ನ್ಯೂಸ್

ಅಪಾಯ ಎದುರಿಸುವ ಬಯಕೆ ಇದ್ದರೆ ಧ್ವಂಸಗೊಳಿಸಿ; ಬುಲ್ಡೋಜರ್ ಕ್ರಮದ ಕುರಿತು ಸರ್ಕಾರಕ್ಕೆ ಸುಪ್ರೀಂ ಪರೋಕ್ಷ ಎಚ್ಚರಿಕೆ

ನವದೆಹಲಿ: ಉತ್ತರಪ್ರದೇಶದ ಬಹ್ರೖೆಚ್​ನಲ್ಲಿ ಕೋಮುಘರ್ಷಣೆ ನಂತರ ಕಟ್ಟಡ ನೆಲಸಮ ನೋಟಿಸ್ ವಿರುದ್ಧ ಸಲ್ಲಿಸಿದ ಅರ್ಜಿ ಆಲಿಸಿದ ಸುಪ್ರೀಂಕೋರ್ಟ್, ಬುಲ್ಡೋಜರ್ ಮೂಲಕ ಯಾವುದೇ ಧ್ವಂಸ ಕಾರ್ಯಾಚರಣೆ ನಡೆಸಿದರೆ ಕ್ರಮಕೈಗೊಳ್ಳಲಾಗುವುದು ಎಂದು ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರಕ್ಕೆ ಪರೋಕ್ಷ ಎಚ್ಚರಿಕೆ ನೀಡಿದೆ.

ಸುಪ್ರೀಂಕೋರ್ಟ್​ನ ನಿರ್ದೇಶನಗಳನ್ನು ಉಲ್ಲಂಘಿಸುವುದರಿಂದ ಉಂಟಾಗುವ ಅಪಾಯ ಎದುರಿಸುವ ಬಯಕೆ ಇದ್ದರೆ, ಆ ಆಯ್ಕೆ ಸರ್ಕಾರಕ್ಕೆ ಬಿಟ್ಟದ್ದು ಎಂದಿರುವ ನ್ಯಾಯಪೀಠ, ಅಕ್ರಮ ಕಟ್ಟಡಗಳ ನೆಲಸಮಕ್ಕೆ ನೊಟೀಸ್ ನೀಡಿದ್ದರೆ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದೂ ತಿಳಿಸಿದೆ. ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್ ಅವರ ಪೀಠವು ಮುಂದಿನ ವಿಚಾರಣೆಗೆ ಮುನ್ನ ಯಾವುದೇ ಕ್ರಮಕೈಗೊಳ್ಳದಂತೆ ಉತ್ತರಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.

ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಸಿಯು ಸಿಂಗ್, ಅ.13ರ ಹಿಂಸಾಚಾರದ ನಂತರ ಸ್ಥಳೀಯ ಅಧಿಕಾರಿಗಳು ಕಟ್ಟಡ ನೆಲಸಮ ಕುರಿತ ನೋಟಿಸ್​ಗಳನ್ನು ಹೊರಡಿಸಿದ್ದಾರೆ ಮತ್ತು 3 ದಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಳಿದ್ದಾರೆ ಎಂದರು. ಪ್ರಮುಖ ಅರ್ಜಿದಾರರಾಗಿರುವ ತಂದೆ ಮತ್ತು ಸಹೋದರರು ಪೊಲೀಸರಿಗೆ ಶರಣಾಗಿದ್ದಾರೆ. ಅ.17ರಂದು ನೋಟಿಸ್ ನೀಡಲಾಗಿತ್ತು. ಈ ನೊಟೀಸ್​ನ್ನು 18ರ ಸಂಜೆ ಅಂಟಿಸಲಾಯಿತು. ನಾವು ಭಾನುವಾರ ವಿಚಾರಣೆಗೆ ಕೋರಿದ್ದೇವೆ. ಆದರೆ ವಿಚಾರಣೆ ನಡೆದಿರಲಿಲ್ಲ. ಕೆಲವರು ಈಗಾಗಲೇ ಉಚ್ಚ ನ್ಯಾಯಾಲಯವನ್ನು ಸಂರ್ಪಸಿದ್ದಾರೆ ಎಂದು ವಿವರಿಸಿದ್ದಾರೆ.

ತೀರ್ಪು ಕಾದಿರಿಸಿದ ನ್ಯಾಯಾಲಯ: ಜಾತ್ಯತೀತ ತತ್ವಗಳನ್ನು ಉಲ್ಲಂಘಿಸಿದೆ ಎಂಬ ಕಾರಣಕ್ಕಾಗಿ ಉತ್ತರಪ್ರದೇಶದ 2004ರ ಮದರಸಾಗಳ ಕುರಿತ ಕಾನೂನನ್ನು ಅಸಾಂವಿಧಾನಿಕ ಎಂದು ತೀರ್ಪು ನೀಡಿದ್ದ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ತೀರ್ಪನ್ನು ಸುಪ್ರೀಂಕೋರ್ಟ್ ಕಾದಿರಿಸಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಎರಡು ದಿನಗಳ ಕಾಲ ವಾದ-ಪ್ರತಿವಾದ ಆಲಿಸಿತು. ಉತ್ತರ ಪ್ರದೇಶ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ವಾದ ಮಂಡಿಸಿದ್ದರು.

ಮುಸ್ಲಿಂ ಪುರುಷರಿಗಿದೆ ಬಹುವಿವಾಹ ಅವಕಾಶ: ಮುಸ್ಲಿಂ ವೈಯಕ್ತಿಕ ಕಾನೂನುಗಳಲ್ಲಿ ಬಹá-ವಿವಾಹಗಳಿಗೆ ಅವಕಾಶ ಇರುವುದರಿಂದ ಮುಸ್ಲಿಂ ಪುರುಷರು ಒಂದಕ್ಕಿಂತ ಹೆಚ್ಚು ಮದುವೆ ನೋಂದಾಯಿಸಿಕೊಳ್ಳಬಹುದು ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ತನ್ನ ಮೂರನೇ ಪತ್ನಿ ಜತೆ ಮದುವೆಯ ನೋಂದಣಿಗೆ ಅನುಮತಿ ಕೋರಿ ವ್ಯಕ್ತಿಯೊಬ್ಬ ಸಲ್ಲಿಸಿದ ಅರ್ಜಿಯನ್ನು ಅ.15ರಂದು ಇತ್ಯರ್ಥಪಡಿಸುವ ವೇಳೆ ನ್ಯಾಯಮೂರ್ತಿಗಳಾದ ಬಿ.ಪಿ. ಕೊಲಾಬಾವಾಲಾ ಮತ್ತು ಸೋಮಶೇಖರ್ ಸುಂದರೇಶನ್ ಇದ್ದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ಆಲ್ಜೀರಿಯಾದ ಒಬ್ಬ ಮಹಿಳೆ ಜತೆ ತನ್ನ 3ನೇ ವಿವಾಹದ ನೋಂದಣಿ ಕೋರಿ ಮುಸ್ಲಿಂ ವ್ಯಕ್ತಿ ಕಳೆದ ವರ್ಷ ಫೆಬ್ರವರಿಯಲ್ಲಿ ಸಲ್ಲಿಸಿರುವ ಅರ್ಜಿಯನ್ನು ಇತ್ಯರ್ಥ ಪಡಿಸುವಂತೆ ಥಾಣೆ ಮುನಿಸಿಪಲ್ ಕಾರ್ಪೆರೇಷನ್​ನ ವಿವಾಹ ನೋಂದಣಿ ಉಪ ಅಧಿಕಾರಿಗೆ ಪೀಠ ನಿರ್ದೇಶಿಸಿತು.

ಐದು ವರ್ಷಗಳಿಂದ ತೀರ್ಪು ನೀಡುತ್ತಿದ್ದ ನಕಲಿ ಜಡ್ಜ್ ಸೆರೆ!: ನಕಲಿ ನ್ಯಾಯಾಲಯ ಸೃಷ್ಟಿಸಿ, ಐದು ವರ್ಷಗಳಿಂದ ಜಡ್ಜ್ ಎಂದು ಹೇಳಿಕೊಂಡು ತೀರ್ಪು ನೀಡುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಮೊರಿಸ್ ಸ್ಯಾಮುವೆಲ್ ಕ್ರಿಸ್ತಿಯನ್ ಎಂಬಾತ ಬಂಧಿತ. ಈತ ಗುಜರಾತ್​ನ ಗಾಂಧಿನಗರ ಪ್ರದೇಶದಲ್ಲಿ 2019ರಿಂದಲೂ ಜಡ್ಜ್ ಎಂದು ಬಿಂಬಿಸಿಕೊಂಡು ಭೂ ವ್ಯಾಜ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ತೀರ್ಪು ನೀಡುತ್ತ ಬಂದಿದ್ದ.

ಮೊರಿಸ್ ಭೂವಿವಾದಕ್ಕೆ ಸಿಲುಕಿದವರನ್ನು ಗುರುತಿಸಿ ಭಾರಿ ದಂಡದ ಬದಲು ತ್ವರಿತ ಶುಲ್ಕದ ಭರವಸೆ ನೀಡಿ ಬಲೆಗೆ ಕೆಡವಿಕೊಳ್ಳುತ್ತಿದ್ದ. ನಂತರ ತನ್ನದೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡುತ್ತಿದ್ದ. ಈತನ ಸಹಚರರು ನ್ಯಾಯಾಲಯ ಸಿಬ್ಬಂದಿ ರೀತಿ ವರ್ತಿಸುತ್ತಿದ್ದರು. ಇತ್ತೀಚೆಗೆ ಭೂವಿವಾದವೊಂದಕ್ಕೆ ಸಂಬಂಧಿಸಿ ತನ್ನ ಕಕ್ಷಿದಾರನನ್ನು ಸರ್ಕಾರದ ಅಧಿಕೃತ ಮಧ್ಯಸ್ಥಿಕೆದಾರ ಎಂದು ನೇಮಿಸಿ, ಕಕ್ಷಿದಾರನ ಹೆಸರನ್ನು ಸರ್ಕಾರಿ ಭೂಮಿಯ ದಾಖಲೆಯಲ್ಲಿ ಸೇರಿಸುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದ. ಬಳಿಕ ಜಿಲ್ಲಾಧಿಕಾರಿ ಆದೇಶ ಪಾಲಿಸುವಂತೆ ಇನ್ನೊಬ್ಬ ವಕೀಲರ ಮೂಲಕ ಸಿಟಿ ಸಿವಿಲ್ ಕೋರ್ಟ್​ಗೆ ಮನವಿ ಸಲ್ಲಿಸಿ, ತನ್ನ ನಕಲಿ ಆದೇಶವನ್ನು ಲಗತ್ತಿಸಿದ್ದ.

ಅದನ್ನು ಪರಿಶೀಲಿಸಿದ ಕೋರ್ಟ್ ರಿಜಿಸ್ಟ್ರಾರ್ ಹಾರ್ದಿಕ್ ದೇಸಾಯಿ ಅವರಿಗೆ ಅದು ನಕಲಿ ಆದೇಶ ಎಂದು ತಿಳಿದು ಪೊಲೀಸರಿಗೆ ದೂರು ನೀಡಿದ್ದರು. ನಂತರದ ತನಿಖೆಯಲ್ಲಿ ಮೊರಿಸ್ ನಕಲಿ ಜಡ್ಜ್ ಎಂಬುದು ತಿಳಿದುಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. 2019ರಿಂದಲೂ ಹೀಗೆ ವಂಚಿಸುತ್ತಿದ್ದ ಮೊರಿಸ್ ವಿರುದ್ಧ 2015ರಲ್ಲಿ ಮಣಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ ಕಂಡುಬಂದಿದೆ.