ಅರಕಲಗೂಡು: ಸೇವಂತಿಗೆ ಹೂವಿಗೆ ಬೆಲೆ ಇಲ್ಲದೆ ಕಂಗೆಟ್ಟ ಬೆಳೆಗಾರರು ಜಮೀನಿನಲ್ಲಿ ಹೂವಿನ ಗಿಡಗಳನ್ನು ಉತ್ತು ಕಣ್ಣೀರಿಡುವ ಪರಿಸ್ಥಿತಿ ಬಂದೊದಗಿದೆ.
ವರಮಹಾಲಕ್ಷ್ಮೀ ಹಬ್ಬದ ಸಮಯದಲ್ಲಿ ಉತ್ತಮ ಬೆಲೆ ಕಂಡಿದ್ದ ಹೂವು ಇದೀಗ ಪಾತಾಳಕ್ಕೆ ದರ ಕುಸಿದಿದ್ದು ಹೂ ಬೆಳೆದ ತಪ್ಪಿಗೆ ಕೈ ಸುಟ್ಟುಕೊಳ್ಳುವ ಸಂಕಷ್ಟದ ಸ್ಥಿತಿ ಅನುಭವಿಸುವಂತಾಗಿದೆ. ಮಾರುಕಟ್ಟೆಯಲ್ಲಿ ಒಂದು ಮಾರು ಸೇವಂತಿಗೆ ಹೂವಿನ ಬೆಲೆ 10 ರೂಪಾಯಿಗಿಂತ ಕಡಿಮೆ ದರದಲ್ಲಿ ಮಾರಾಟವಾಗುತ್ತಿದ್ದು, ಕೇಳುವವರೇ ಇಲ್ಲದ ಸ್ಥಿತಿ ಎದುರಾಗಿದೆ.
ಸೇವಂತಿಗೆ ಹೂವಿಗೆ ಬೆಲೆ ಇಲ್ಲದ ಕಾರಣ ಅನೇಕ ಬೆಳೆಗಾರರು ಹೊಲದಲ್ಲಿ ಹುಲುಸಾಗಿ ಬೆಳೆದಿದ್ದ ಗಿಡಗಳನ್ನೇ ಹೂವು ಸಮೇತ ಟ್ರಾೃಕ್ಟರ್‌ನಲ್ಲಿ ಉಳುಮೆ ಮಾಡಿ ನೆಲಸಮಗೊಳಿಸುತ್ತಿದ್ದಾರೆ. ಗಿಡದಲ್ಲಿ ನಳ ನಳಿಸುತ್ತಿದ್ದ ಸೇವಂತಿ ಹೂವು ಬೆಳೆಗಾರರ ಕಣ್ಣೆದುರಲ್ಲೇ ಮಣ್ಣುಪಾಲಾಗುತ್ತಿದೆ.
ಶನಿವಾರ ತಾಲೂಕಿನ ದುಮ್ಮಿ ಗ್ರಾಮದ ರೈತ ಚಂದ್ರಶೇಖರ್ ಎಂಬುವವರು ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸೇವಂತಿಗೆ ಗಿಡಗಳನ್ನು ಹೂವು ಸಮೇತ ಟ್ರಾೃಕ್ಟರ್‌ನಲ್ಲಿ ಉಳುಮೆ ಮಾಡಿ ನಾಶಪಡಿಸಿದರು.
ಏಳೂವರೆ ಸಾವಿರ ಗಿಡಗಳನ್ನು ನೆಟ್ಟು ಬೆವರು ಸುರಿಸಿ ಬೆಳೆದಿದ್ದೆ. ನೀರು ಹಾಯಿಸಿ ಸಾವಿರಾರು ರೂ.ವ್ಯಯಿಸಿ ಬೆಳೆದಿದ್ದ ಹೂವು ನನ್ನ ಜೇಬು ತುಂಬಿಸುವ ಬದಲು ಆರ್ಥಿಕವಾಗಿ ಸಂಕಷ್ಟಕ್ಕೀಡು ಮಾಡಿದೆ ಎಂದು ಅಳಲು ತೋಡಿಕೊಂಡರು.
ಗೌರಿ-ಗಣೇಶ ಹಬ್ಬದ ಸಮಯದಲ್ಲೂ ಸೇವಂತಿ ಹೂವಿಗೆ ಬೆಲೆ ಸಿಗಲಿಲ್ಲ. ಉತ್ತಮ ಲಾಭ ಗಳಿಸುವ ಆಸೆಯಿಂದ ಅಪಾರ ಶ್ರಮ ವಹಿಸಿ ಬೆಳೆದಿದ್ದ ಬೆಳೆ ನಮ್ಮ ಕುಟುಂಬವನ್ನು ಸಾಲದ ಶೂಲಕ್ಕೆ ತಳ್ಳಿತು ಎಂದು ಹೂವು ಬೆಳೆಗಾರರು ಹೇಳುತ್ತಾರೆ.
ತಾಲೂಕಿನ ಕಸಬಾ, ಕೊಣನೂರು, ರಾಮನಾಥಪುರ, ಕೇರಳಾಪುರ ಭಾಗದಲ್ಲಿ ಅಪಾರ ಬೆಳೆಗಾರರು ಬದುಕಿಗಾಗಿ ಹೂವು ಬೆಳೆಯನ್ನೇ ನೆಚ್ಚಿಕೊಂಡಿದ್ದಾರೆ. ಪ್ರತಿನಿತ್ಯ ಪಟ್ಟಣ ಪ್ರದೇಶಗಳಿಗೆ ತೆರಳಿ ಹೂವು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಇದೀಗ ಹೂವಿಗೆ ಬೆಲೆಯಿಲ್ಲದೆ ಪರಿತಪಿಸುವಂತಾಗಿದೆ.