ಸಾಗರ: ಪ್ರತಿದಿನ ಸಂಜೆ ಎಡೆಬಿಡದೆ ಮಳೆ ಬೀಳುತ್ತಿದ್ದರೂ ಲೆಕ್ಕಿಸದೆ ಜನತೆ ದೀಪಾವಳಿ ಹಬ್ಬಕ್ಕಾಗಿ ಭರಪೂರ ಖರೀದಿಯಲ್ಲಿ ತೊಡಗಿದ್ದಾರೆ.
ಸಾಗರದ ಮಾರುಕಟ್ಟೆಗೆ ಹಾವೇರಿ ಜಿಲ್ಲೆಯಿಂದ ಚೆಂಡು ಹೂವು ಲಗ್ಗೆಯಿಟ್ಟಿದೆ. ಉಳಿದೆಲ್ಲ ಹೂವುಗಳಿಗೆ ಹೋಲಿಸಿದರೆ ದುಬಾರಿ ಅಲ್ಲದ ಚೆಂಡು ಹೂವಿನ ಮಾಲೆಗೆ ಜನ ಆಕರ್ಷಿತರಾಗಿದ್ದಾರೆ. 60ಕ್ಕೂ ಹೆಚ್ಚು ಮಾರಾಟಗಾರರು ಎರಡು ಟನ್‌ಗಳಿಗೂ ಅಧಿಕ ಚೆಂಡು ಹೂವುಗಳನ್ನು ಸಾಗರಕ್ಕೆ ತಂದಿದ್ದಾರೆ. ನಗರದ ಚಾಮರಾಜಪೇಟೆಯ ಬೀದಿಯ ಇಕ್ಕೆಲಗಳಲ್ಲಿ ಮಾರಾಟಕ್ಕೆ ಹರಡಿರುವ ಹೂವು ರಸ್ತೆಯನ್ನೇ ಸಿಂಗರಿಸಿದಂತೆ ಕಾಣುತ್ತಿದೆ.
ದನಕರುಗಳಿಗೆ, ಕೊಟ್ಟಿಗೆಗೆ, ಅಲಂಕಾರಕ್ಕೆ ಬೇಕಾದ ಬಣ್ಣಗಳ ಖರೀದಿ. ಅವುಗಳಿಗೆ ಕಟ್ಟುವ ಗೆಜ್ಜೆ, ಕಣ್ಣಿ, ಗಂಟೆ ಮುಂತಾದ ಸಾಮಗ್ರಿ ವ್ಯಾಪಾರ ಎಂದಿನಂತೆ ನಡೆದಿದೆ. ಮೆಣಸಿನ ಕಾಯಿ, ನಿಂಬೆಹಣ್ಣು ಪೊಣಿಸಿದ ಹಾರಗಳ ಮಾರಾಟ ಈ ಬಾರಿ ಹೆಚ್ಚು ಆಕರ್ಷಿತವಾಗಿದೆ. ದೇಶೀಯ ವಸ್ತುಗಳು, ಹಣತೆ ಖರೀದಿಗೆ ಜನ ಮುಂದಾಗಿದ್ದಾರೆ. ಆಯನೂರು, ಹಾರನಹಳ್ಳಿ, ಸೊರಬ, ಶಿವಮೊಗ್ಗ ಗ್ರಾಮಾಂತರ ಭಾಗದ ಕುಂಬಾರರು ತಯಾರಿಸಿದ ವಸ್ತುಗಳ ಮಾರಾಟ ನಡೆದಿದೆ.
ಚೆಂಡು ಹೂಗಳನ್ನು ನಮ್ಮ ಹೊಲದಲ್ಲಿ ಬೆಳೆಯುತ್ತೇವೆ. ಕೆಲವರು ಬೇರೆ ಹೊಲಗಳಲ್ಲಿ ಬೆಳೆದ ಚೆಂಡು ಹೂಗಳನ್ನು ಖರೀದಿಸಿ ತಂದು ಮಾರಾಟ ಮಾಡುತ್ತಾರೆ. ಶಿವಮೊಗ್ಗ ಜಿಲ್ಲಾದ್ಯಂತ ಹಾವೇರಿ ಜಿಲ್ಲೆಯ ಚೆಂಡು ಹೂವಿನ ಬೆಳೆಗಾರರು ಪ್ರತಿ ವರ್ಷ ದೀಪಾವಳಿಯಲ್ಲಿ ಮಾರಾಟ ಮಾಡುತ್ತೇವೆ. ಈ ಬಾರಿ ಮಳೆಯಿಂದ ಕೊಂಚ ಅವಾಂತರ ಸೃಷ್ಟಿಯಾದರೂ ಹೂವಿನ ಇಳುವರಿ ಹೆಚ್ಚಿದೆ. ಸಾಗರ ತಾಲೂಕಿನಲ್ಲಿ ನಿರೀಕ್ಷಿತ ವ್ಯಾಪಾರವಾಗಿಲ್ಲ. ಇನ್ನೂ ಮೂರ‌್ನಾಲ್ಕು ದಿನಗಳಲ್ಲಿ ಒಳ್ಳೆಯ ವ್ಯಾಪಾರ ಆಗುವ ನಿರೀಕ್ಷೆ ಇದೆ ಎನ್ನುತ್ತಾರೆ ಹಾವೇರಿಯ ಚೆಂಡು ಹೂವಿನ ಬೆಳೆಗಾರ ಮುನಾವರ್.