ನ್ಯೂಸ್

ಪಿತೃಋಣ ತೀರಿಸುವ ಅವಕಾಶ; ಇಂದಿನಿಂದ ಪಿತೃಪಕ್ಷ

Webdesk - Ravikanth

ಹಿಂದೂ ಸಂಸ್ಕೃತಿಯ ಅನೇಕ ನಂಬಿಕೆಗಳಲ್ಲಿ ಪಿತೃಋಣ ತೀರಿಸುವ ವಿಚಾರ ಹೆಚ್ಚು ರ್ಚಚಿತ. ಪೂರ್ವಜರ ಋಣವನ್ನು ತೀರಿಸುವ ಮಾರ್ಗ ಹಾಗೂ ಅವಶ್ಯಕತೆಗಳ ಕುರಿತು ಅನೇಕ ಕಲ್ಪನೆಗಳಿದ್ದು, ಮಂಗಳವಾರದಿಂದ ಆರಂಭವಾಗುವ ಪಿತೃಪಕ್ಷದಲ್ಲಿ ಶ್ರಾದ್ಧ ಕರ್ಮಗಳನ್ನು ಕೈಗೊಳ್ಳಲು ಶ್ರೇಷ್ಠ ಸಮಯ. ಪಿತೃಪಕ್ಷದ ಹಿನ್ನೆಲೆ ವಿವರಿಸುತ್ತ ಈ ವಿಷಯದಲ್ಲಿ ಸಾರ್ವಜನಿಕರಿಗೆ ಇರುವ ಅನೇಕ ಗೊಂದಲಗಳನ್ನು ನಿವಾರಿಸಿದರು ಬ್ರಹ್ಮಾಂಡ ಗುರೂಜಿ ಎಂದೇ ಪ್ರಸಿದ್ಧರಾದ ನರೇಂದ್ರಬಾಬು ಶರ್ಮ. ‘ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ 247’ ಕ್ಲಬ್​ಹೌಸ್ ಸಂವಾದದಲ್ಲಿ ಅವರು ನೀಡಿದ ಮಾಹಿತಿಯ ಸಾರ ಇಲ್ಲಿದೆ.

ದೇವರಪೂಜೆಗಿಂತಲೂ ಮುಖ್ಯ

ತಾಯಿ, ಗುರು ಹಾಗೂ ನಾವು ಮಾಡಿದ ಕರ್ಮಗಳ ಋಣವನ್ನು ಎಂದಿಗೂ ಉಳಿಸಿಕೊಳ್ಳಬಾರದು. ತಂದೆ-ತಾಯಿ ಬದುಕಿದ್ದಾಗ ಚೆನ್ನಾಗಿ ನೋಡಿಕೊಳ್ಳಬೇಕು. ಅವರ ನಿಧನದ ನಂತರ ಅಷ್ಟೇ ಶ್ರದ್ಧೆಯಿಂದ ಶ್ರಾದ್ಧಕರ್ಮಗಳನ್ನು ಆಚರಿಸಬೇಕು. ಪಿತೃಋಣವನ್ನು ತೀರಿಸುವ ಕ್ರಮಗಳನ್ನು ಗರುಡಪುರಾಣದಲ್ಲಿ ವಿವರಿಸಲಾಗಿದೆ. ಯಾವುದೇ ವ್ಯಕ್ತಿ ನಿಧನರಾದಾಗ ತಿಥಿ ಕಾರ್ಯ ನಡೆಸಲಾಗುತ್ತದೆ, ಇದು ಶಿವನಿಗೆ ಸಲ್ಲುತ್ತದೆ. ಪಿತೃಪಕ್ಷದ 15 ದಿನದಲ್ಲಿ, ಎಲ್ಲ ನಕ್ಷತ್ರಗಳು ಬಂದುಹೋಗುತ್ತವೆ. ಆ ವ್ಯಕ್ತಿ ನಿಧನರಾದ ನಕ್ಷತ್ರ ಯಾವ ದಿನ ಬರುತ್ತದೆ ಎಂದು ಗುರುತಿಟ್ಟುಕೊಂಡು ಅಂದು ಶ್ರಾದ್ಧ ನೆರವೇರಿಸಿದರೆ ಸಾಕ್ಷಾತ್ ಬ್ರಹ್ಮನಿಗೆ ಸಲ್ಲುತ್ತದೆ. ಅಂತಿಮವಾಗಿ, ಮಹಾಲಯ ಅಮಾವಾಸ್ಯೆಯ ದಿನ ನಡೆಸುವ ಕರ್ಮಗಳು ಮಹಾವಿಷ್ಣುವಿಗೆ ಸಲ್ಲುತ್ತವೆ. ದೇವರಪೂಜೆಗಿಂತಲೂ ಪಿತೃಋಣ ತೀರಿಸುವುದು ಬಹುಮುಖ್ಯ ಎಂದು ದೊಡ್ಡವರು ಹೇಳುತ್ತಾರೆ. ಪಿತೃದೋಷವಿದ್ದರೆ ಗಂಡ-ಹೆಂಡತಿ ಬಾಂಧವ್ಯಕ್ಕೆ ಧಕ್ಕೆಯಾಗುತ್ತದೆ, ಮದುವೆ ಆಗದಿರುವುದು, ಮಕ್ಕಳಾಗದಿರುವ ಸಮಸ್ಯೆ ಸೇರಿ ಅನೇಕ ಸಂಕಷ್ಟಗಳು ಎದುರಾಗುತ್ತವೆ. ಇಬ್ಬರು ಪತ್ನಿಯರನ್ನು ಹೊಂದಿರುವವರು, ಅವರಿಬ್ಬರ ನಡುವೆ ಕಾಳಜಿ ವಹಿಸುವಾಗ ಭೇದ ಮಾಡುವುದರಿಂದಲೂ ಮುಂದಿನ ಪೀಳಿಗೆಗೆ ಪಿತೃದೋಷ ಕಾಡುತ್ತದೆ. ತಂದೆ-ತಾಯಿಯನ್ನು ನೋಯಿಸಿದವರಿಗೆ ಕರ್ಮ ಅಂಟಿಕೊಳ್ಳುತ್ತದೆ, ಅದನ್ನೂ ನಿವಾರಿಸಿಕೊಳ್ಳಬೇಕಾಗುತ್ತದೆ. ಈ ಕರ್ಮಗಳಿಂದ ಮುಕ್ತಿ ಪಡೆಯಲು ದೋಷ ಪರಿಹಾರಕ್ಕೆ ಯಮಧರ್ಮರಾಜ ಹಾಕಿರುವ ಶಾಸನವನ್ನು, ರಾವಣ ಶಾಸನವನ್ನು ಪಾಲನೆ ಮಾಡಬೇಕು. ತನ್ನ ತಾಯಿಯ ಶ್ರಾದ್ಧ ನೆರವೇರಿಸಲು ರಾವಣ ಶ್ರೀಲಂಕಾದ ವವನಿಯಾ ಎಂಬಲ್ಲಿ 300 ಕಿ.ಮೀ. ವಿಸ್ತೀರ್ಣದ ಕಲ್ಯಾಣಿಯನ್ನು ಕಟ್ಟಿಸಿದ್ದಾನೆ.

ನದಿತೀರಗಳಲ್ಲಿ ಪಿಂಡ ಪ್ರದಾನ: ನದಿತೀರದಲ್ಲಿ ಪಿಂಡ ಪ್ರದಾನ ಮಾಡುವುದು ಒಳ್ಳೆ ಯದು. ಆದರೆ ಪಿತೃಕಾರ್ಯವನ್ನು ಸರಿಯಾಗಿ ಮಾಡಿಸುವ ಅರ್ಚಕ ಸಿಗಬೇಕು. ಪಿಂಡ ಪ್ರದಾನಕ್ಕೆ ಕುಟುಂಬದವರೆಲ್ಲರೂ ಹೋಗಬೇಕು, ಮನೆಯವರೆಲ್ಲರೂ ಸಮಾನವಾಗಿ ವೆಚ್ಚವನ್ನು ಹಂಚಿಕೊಳ್ಳಬೇಕು. ಪಿತೃಋಣವನ್ನು ಎಲ್ಲ ಜಾತಿ, ಸಮುದಾಯದವರೂ ತೀರಿಸ ಬೇಕು. ಅವರವರ ಸಂಪ್ರದಾಯ ದಂತೆ ಆಚರಣೆಯಲ್ಲಿ ಭಿನ್ನತೆ ಇರುತ್ತದೆ ಅಷ್ಟೆ. ಒಮ್ಮೆ ಪುಣ್ಯಕ್ಷೇತ್ರದಲ್ಲಿ ಕಾರ್ಯ ಮಾಡಿ, ನಂತರ ಎಲ್ಲಿಯಾದರೂ ಮುಂದುವರಿಸಿಕೊಂಡು ಹೋಗಬಹುದು.

ಸಮಾಧಿ ಸ್ಥಳವಿಲ್ಲದಿದ್ದರೆ ಏನು ಮಾಡುವುದು?: ತಂದೆ-ತಾಯಿಯ ಬೂದಿಯನ್ನು ವಿಸರ್ಜಿಸುವುದಿಲ್ಲ ಎಂದು ಅನೇಕರು ಸಮಾಧಿ ಕಲ್ಪನೆಯನ್ನು ಮೂಡಿಸಿ ಕೊಂಡರು. ಅವರು ನಿಧನರಾದ ಸಂದರ್ಭದಲ್ಲಿ ಹಾಗೂ ವರ್ಷಕ್ಕೊಮ್ಮೆ ಬರುವ ತಿಥಿ ನಕ್ಷತ್ರದ ದಿನದಲ್ಲಿ ಶ್ರಾದ್ಧ ಆಚರಿಸಬೇಕು. ಸಮಾಧಿ ಮಾಡಿದ ಸ್ಥಳವನ್ನು ಯಾರಿಗೂ ಮಾರಬಾರದು. ಹೀಗೊಂದು ವೇಳೆ ಆ ಸ್ಥಳ ಸರ್ಕಾರದ ಯೋಜನೆಗೆ ಹೋಗಿದ್ದರೆ ಅಥವಾ ಈಗಾಗಲೇ ಮಾರಿಬಿಟ್ಟಿದ್ದರೆ ಏನು ಮಾಡುವುದು? ದಾವಣಗೆರೆಯ ಉಕ್ಕಡಗಾತ್ರಿ, ಕೇರಳದ ತ್ರಿಶೂರು, ನೈನಿತಾಲ್ ಸೇರಿ ಅನೇಕ ಕ್ಷೇತ್ರಗಳಲ್ಲಿ ಒಂದು ಬಾರಿ ಶ್ರಾದ್ಧ ಮಾಡಬೇಕು. ಸಮಾಧಿ ಮಾಡಿದ ಸ್ಥಳದಲ್ಲಿ ನಾಲ್ಕು ಮೂಲೆಯಲ್ಲಿ ಹಾಗೂ ಮಧ್ಯದಲ್ಲಿ ಒಟ್ಟು ಐದು ಕಡೆಯಿಂದ ಮಣ್ಣು ತೆಗೆದುಕೊಂಡು ಗಂಗೆಯಲ್ಲಿ ವಿಸರ್ಜಿಸಿ ಶ್ರಾದ್ಧ ಮಾಡಬೇಕು. ನಂತರದಲ್ಲಿ ಅವರವರ ಸಂಪ್ರದಾಯಗಳಂತೆ ಶ್ರಾದ್ಧವನ್ನು ಮುಂದುವರಿಸಿಕೊಂಡು ಹೋಗಬೇಕು. ಹಿಂದಿನವರು ಮಾಡಿಲ್ಲ ಎಂದು ಸುಮ್ಮನೆ ಕೂರದೆ, ಈಗಿನಿಂದ ಮುಂದುವರಿಸಿಕೊಂಡು ಹೋಗಬೇಕು.

ವೀರಶೈವ-ಲಿಂಗಾಯತರು ಪಿತೃಪಕ್ಷ ಮಾಡಬಹುದಾ?

| ಹಾಲೇಶ್

- ಎಲ್ಲರೂ ಮಾಡಬೇಕು. ಶ್ರೀಶೈಲದ ಮಲ್ಲಿಕಾರ್ಜುನ ಕ್ಷೇತ್ರ, ಉಜ್ಜಯಿನಿ ಮಹಾಕ್ಷೇತ್ರದಲ್ಲೂ, ಮನುಷ್ಯರು ಹೇಗೆ ಪಿತೃಕಾರ್ಯ ಮಾಡಬೇಕು ಎಂದು ಉಲ್ಲೇಖವಿದೆ. ರಂಭಾಪುರಿಯ ವೀರಭದ್ರ ಶಾಸನದಲ್ಲೂ ಉಲ್ಲೇಖವಿದೆ. ನಿಧನರಾದವರನ್ನು ಹೂತಿಟ್ಟಿದ್ದರ ಗುರುತು ಸ್ಮಶಾನದಲ್ಲಿ ಇದ್ದರೆ ಆ ಜಾಗದ ಮಣ್ಣು ತೆಗೆದುಕೊಂಡು ಗಂಗೆಸ್ಮರಣೆ ಮಾಡಿ, ನಾರಾಯಣಬಲಿ, ಪ್ರೇತಸಂಸ್ಕಾರ, ಮಲೆಯಾಳ ಬ್ರಹ್ಮಪೂಜೆ ಮಾಡಬೇಕು. ನಂತರ ಗುರುತು ಇಟ್ಟುಕೊಳ್ಳಬೇಕಿಲ್ಲ, ನಿರಂತರ ಕಾರ್ಯ ಮುಂದುವರಿಸಬಹುದು.

ಮನೆಯಲ್ಲಿ ಶುಭಕಾರ್ಯಗಳು ಆಗುತ್ತಿಲ್ಲ, ಸ್ತ್ರೀದೋಷ ಕಾರಣ ಎನ್ನುತ್ತಾರೆ. ಮುತ್ತಜ್ಜಿ ಮುತೆôದೆಯಾಗಿ ನಿಧನರಾಗಿದ್ದಾರೆ. ಪಿತೃಪಕ್ಷ ಪದ್ಧತಿ ನಮ್ಮಲ್ಲಿ ಇಲ್ಲ, ಏನು ಮಾಡುವುದು?

| ತೇಜಸ್ವಿ

- ಬಡವರಿಗೆ, ವೃದ್ಧ ಬ್ರಾಹ್ಮಣ ದಂಪತಿಗೆ ಮುತೆôದೆಯನ್ನು ಸ್ಮರಣೆ ಮಾಡಿಕೊಂಡು ಮುತೆôದೆ ಬಾಗಿನ ನೀಡಬೇಕು. ಐದು ವರ್ಷದೊಳಗಿನ ಹೆಣ್ಣುಮಗುವಿಗೆ ಉಪಯೋಗವಾಗುವ ವಸ್ತುವನ್ನು ನೀಡಬೇಕು. 6 ತಿಂಗಳು ಶುಕ್ರವಾರ ಈ ರೀತಿ ಮಾಡಿದರೆ ಶುಕ್ರದೋಷ ಪರಿಹಾರ.

ಅಜ್ಜ ಮತ್ತು ಅಜ್ಜಿಯ ಶ್ರಾದ್ಧ ಮಾಡುವ ಸಂದರ್ಭ ದಲ್ಲಿ ತಂದೆ ಅಥವಾ ತಾಯಿಗೆ ಅನಾರೋಗ್ಯ ಉಂಟಾಗುತ್ತದೆ. ಕಾರಣ ತಿಳಿಯುತ್ತಿಲ್ಲ.

| ಪೂರ್ಣಿಮಾ

- ಮನೆಯಲ್ಲಿ ವಾಸ್ತುದೋಷವಿದ್ದರೆ, ಅತೃಪ್ತ ಆತ್ಮ ಮನೆ ಬಿಟ್ಟು ಹೋಗಿರುವುದಿಲ್ಲವಾದರೆ ಈ ಸಮಸ್ಯೆ ಉಂಟಾಗುತ್ತದೆ. ಮನೆಯಲ್ಲಿ ತಿಲಾ ಶಾಂತಿ ಹೋಮ, ಗರುಡ ಪುರಾಣ ಓದಿಸಿ, ಗರುಡ ಶಾಂತಿ ಮಾಡಿಸಿಕೊಳ್ಳಬೇಕು.

ಶ್ರಾದ್ಧವನ್ನು ಬುಧವಾರ ಮಾಡಬಾರದು ಎನ್ನುತ್ತಾರಲ್ಲ?

| ಉಷಾ, ಶ್ರೀನಿವಾಸ್

- ಬುಧವಾರ, ಸೋಮವಾರ ಮಾಡಬಾರದು ಎನ್ನುವುದಕ್ಕೆ ಇದು ಹಬ್ಬ ಅಲ್ಲ. ಪಕ್ಷಮಾಸದ 15 ದಿನದಲ್ಲಿ ಯಾವುದೇ ದಿನ, ನಿಧನರಾದವರ ನಕ್ಷತ್ರ ಬಂದ ದಿನ ಮಾಡಬಹುದು. ಬುಧವಾರ ಮಾಡಿದರೆ ಹಣ ಹೋಗುತ್ತದೆ ಎಂದು ಕೆಲವರು ಹೇಳುತ್ತಾರೆ, ಅದು ತಪು್ಪ. ಬುಧವಾರವೇ ನಿಧನರಾಗಿದ್ದರೆ ಏನು ಮಾಡುವುದು? ಅಂದೇ ಮಾಡಬೇಕು ತಾನೆ? ಬುಧವಾರವೂ ಆಚರಣೆ ಮಾಡಬಹುದು.

ಮನೆಯಲ್ಲಿ ಅನಾರೋಗ್ಯ ಸೇರಿ ವಿವಿಧ ಸಂದರ್ಭದಲ್ಲಿ ಶ್ರಾದ್ಧ ಮಾಡಲಾಗದಿದ್ದರೆ ಏನು ಮಾಡುವುದು?

| ಉದಯ ಧರ್ಮಸ್ಥಳ

- ಶ್ರಾದ್ಧಕರ್ಮಕ್ಕೆ ಸಮಯ ಮಾಡಿಕೊಳ್ಳಲೇ ಬೇಕು. ಒಂದು ವೇಳೆ ವಿವಿಧ ಸಮಸ್ಯೆಗಳಿಂದ ಸಾಧ್ಯವಾಗದಿದ್ದಲ್ಲಿ ಹಂಪಿ, ಉಜ್ಜಯಿನಿಯಂತಹ ಕ್ಷೇತ್ರಗಳಲ್ಲಿ ಒಂದು ಸಾರಿಯಾದರೂ ಶ್ರಾದ್ಧ ಮಾಡಬೇಕು.

ನಾವು ದೀಪಾವಳಿಯಲ್ಲಿ ಪಿತೃಕಾರ್ಯ ಆಚರಣೆ ಮಾಡುತ್ತೇವೆ, ಇದು ಸರಿಯೇ?

| ಸುರೇಶ್

- ದೀಪಾವಳಿಯಲ್ಲಿ ಮಾಡಬಾರದು. ಅದು ಮನೆ ಯನ್ನು ಬೆಳಗುವ ಸಮಯ. ಇನ್ನುಮೇಲೆ ಮಹಾಲಯ ಅಮಾವಾಸ್ಯೆ ಸಮಯದಲ್ಲಿ ಮಾಡಿ.

ತಂದೆ ಶ್ರಾದ್ಧವನ್ನು, ಅವರ ನಿಧನದ ತಿಥಿ ಯಂದು ಮಾಡಲಾಗದಿದ್ದರೆ ಬೇರೆ ಯಾವ ದಿನ ಮಾಡಬಹುದು?

| ನವೀನ್

- ಹುಟ್ಟುಹಬ್ಬ ಬೇಕಿದ್ದರೆ ಮುಂದಕ್ಕೆ ಹಾಕಿಕೊಳ್ಳಿ, ಆದರೆ ಶ್ರಾದ್ಧವನ್ನು ಮಾತ್ರ ಅದೇ ದಿನ ಮಾಡಬೇಕು.

ಶ್ರೀರಂಗಪಟ್ಟಣದಲ್ಲಿ ಗುಂಪು ಕಟ್ಟಿಕೊಂಡು ಶ್ರಾದ್ಧ ಮಾಡಿಸುತ್ತಾರಲ್ಲ, ಇದು ಸರಿಯೇ?

| ಶಾಂತೇಶ್

- ಒಂದು ಸಮಯದಲ್ಲಿ ಒಬ್ಬರಿಗೇ ಶ್ರಾದ್ಧ ಮಾಡಿಸಬೇಕು. ಸಾಮೂಹಿಕ ವಿವಾಹದ ರೀತಿಯಲ್ಲಿ ಸಾಮೂಹಿಕ ಶ್ರಾದ್ಧ ಮಾಡಿಸಬಾರದು. ಲೋಕಾರೂಢಿ ವ್ಯಾಪಾರ ಮಾಡಿಕೊಂಡಿದ್ದಾರೆ ಕೆಲವರು. ಹಾಗೆ ಮಾಡಿಸಬಾರದು. ಇಂದು ಮಾಡಿರುವ ಕಾರ್ಯವನ್ನು ಅರ್ಚಕನು ಜೀರ್ಣಿಸಿಕೊಳ್ಳಬೇಕು.

ಎಲ್ಲಿ ಶ್ರಾದ್ಧ ಮಾಡಿದರೆ ಶ್ರೇಷ್ಠ?

| ಭರತ್

- ನೇಣು ಹಾಕಿಕೊಂಡು ಅಥವಾ ಇನ್ನಾವುದೇ ಅಪಮೃತ್ಯವಾದಾಗ ಶ್ರೀರಂಗಪಟ್ಟಣದಲ್ಲಿ ಶ್ರಾದ್ಧ ನಡೆಸುವುದು ಉತ್ತಮ. ಒಟ್ಟಿನಲ್ಲಿ ನದೀತೀರದಲ್ಲಿ ಮಾಡುವುದು ಶ್ರೇಷ್ಠ. ಯಾವುದೇ ನದಿಯ ತೀರದಲ್ಲಾದರೂ ಮಾಡಬಹುದು.

ಪಂಚಮದಲ್ಲಿ ನಿಧನರಾದರೆ ಪೂಜೆ ಮಾಡಿಸಬೇಕೆ ಅಥವಾ ಮನೆ ಬಿಡಬೇಕೆ?

| ಲಕ್ಷ್ಮಣ

- ವೈಕುಂಠ ಸಮಾರಾಧನೆ ಆದ ಮೇಲೆ ಮೂರು ದಿನ ಮನೆ ಬಿಟ್ಟು ಪಂಚಕ ಶಾಂತಿ ಮಾಡಿಸಿಕೊಳ್ಳಬೇಕು. ಮೂರು ತಿಂಗಳು ಮನೆ ಬಿಡಬೇಕಿಲ್ಲ. ಅವರಿದ್ದ ಕೋಣೆಯನ್ನು ಒಂದು ತಿಂಗಳು ಬಾಗಿಲು ಹಾಕಬೇಕು. ಆಸ್ಪತ್ರೆಯಲ್ಲಿ ನಿಧನರಾಗಿದ್ದರೆ ಏನೂ ಮಾಡಬೇಕಿಲ್ಲ.

ತಂದೆ ಈ ವರ್ಷ ಏಪ್ರಿಲ್​ನಲ್ಲಿ, ಮೇಯಲ್ಲಿ ತಾಯಿ ತೀರಿಹೋಗಿದ್ದಾರೆ. ಈ ವರ್ಷ ಪಿತೃಪಕ್ಷದಲ್ಲಿ ಆಚರಣೆ ಮಾಡಬೇಕೆ, ಬೇಡವೇ?

| ಶಿವರಾಮ್

- ಈ ವರ್ಷವೇ ನಿಧನರಾಗಿದ್ದರೂ ಇಬ್ಬರ ನಕ್ಷತ್ರಕ್ಕೆ ಅನುಗುಣವಾಗಿ ಪಿತೃಪಕ್ಷದಲ್ಲಿ ಕಾರ್ಯ ಮಾಡಬೇಕು. ಈ ವರ್ಷ ಮಾಡಬಾರದು ಎಂದು ಹೇಳುವಂತಿಲ್ಲ. ಮಹಾಲಯ ಅಮಾವಾಸ್ಯೆಯಲ್ಲಿ ಶ್ರಾದ್ಧ ಮಾಡಿ.

ನವಮಿ ದಿನದಲ್ಲಿ ತೀರಿಹೋದ ಮುತೆôದೆಯರ ಪೂಜೆ ಏಕೆ?

| ಡಾ.ನಿರ್ಮಲಾ

- ಸುಮಂಗಲಿಯಾಗಿ ನಿಧನರಾದಾಗ ಎರಡೂ ಮನೆಯ ಲಕ್ಷ್ಮೀ ಹೋದಳು ಎಂಬ ನಂಬಿಕೆ. ಆ ಆತ್ಮವನ್ನು ಸಂತೃಪ್ತಿಪಡಿಸಲು ಶುಕ್ರದೋಷ ಪರಿಹಾರಕ್ಕಾಗಿ ಈ ಪೂಜೆ ಮಾಡುತ್ತಾರೆ.

ಮನೆಯಲ್ಲಿ ಮೂರು ಜನರು 3 ದಿನ ನಿಧನರಾಗಿದ್ದಾರೆ. ಯಾವತ್ತು ಕಾರ್ಯ ಮಾಡುವುದು?

| ಮಾಲತಿ

- ಪಿತೃಪಕ್ಷದಲ್ಲಿ ಅವರವರ ನಿಧನದ ನಕ್ಷತ್ರಕ್ಕೆ ತಕ್ಕಂತೆ ಕಾರ್ಯ ಮಾಡಬೇಕು. ಬಳ್ಳಿ ತರಕಾರಿಗಳನ್ನೊಳಗೊಂಡ ತರಕಾರಿಯೊಂದಿಗೆ ದಾನ ನೀಡಬೇಕು.