ನ್ಯೂಸ್

ಹೆಚ್ಚಿದ ಹೊರೆ, ಸಾಲಕ್ಕೆ ಮೊರೆ: ದಿಟ್ಟ ನಿರ್ಧಾರದತ್ತ ಸರ್ಕಾರ ಹೆಜ್ಜೆ; ರಾಜಸ್ವ ಕೊರತೆ, ಸಾಲವೊಂದೇ ದಾರಿ..

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಂಟನೇ ಬಜೆಟ್ ಮಂಡಿಸಿದ ಬೆನ್ನಲ್ಲೇ ಮುಂದಿನ ಆರ್ಥಿಕ ವರ್ಷಗಳಲ್ಲಿ ರಾಜ್ಯದ ಹಣಕಾಸು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಮುನ್ಸೂಚನೆಯನ್ನು ರಾಜಸ್ವ ಕೊರತೆ ಹೆಚ್ಚಳ ಹೊರಹಾಕಿದೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಸಬ್ಸಿಡಿಗಳ ಕಡಿತ ಸೇರಿದಂತೆ ಹಲವು ಕ್ರಮಗಳತ್ತ ಗಮನ ಹರಿಸುವ ಮೂಲಕ ಸ್ಪಷ್ಟ ಹೆಜ್ಜೆಯನ್ನಿಟ್ಟಿದೆ. ರಾಜ್ಯದ ಜಿಎಸ್​ಡಿಪಿ ಶೇ.2.6 ಕಡಿಮೆಯಾಗಿರುವುದರಿಂದ ಅನೇಕ ಪರಿಣಾಮಗಳು ಕಾಣಿಸಿಕೊಂಡಿವೆ. ವಿತ್ತೀಯ ನಿರ್ವಹಣೆ ಪರಿಶೀಲನಾ ಸಮಿತಿ ನೀಡಿರುವ ಸಲಹೆಗಳ ಜಾರಿ ಮೂಲಕವೇ ವಿತ್ತೀಯ ಸವಾಲು ಎದುರಿಸಲು ಸರ್ಕಾರದ ಮುಂದಾಗಿದೆ. ರಾಜಸ್ವ ಕೊರತೆಯಿಂದಾಗಿ ಮುಂದಿನ ವರ್ಷಗಳಲ್ಲಿ ಬಹಳ ದೊಡ್ಡ ಸಂಕಷ್ಟ ಎದುರಾಗಲಿದೆ. ಸಾಲವನ್ನೇ ಅವಲಂಬಿಸಬೇಕಿದೆ. ಸರ್ಕಾರ ಬರಿಸಲೇಬೇಕಾದ ಬದ್ಧತಾ ವೆಚ್ಚಗಳಿಂದಾಗಿ ರಾಜ್ಯದ ಸ್ವಂತ ತೆರಿಗೆಗಳು ಶೇ.91ಕ್ಕೆ ತಲುಪಿದ್ದರೆ, ಸಾಲದ ಮೇಲಿನ ಬಡ್ಡಿ ಪ್ರಮಾಣ ರಾಜಸ್ವ ವೆಚ್ಚದ ಶೇ.15 ದಾಟಲಿದೆ. ಆದ್ದರಿಂದಲೇ ರಾಜ್ಯ ಸರ್ಕಾರ ವಿವೇಚನೆಯ ಹೆಜ್ಜೆ ಹಾಕಬೇಕಾಗಿರುವುದನ್ನು ಪರಿಶೀಲನಾ ಸಮಿತಿ ಸರ್ಕಾರದ ಗಮನಕ್ಕೆ ತಂದಿದೆ. ಈ ವರ್ಷವೇ ರಾಜ್ಯದ ಸಾಲ 71 ಸಾವಿರ ಕೋಟಿ ರೂ.ಗೆ ತಲುಪುತ್ತಿದೆ. 2024-25ಕ್ಕೆ ಸಾಲ 6,42,578 ಕೋಟಿ ರೂ.ಗಳಾಗುವುದರಿಂದ ಬಡ್ಡಿ ಹೆಚ್ಚಾಗುತ್ತದೆ. ಬದ್ಧ ವೆಚ್ಚಕ್ಕೂ ಸಮಸ್ಯೆಯಾಗಬಾರದೆಂಬ ಉದ್ದೇಶವನ್ನು ಸಮಿತಿ ಹೊಂದಿರುವುದು ವರದಿಯಲ್ಲಿನ ಶಿಫಾರಸುಗಳನ್ನು ನೋಡಿದಾಗ ತಿಳಿಯುತ್ತದೆ. ತೆರಿಗೆ ಸಂಗ್ರಹದ ಜತೆಗೆ ಕೇಂದ್ರದ ಪಾಲು ಕಡಿಮೆಯಾಗಿರುವುದನ್ನು ಕೇವಲ ಈ ವರ್ಷಕ್ಕೆ ಮಾತ್ರವೆಂದು ಪರಿಗಣಿಸಲಾಗದು. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಪರಿಣಾಮ ಉಂಟಾಗಲಿದೆ ಎಂಬ ಎಚ್ಚರಿಕೆಯನ್ನೂ ಸಮಿತಿ ನೀಡಿದೆ.

ಸಮಿತಿಯ ಸಲಹೆಗಳು?
  • ಗಣಿ ಹರಾಜಿಗೆ ಆದ್ಯತೆ ನೀಡುವ ಮೂಲಕ ಆದಾಯ ಹೆಚ್ಚಿಸಿ ಕೊಳ್ಳಬೇಕು
  • ಗಣಿ ಹಂಚಿಕೆ ಚುರುಕು ಮಾಡಬೇಕು
  • ಬಳಕೆದಾರರ ಶುಲ್ಕಗಳನ್ನು ಪರಿಷ್ಕರಿಸಬೇಕು
  • ಸಾಲವನ್ನು 3 ಮತ್ತು 4 ನೇ ತ್ರೖೆಮಾಸಿಕದಲ್ಲಿ ಮಾಡಿದರೆ ಬಡ್ಡಿ ಪ್ರಮಾಣ ಕಡಿಮೆ
  • ಸರ್ಕಾರಿ-ಖಾಸಗಿ ಸಹಭಾಗಿತ್ವದ ಅವಲಂಬನೆಯ ಮೂಲಸೌಕರ್ಯ ಯೋಜನೆಗಳ ಪುನರ್ ಅವಲೋಕನ ಆಗಬೇಕು
  • ಹಂಚಿಕೆಗಳು ಅನುದಾನದ ಬದ್ಧತೆಯಿಂದ ಇರಬೇಕು
  • ಸಾರ್ವಜನಿಕ ಸಂಪನ್ಮೂಲಗಳ ಪುನರ್ ಅವಲೋಕನ ಅಗತ್ಯ
  • ಆರ್ಥಿಕ ಮೂಲಸೌಕರ್ಯಕ್ಕೆ ಹೆಚ್ಚುತ್ತಿರುವ ಬೇಡಿಕೆ ಪೂರೈಸುವುದು
  • 20 ಕೋಟಿ ರೂ.ಗಿಂತ ಕಡಿಮೆ ಗಾತ್ರದ ಯೋಜನೆಗಳ ಮರು ಪರಿಶೀಲನೆ ಆಗಲಿ
  • ರಾಜಸ್ವ ಸ್ವೀಕೃತಿ ಮತ್ತು ವೆಚ್ಚದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು.
ಸವಾಲುಗಳೇನು?
  • ಸಾಲ ವಾಪಸ್ ಹಾಗೂ ಬಡ್ಡಿಯ ಹೊರೆ
  • ವೆಚ್ಚಗಳನ್ನು ಪೂರೈಸಲು ಸಾಲವೇ ಅನಿವಾರ್ಯ
  • ತೆರಿಗೆಯೇತರ ಆದಾಯದ ಹೆಚ್ಚಳ
  • ಅವಶ್ಯಕತೆ ಇರದ ಯೋಜನೆಗಳ ರದ್ದು
  • ವಿವೇಚನಾಯುಕ್ತ ವೆಚ್ಚ
  • ರಾಜಸ್ವ ಹೆಚ್ಚಳ ವೃದ್ಧಿಸುವುದು
  • ಕೇಂದ್ರದ ಕಡಿತದಿಂದಾಗುವ ಸಮಸ್ಯೆ ನಿವಾರಣೆ 

ಇಲಾಖೆ ವಿಲೀನ ಧ್ವನಿಗೆ ಬಲ: ರಾಜಸ್ವ ಕೊರತೆಯಿಂದಾಗಿ ಬದ್ಧತಾ ವೆಚ್ಚ ಹೆಚ್ಚುವುದರಿಂದ ಇಲಾಖೆಗಳ ವಿಲೀನ ಹಾಗೂ ಹುದ್ದೆಗಳ ಪುನರ್ ಜೋಡಿಸುವ ಸರ್ಕಾರದ ಚರ್ಚೆಗೆ ಮತ್ತಷ್ಟು ಬಲ ಬಂದಿದೆ. ಇಲಾಖೆಗಳನ್ನು ತರ್ಕಬದ್ಧಗೊಳಿಸಿದರೆ ನೌಕರರ ಉತ್ಪಾದಕತೆಯನ್ನು ಹೆಚ್ಚಿಸಬಹುದೆಂದು ಹೇಳಲಾಗುತ್ತಿದೆ. ಇದರಿಂದ ಆಡಳಿತ ವೆಚ್ಚದ ಮೇಲೂ ನಿಯಂತ್ರಣ ಸಾಧಿಸಬಹುದಾಗಿದೆ. ವೇತನಗಳಿಗೆ 2020-21ನೇ ಸಾಲಿನಲ್ಲಿ 37080 ಕೋಟಿ ರೂ.ಗಳಿರುವುದು, 2021-22 ನೇ ಸಾಲಿಗೆ 38626 ಕೋಟಿ ರೂ.ಗಳಿಗೆ, 2024-25 ನೇ ಸಾಲಿಗೆ 61696 ಕೋಟಿ ರೂ.ಗಳಿಗೆ ತಲುಪಲಿದೆ. ಆದ್ದರಿಂದಲೇ ಇಲಾಖೆಗಳ ವಿಲೀನ ತುರ್ತು ಅನಿವಾರ್ಯ ಎಂಬ ಸ್ಥಿತಿ ಉಂಟಾಗಿದೆ.

ತೆರಿಗೇಯೇತರ ರಾಜಸ್ವ ಹೆಚ್ಚಳ: ತೆರಿಗೆ ಆದಾಯ ಹೆಚ್ಚಳ ಅಸಾಧ್ಯ ಎಂಬುದನ್ನು ಮನಗಂಡೇ ಸಮಿತಿ ತೆರಿಗೆಯೇತರ ರಾಜಸ್ವ ಹೆಚ್ಚಳಕ್ಕೆ ಸೂಚಿಸಿದೆ. ಕಳೆದ 3 ವರ್ಷಗಳಿಂದ ಆಗದ ಬಳಕೆದಾರರ ಶುಲ್ಕ ಹೆಚ್ಚಿಸಬೇಕೆಂದು ಸ್ಪಷ್ಟವಾಗಿ ಹೇಳಿದೆ. ಇದರಿಂದ ಮುಂದಿನ ದಿನಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಬಳಕೆದಾರರ ಶುಲ್ಕದ ಹೊರೆಯನ್ನು ಹೊರಲು ಜನಸಾಮಾನ್ಯರು ಸಿದ್ಧರಾಗಬೇಕಾಗಿದೆ.

ಸಬ್ಸಿಡಿ ಕಡಿತ ಎಷ್ಟು?: ರಾಜ್ಯ ಸರ್ಕಾರ ಆಹಾರ, ಹಾಲು, ವಸತಿ, ಕೃಷಿ, ಶಿಕ್ಷಣ, ಸಾರಿಗೆ ಹೀಗೆ ವಿವಿಧ ವಲಯಗಳಲ್ಲಿ ಜನ ಸಾಮಾನ್ಯರಿಗೆ ಸಬ್ಸಿಡಿ ನೀಡುತ್ತದೆ. ಆದರೆ ಹಣಕಾಸಿನ ತೀವ್ರ ಕೊರತೆ ಹಿನ್ನೆಲೆಯಲ್ಲಿ ಸಬ್ಸಿಡಿ ಕಡಿಮೆ ಮಾಡಿದೆ. 2020-21ನೇ ಸಾಲಿನಲ್ಲಿ 25133.25 ಕೋಟಿ ರೂ.ಗಳಿದ್ದ ಸಬ್ಸಿಡಿ ಪ್ರಮಾಣ 2021-22ನೇ ಸಾಲಿನಲ್ಲಿ 23758.60 ಕೋಟಿ ರೂ.ಗೆ ಇಳಿಕೆಯಾಗುತ್ತಿದೆ. ಅಂದರೆ 1374.65 ಕೋಟಿ ರೂ. ಕಡಿಮೆಯಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಆಹಾರಕ್ಕೆ ಸುಮಾರು 1000 ಕೋಟಿ ರೂ. ಕಡಿಮೆ ಮಾಡಲಾಗಿದೆ.

ಬಂಡವಾಳಕ್ಕೆ ಕೊರತೆ: ರಾಜಸ್ವ ಕೊರತೆ ಹೆಚ್ಚುವುದರಿಂದ ಮುಂದಿನ 5 ವರ್ಷಗಳಲ್ಲಿ ರಾಜ್ಯದಲ್ಲಿ ಬಂಡವಾಳಕ್ಕೆ ಹಣದ ಸಮಸ್ಯೆ ಎದುರಾಗುತ್ತದೆ. 2024-25 ನೇ ಸಾಲಿಗೆ ಬಂಡವಾಳಕ್ಕೆ ಸಿಗುವ ಹಣ 10942 ಕೋಟಿ ರೂ. ಮಾತ್ರ. ಬರುವ ಆದಾಯವೆಲ್ಲ ವೇತನ, ಪಿಂಚಣಿ, ಸಾಲ, ಬಡ್ಡಿ ಪಾವತಿಗೆ ಹೋಗುತ್ತದೆ. ಆದ್ದರಿಂದಲೇ ಎಚ್ಚರಿಕೆ ಹೆಜ್ಜೆಯನ್ನಿಡಬೇಕೆಂಬ ಬಗ್ಗೆ ಸಮಿತಿ ಸೂಚಿಸಿರುವುದೆಂದು ಹಣಕಾಸು ಇಲಾಖೆಯ ಮೂಲಗಳು ಹೇಳುತ್ತವೆ.