್ಕಾಗಿ ಹಣ ನೀಡಿದ್ದರೂ ಕಟ್ಟಿಸಿಲ್ಲ. ದೇವಸ್ಥಾನಕ್ಕೆ ಬರುವ ನಗದು, ಚಿನ್ನಾಭರಣ ಕುರಿತು ಯಾವುದೇ ಲೆಕ್ಕಗಳನ್ನು ಕೊಡುತ್ತಿಲ್ಲ. ಆದ್ದರಿಂದ ಈಗಿರುವ ಕಮಿಟಿ ಸದಸ್ಯರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದರು.

ದೇವಸ್ಥಾನದ ದರ್ಶನಕ್ಕೆ ಬರುವ ಭಕ್ತರಿಗೆ ಶೌಚಗೃಹ ವ್ಯವಸ್ಥೆ ಕೂಡ ಇಲ್ಲದ ಕಾರಣ ಮಹಿಳೆಯರು ಶೌಚಕ್ಕೆ ತೆರಳಲು ಬಯಲು ಜಾಗ ಹುಡುಕಬೇಕಾದ ಅನಿವಾರ್ಯತೆ ಎದುರಾಗಿದೆ. ರಸ್ತೆಗಳನ್ನು ಡಾಂಬರೀಕರಣ ಮಾಡಲು ಅನುದಾನ ಬಂದಿದ್ದರೂ ಯಾವುದೇ ಕಾಮಗಾರಿ ಮಾಡುತ್ತಿಲ್ಲ.

ಇದಕ್ಕೆಲ್ಲ ಈಗಿರುವ ಕಮಿಟಿ ಸದಸ್ಯರೇ ಕಾರಣವಾಗಿದ್ದಾರೆ. ಇವರ ವಿರುದ್ಧ ಕಮಿಟಿ ಅಧ್ಯಕ್ಷರಾಗಿರುವ ಧಾರವಾಡ ಜಿಲ್ಲಾ ಕೋರ್ಟ್​ನ ನ್ಯಾಯಾಧೀಶರಿಗೆ ಹಾಗೂ ಉಪಾಧ್ಯಕ್ಷ ರಾಣೆಬೆನ್ನೂರ ತಹಸೀಲ್ದಾರ್​ ಅವರಿಗೆ ದೂರು ನೀಡಲಾಗಿದೆ. ಅಧ್ಯಕ್ಷರು, ಉಪಾಧ್ಯಕ್ಷರು ಬದಲಾಗುತ್ತಾರೆ. ಆದರೆ, ಸದಸ್ಯರು ಹಲವಾರು ವರ್ಷಗಳಿಂದ ಅವರೇ ಇದ್ದಾರೆ. ಹೀಗಾಗಿ ದೇವಸ್ಥಾನದ ಸುತ್ತಲಿನ ಅಭಿವೃದ್ಧಿ ಎಂಬುದು ಮರಿಚಿಕೆಯಾಗಿದೆ.

ದೇವಸ್ಥಾನದ ಅಭಿವೃದ್ಧಿಗಾಗಿ ಭಕ್ತರು ನೀಡುವ ಹಣ ಎಲ್ಲಿಗೆ ಹೋಗುತ್ತದೆ ಎಂಬುದು ತಿಳಿಯದಾಗಿದೆ. ಇದನ್ನು ಪ್ರಶ್ನಿಸಲು ಬರುವವರಿಗೆ ಕಮಿಟಿ ಸದಸ್ಯರು ಇಲ್ಲದ ಸಲ್ಲದ ಆರೋಪ ಮಾಡಿ ತೊಂದರೆ ಕೊಡುತ್ತಿದ್ದಾರೆ. ಆದ್ದರಿಂದ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ದೇವಸ್ಥಾನ ಅಭಿವೃದ್ಧಿಗಾಗಿ ಕಮಿಟಿ ತೆಗೆದು ಪ್ರಾಧಿಕಾರ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.

ದೇವಸ್ಥಾನದ ಸೇವೆಗಾಗಿ ಆನ್​ಲೈನ್​ ಶುಲ್ಕ ಪಾವತಿ ವ್ಯವಸ್ಥೆ ಮಾಡಬೇಕು. ಅಂದಾಗ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಿದೆ. ಈ ಬಗ್ಗೆ ಹೋರಾಟ ಮಾಡುವ ಉದ್ದೇಶದಿಂದ ಮುಂದಿನ ದಿನದಲ್ಲಿ ರೂಪರೇಷಿ ಸಿದ್ಧಪಡಿಸಲಾಗುವುದು ಎಂದರು.

ಪ್ರಮುಖರಾದ ಮಾಲತೇಶ ಮುದ್ದಿ, ಮಾರುತಿ ಸಂಗಣ್ಣನವರ ಸುದ್ದಿಗೋಷ್ಠಿಯಲ್ಲಿದ್ದರು.