ದೇವದುರ್ಗ: ಕನಕದಾಸರು ಜಾತಿ ಸಂಘರ್ಷಗಳ ತಪ್ಪಿಸಲು ಕೀರ್ತನೆಗಳ ಮೂಲಕ ಜಾಗೃತಿ ಮೂಡಿಸಿದರು. ಅವರ ಸಂದೇಶಗಳು ಸಮಾಜಕ್ಕೆ ಬೆಳಕಾಗಿವೆ ಎಂದು ಪ್ರಾಚಾರ್ಯ ಉಮೇಶ ಹೆಸರೂರು ಹೇಳಿದರು.
ಜಾಲಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನಕದಾಸರ ಕೀರ್ತನೆಗಳು ಮತ್ತು ಉದಾತ್ತ ಆಶಯಗಳು ಮನುಕುಲದ ಏಳಿಗೆಗೆ ದಾರಿದೀಪವಾಗಿವೆ. ಭಕ್ತಿ, ಕವಿತ್ವ ಮತ್ತು ಸಂಗೀತ ಸಾಧನೆಗೆ ಜಾತಿ ಎಂದೂ ತೊಡಕಾಗುವುದಿಲ್ಲ ಎನ್ನುವುದಕ್ಕೆ ಕನಕದಾಸರ ಜೀವನ ಸಾಕ್ಷಿಯಾಗಿದೆ ಎಂದರು.
ಮಸರಕಲ್: ಗ್ರಾಮದ ಸರ್ಕಾರಿ ಮಾದರಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕನಕದಾಸ ಹಾಗೂ ಒನಕೆ ಓಬವ್ವ ಜಯಂತಿ ಆಚರಿಸಲಾಯಿತು. ಮುಖ್ಯಶಿಕ್ಷಕ ಸಿದ್ದರಾಮ ನಾಗಡದಿನ್ನಿ ಮಾತನಾಡಿ, ಕನಕದಾಸರು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದ ದಾರ್ಶನಿಕರಾಗಿದ್ದಾರೆ. ವರ್ಗರಹಿತ ಸಮಾಜವನ್ನು ಕಟ್ಟಲು ಶ್ರಮಿಸಿದ್ದರು ಎಂದು ಹೇಳಿದರು.
ಶಿಕ್ಷಕಿ ನಜೀಯಾ ಮಾತನಾಡಿ, ಹೈದರಾಲಿಯ ಸೈನ್ಯದೊಂದಿಗೆ ಏಕಾಂಗಿಯಾಗಿ ಹೋರಾಡಿ ಇತಿಹಾಸದ ಪುಟದಲ್ಲಿ ಅಚ್ಚಳಿಯದೆ ಉಳಿದಿರುವ ಓಬವ್ವನ ಸಾಹಸ ಅಜರಾಮರ. ಧೀರ ಮಹಿಳೆಯ ಚರಿತ್ರೆ ಎಂದಿಗೂ ಹೆಮ್ಮೆ ಪಡುವಂತಹ ಸಂಗತಿ ಎಂದು ಹೇಳಿದರು. ಶಿಕ್ಷಕರಾದ ಶಾಂತಕುಮಾರ, ಸ್ನೇಹಾ, ಗುಂಡಮ್ಮ, ಮಲ್ಕಮ್ಮ, ಸೋಫಿ, ಅಭಿಷೇಕ್ ಇದ್ದರು.