ಬೆಂಗಳೂರು: ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಧನ್ತೇರಸ್ ಅಥವಾ ಧನತ್ರಯೋದಶಿ ಹಬ್ಬವನ್ನು ಆಚರಿಸಲಾಗುತ್ತದೆ. ಆ ಮೂಲಕ ಆರೋಗ್ಯ ಮತ್ತು ಆಯುಷ್ಯದ ದೇವನಾದ ಧನ್ವಂತರಿಯನ್ನು ಪೂಜಿಸಿ ಪ್ರಾರ್ಥಿಸಲಾಗುತ್ತದೆ. ಧನತ್ರಯೋದಶಿ ಹೆಸರೇ ಸೂಚಿಸುವಂತೆ ಧನಾಗಮನ ಹಬ್ಬವೂ ಆಗಿರು ವುದರಿಂದ ಈ ದಿನದಂದು ಕೆಲ ನಿರ್ದಿಷ್ಟ ಸ್ಥಳಗಳಲ್ಲಿ ದೀಪ ಬೆಳಗಿದರೆ ಆರ್ಥಿಕ ಸಮಸ್ಯೆ ಪರಿಹಾರವಾಗಲಿದೆ ಎಂಬ ನಂಬಿಕೆ ಉಂಟು. ಶ್ರೀ ಧನ್ವಂತರಿಯು ಕೃಷ್ಣ ಪಕ್ಷದ ತ್ರಯೋದಶಿ ತಿಥಿಯ ದಿನದಂದು ಸಮುದ್ರ ಮಂಥನದಿಂದ ಭೂಮಿಯ ಮೇಲೆ ಜನಿಸಿದನು ಎನ್ನುವ ನಂಬಿಕೆಯಿದೆ. ಧನತ್ರಯೋದಶಿ ವ್ರತದ ಪೂಜೆ ವಿಧಾನ ಮತ್ತು ಪೂಜೆಗೆ ಶುಭ ಮುಹೂರ್ತ ಹೀಗಿದೆ...
ಧನತ್ರಯೋದಶಿ ಪೂಜೆ ವಿಧಾನ: ಧನತ್ರಯೋದಶಿ ದಿನದಂದು, ಮುಂಜಾನೆ ಮಡಿಯುಟ್ಟು ಪೂಜೆಗೆ ತಯಾರಿ ಪ್ರಾರಂಭಿಸಿ. ನಂತರ, ಈಶಾನ್ಯ, ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ನಿಂತು ಮನೆಯ ಈಶಾನ್ಯ ಮೂಲೆಯಲ್ಲಿ ಧನ್ವಂತರಿ ದೇವರನ್ನು ಪೂಜಿಸಿ. ಪೂಜೆ ಮಾಡುವಾಗ ಪಂಚದೇವರ ಮೂರ್ತಿಗಳನ್ನು ಅಂದರೆ ಸೂರ್ಯ, ಗಣೇಶ, ದುರ್ಗಾದೇವಿ, ಶಿವ ಮತ್ತು ವಿಷ್ಣುವಿನ ವಿಗ್ರಹಗಳನ್ನು ಪ್ರತಿಷ್ಠಾಪಿಸಿ. ಇದಾದ ನಂತರ ಧನ್ವಂತರಿ ದೇವನಿಗೆ ಷೋಡಶೋಪಚಾರ ಪೂಜೆಯನ್ನು ಮಾಡಿ. ಪೂಜೆಯ ಕೊನೆಯಲ್ಲಿ, ಬೇಡಿಕೆ ಈಡೇರಿಕೆಗಾಗಿ ದಕ್ಷಿಣೆಯನ್ನು ಅರ್ಪಿಸಿ.
ಸಪ್ತಮಾತೃಕೆಯನ್ನು ಪೂಜಿಸಿ: ಪೂಜೆ ನಂತರ ಧನ್ವಂತರಿ ದೇವರ ಮುಂದೆ ಧೂಪ, ದೀಪ, ಅರಿಶಿನ, ಕುಂಕುಮ, ಶ್ರೀಗಂಧ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸಿ, ಜಪ ಮಾಡಿ ನಮಸ್ಕರಿಸಿ. ಬಳಿಕ ಮನೆಯ ಮುಖ್ಯದ್ವಾರ ಅಥವಾ ಅಂಗಳದಲ್ಲಿ ದೀಪವನ್ನು ಬೆಳಗಿಸಿ. ಯಮ ದೇವತೆಯ ಹೆಸರಿನಲ್ಲಿ ಕಡ್ಡಾಯವಾಗಿ ದೀಪವನ್ನು ಬೆಳಗಿಸಬೇಕು. ಧನತ್ರಯೋದಶಿ ದಿನದಂದು ಮನೆಯಲ್ಲಿ ನಿಮ್ಮ ನೆಚ್ಚಿನ ದೇವರನ್ನು ಪೂಜಿಸುವಾಗ, ಸ್ವಸ್ತಿಕ, ಕಲಶ, ನವಗ್ರಹ, ಪಂಚ ಲೋಕಪಾಲ, ಷೋಡಶ ಮಾತೃಕೆ ಮತ್ತು ಸಪ್ತ ಮಾತೃಕೆಯನ್ನು ಪೂಜಿಸುವುದನ್ನು ಮರೆಯಬೇಡಿ.
ಯಾವ ಮುಹೂರ್ತದಲ್ಲಿ ಪೂಜೆ ಮಾಡಬೇಕು?: ಈ ಬಾರಿ ಮಂಗಳವಾರ (ನ. 2) ಧನತ್ರಯೋದಶಿ ದಿನ ಆಗಿರುವುದರಿಂದ ಸಂಜೆ 6.18 ರಿಂದ 8.10 ರವರೆಗೆ ಧನತೇರಸ್ ಪೂಜೆಯನ್ನು ಮಾಡಬಹುದಾಗಿದೆ. ಪ್ರದೋಷ ಕಾಲವು ಸಂಜೆ 5. 32 ರಿಂದ ರಾತ್ರಿ 8.10 ರವರೆಗೆ ಇರುತ್ತದೆ. ವೃಷಭ ಕಾಲವು ಸಂಜೆ 6.18 ರಿಂದ 8.13 ರವರೆಗೆ ಇರುತ್ತದೆ.
ಧನತ್ರಯೋದಶಿ ಹಬ್ಬದ ದಿನದಂದು ಆರ್ಥಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈ ಸ್ಥಳಗಳಲ್ಲಿ ದೀಪ ಬೆಳಗಿದರೆ ಲಕ್ಷ್ಮಿ ದೇವಿಯ ಸಂಪೂರ್ಣ ಅನುಗ್ರಹ ನಿಮಗೆ ದೊರೆಯುತ್ತದೆ. ಅಷ್ಟು ಮಾತ್ರವ್ಲಲ, ಇಲ್ಲಿ ದೀಪವನ್ನು ಬೆಳಗುವುದರಿಂದ ನಿಮ್ಮೆಲ್ಲಾ ಹಣದ ಸಮಸ್ಯೆಗಳು ದೂರಾಗಿ, ಆರ್ಥಿಕವಾಗಿ ಸದೃಢಗೊಳ್ಳಲು ಸಹಕಾರಿಯಾಗುತ್ತದೆ.
ಅರಳಿ ಮರದ ಕೆಳಗೆ: ಲಕ್ಷ್ಮಿದೇವಿಯು ಅರಳಿಮರದಲ್ಲಿ ನೆಲೆಸಿರುತ್ತಾಳೆ. ಹಾಗಾಗಿ ಧನತ್ರಯೋದಶಿ ದಿನದಂದು ಸಂಜೆ ಅರಳಿ ಮರದ ಕೆಳಗೆ ದೀಪವನ್ನು ಬೆಳಗಿಸಿದರೆ, ಜೀವನದಲ್ಲಿ ಹಣದ ಕೊರತೆ ಬರುವುದಿಲ್ಲ ಎನ್ನುವ ನಂಬಿಕೆಯಿದೆ.
ಬಿಲ್ವ ಮರದ ಬಳಿ: ನಿಮಗೆ ಹಣಕಾಸಿನ ಸಮಸ್ಯೆಗಳಿದ್ದರೆ ಧನತ್ರಯೋದಶಿ ದಿನದಂದು ರಾತ್ರಿ ಬಿಲ್ವ ಮರದ ಕೆಳಗೆ ತುಪ್ಪದ ದೀಪವನ್ನು ಬೆಳಗಿಸಿ. ಈ ರೀತಿ ಮಾಡುವುದರಿಂದ ಸಂಪತ್ತು, ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎನ್ನುವ ನಂಬಿಕೆಯಿದೆ.
ಸ್ಮಶಾನದಲ್ಲಿ: ಧನತ್ರಯೋದಶಿ ದಿನದಂದು ರಾತ್ರಿ ಸ್ಮಶಾನದಲ್ಲಿ ದೀಪವನ್ನು ಬೆಳಗಿಸಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ಆಕೆಯ ಕೃಪೆಯಿಂದ ಜೀವನದಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ.
ಮನೆಯ ಹೊಸ್ತಿಲಲ್ಲಿ: ಧನತ್ರಯೋದಶಿ ದಿನದಂದು ರಾತ್ರಿ ಮನೆಯ ಹೊಸ್ತಿಲಲ್ಲಿ ದೀಪ ಹಚ್ಚಲು ಮರೆಯಬೇಡಿ. ಇದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗಿ ಮನೆ ಪ್ರವೇಶಿಸುತ್ತಾಳೆ ಮತ್ತು ಮಾತಾ ಲಕ್ಷ್ಮಿ ನೆಲೆಸಿರುವ ಸ್ಥಳದಲ್ಲಿ ಸಂಪತ್ತಿಗೆ ಎಂದಿಗೂ ಕೊರತೆಯಿರುವುದಿಲ್ಲ ಎಂದು ಹೇಳಲಾಗುತ್ತದೆ.
ಒಮ್ಮೆ ಭಗವಾನ್ ವಿಷ್ಣುವಿನಿಂದ ಶಾಪಗ್ರಸ್ತಳಾಗಿ, ಲಕ್ಷ್ಮಿ ದೇವಿಯು ಹದಿಮೂರು ವರ್ಷಗಳ ಕಾಲ ರೈತನ ಮನೆಯಲ್ಲಿ ನೆಲೆಸಬೇಕಾಯಿತು. ಲಕ್ಷ್ಮಿ ದೇವಿಯ ವಾಸ್ತವ್ಯದಿಂದಾಗಿ ಆ ರೈತನ ಮನೆಯು ಸಂಪತ್ಭರಿತವಾಗಿತ್ತು. ಹದಿಮೂರು ವರ್ಷಗಳ ನಂತರ, ಭಗವಾನ್ ವಿಷ್ಣುವು ಲಕ್ಷ್ಮಿ ದೇವಿಯನ್ನು ಕರೆದುಕೊಂಡು ಹೋಗಲು ಬಂದಾಗ ರೈತನು ಲಕ್ಷ್ಮಿ ದೇವಿ ಯನ್ನು ಅಲ್ಲಿಯೇ ಇರಲು ವಿನಂತಿಸಿದನು. ಈ ಸಂದರ್ಭದಲ್ಲಿ ಲಕ್ಷ್ಮಿ ದೇವಿಯು ರೈತನಿಗೆ ನಾಳೆ ತ್ರಯೋದಶಿ ಆದ್ದರಿಂದ ನೀನು ಮನೆಯನ್ನು ಸ್ವಚ್ಛಗೊಳಿಸಿ ಮನೆಯಲ್ಲಿ ದೀಪವನ್ನು ಬೆಳಗು ಎಂದು ಹೇಳುತ್ತಾಳೆ. ರೈತ ಲಕ್ಷ್ಮಿ ಹೇಳಿದಂತೆಯೇ ಮಾಡುತ್ತಾನೆ. ಇದರಿಂದ ತಾಯಿ ಪ್ರಸನ್ನಳಾಗಿ ಐಶ್ವರ್ಯ ಮತ್ತು ವೈಭವವನ್ನು ಕರುಣಿಸುತ್ತಾಳೆ. ಅಂದಿನಿಂದ ಧನತ್ರಯೋದಶಿ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸುವ ಸಂಪ್ರದಾಯ ಬೆಳೆದು ಬಂದಿದೆ.
ಧನ್ತೆರಾಸ್ ಪುರಾಣೈತಿಹಾಸ: ಧನ್ವಂತರಿಯನ್ನು ಆರೋಗ್ಯದ ದೇವರು ಎಂದು ಪೂಜಿಸಲಾಗುತ್ತದೆ. ಪುರಾಣಗಳ ಪ್ರಕಾರ, ಸಾಗರ ಮಂಥನದ ಸಮಯದಲ್ಲಿ ಭಗವಾನ್ ಧನ್ವಂತರಿಯು ಅಮೃತ ಕಲಶದೊಂದಿಗೆ ಇಳಿದು ಬಂದಿದ್ದರಿಂದ ಈ ದಿನ ಪಾತ್ರೆಗಳನ್ನು ಖರೀದಿಸುವುದು ವಿಶೇಷ.