- ಪ್ರಭಾಸ್ ನಟಿಸುತ್ತಿರುವ ಆ್ಯಕ್ಷನ್-ಡ್ರಾಮಾ 'ಸ್ಪಿರಿಟ್'
- ಸ್ಪಿರಿಟ್ ಚಿತ್ರಕ್ಕೆ ತ್ರಿಪ್ತಿ ನಾಯಕಿ
- ಪ್ರಭಾಸ್ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್ ಜತೆ ನಟಿಸುವ ಆಸೆ
ಆಂಧ್ರಪ್ರದೇಶ: 'ಅರ್ಜುನ್ ರೆಡ್ಡಿ' ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಮತ್ತು ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ನಟಿಸುತ್ತಿರುವ ಆ್ಯಕ್ಷನ್-ಡ್ರಾಮಾ 'ಸ್ಪಿರಿಟ್' ಸದ್ಯ ಹಲವು ವಿಷಯಗಳಿಂದ ಭಾರತೀಯ ಚಲನಚಿತ್ರೋದ್ಯಮದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಹಿಂದೆ ದೀಪಿಕಾ ಪಡುಕೋಣೆ ಮುಂದಿಟ್ಟ ಸಂಭಾವನೆ ಮತ್ತು ಷರತ್ತುಗಳ ವಿಚಾರಕ್ಕೆ ಚಿತ್ರತಂಡ ಭಾರೀ ವಿರೋಧ ವ್ಯಕ್ತಪಡಿಸಿತ್ತು. ನಟಿಯ ಬೇಡಿಕೆಗಳಿಂದ ಕೆರಳಿದ ಸಂದೀಪ್, ಬಾಲಿವುಡ್ನ ಸ್ಟಾರ್ ನಟಿಯನ್ನು ತಮ್ಮ ಬಹುನಿರೀಕ್ಷಿತ ಸಿನಿಮಾದಿಂದ ಹೆಚ್ಚು ಯೋಚಿಸದೆ ಕೈಬಿಟ್ಟರು. 8 ಗಂಟೆಯ ಅವಧಿ ಕೆಲಸ, ದುಬಾರಿ ಸಂಭಾವನೆ ಹಾಗೂ ಷರತ್ತುಗಳನ್ನು ಹಾಕಿದ ದೀಪಿಕಾ ವಿರುದ್ಧ ವಂಗಾ ತೀವ್ರ ಅಸಮಾಧಾನ ಹೊರಹಾಕಿದ್ದರು. ಇದೇ ಕೋಪದಲ್ಲಿ ಅವರು, ದೀಪಿಕಾಗೆ ಟಕ್ಕರ್ ಕೊಡಲು ತಮ್ಮದೇ ಚಿತ್ರದಲ್ಲಿ ನಟಿಸಿದ್ದ ಯುವನಟಿ ತ್ರಿಪ್ತಿ ದಿಮ್ರಿಗೆ 'ಸ್ಪಿರಿಟ್' ನಾಯಕಿಯಾಗಿ ಕಾಣಿಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟರು.
ಬಾಲಿವುಡ್ ಸೆನ್ಸೇಷನ್ ತ್ರಿಪ್ತಿ ದಿಮ್ರಿ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಇತ್ತೀಚೆಗೆ ಅಧಿಕೃತ ಘೋಷಣೆ ಕೂಡ ಹೊರಬಿದ್ದಿತು. ಈ ಹಿಂದಿನಿಂದಲೂ 'ಸ್ಪಿರಿಟ್' ಚಿತ್ರದ ಮೇಲಿನ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಪ್ರಭಾಸ್-ತ್ರಿಪ್ತಿ ಜೋಡಿ ಇದೇ ಮೊದಲ ಬಾರಿಗೆ ಬೆಳ್ಳಿಪರದೆಯ ಮೇಲೆ ಮೂಡಿಬರುತ್ತಿರುವುದು ಸದ್ಯ ನಟನ ಅಭಿಮಾನಿಗಳಿಗೆ ಹಾಗೂ ಸಿನಿಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ. ಹಲವರು ಸಿನಿಮಾಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಚಿತ್ರಕ್ಕೆ ಬೆಂಬಲಿಸುತ್ತಿದ್ದಾರೆ.
ಸಂದೀಪ್ ನಿರ್ದೇಶನದ ಬ್ಲಾಕ್‌ಬಸ್ಟರ್ 'ಅನಿಮಲ್' ಚಿತ್ರದಲ್ಲಿ ತ್ರಿಪ್ತಿ ದಿಮ್ರಿ ಒಂದು ಸಣ್ಣ ಪಾತ್ರದಲ್ಲಿ ನಟಿಸಿದ್ದಾರೆ. ಅಸಲಿಗೆ ಈ ಸಿನಿಮಾದ ನಾಯಕಿ ರಶ್ಮಿಕಾ ಮಂದಣ್ಣ. ಅವರೊಟ್ಟಿಗೆ ಸ್ಕ್ರೀನ್ ಶೇರ್ ಮಾಡಿಕೊಂಡ ತ್ರಿಪ್ತಿಗೆ ಈಗ ಇಷ್ಟು ದೊಡ್ಡ ಆಫರ್ ಸಿಕ್ಕಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ. ಕೇವಲ ಒಂದೇ ಒಂದು ಸಿನಿಮಾದಿಂದ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ನಲ್ಲಿ ಅವಕಾಶ ಗಿಟ್ಟಿಸಿಕೊಂಡ ದಿಮ್ರಿಗೆ ಈಗ ಮತ್ತೊಬ್ಬ ಸ್ಟಾರ್ ನಟನ ಚಿತ್ರದಲ್ಲಿ ನಟಿಸುವ ಆಫರ್ ಸಿಕ್ಕಿದೆಯಂತೆ.
ಪ್ರಸ್ತುತ, ಬಾಲಿವುಡ್‌ನಲ್ಲಿ ಸಖತ್ ಬಿಜಿಯಾಗಿರುವ ತ್ರಿಪ್ತಿ ಕೈಯಲ್ಲಿ ಅರ್ಧ ಡಜನ್ ಚಿತ್ರಗಳಿವೆ. ಟಾಲಿವುಡ್ ಸ್ಟಾರ್ ನಟರೊಂದಿಗೆ ಕೆಲಸ ಮಾಡುವ ಅವರ ಆಸಕ್ತಿ ಇನ್ನೂ ಹೆಚ್ಚಾಗಿದೆ. ಇತ್ತೀಚೆಗೆ, ಒಂದು ಟಾಕ್ ಶೋನಲ್ಲಿ ಮಾತನಾಡಿದ ದಿಮ್ರಿ, "ನನಗೆ ಜೂನಿಯರ್ ಎನ್‌ಟಿಆರ್ ಅವರೊಂದಿಗೆ ಕೆಲಸ ಮಾಡುವ ಆಸೆ. ಅವರ ಎನರ್ಜಿ ಮತ್ತು ಸ್ಕ್ರೀನ್ ಪ್ರೆಸೆನ್ಸ್ ನನಗೆ ತುಂಬಾ ಇಷ್ಟ" ಎಂದರು. ಸದ್ಯ ನಟಿಯ ಈ ಒಂದು ಮಾತು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಎನ್‌ಟಿಆರ್-ತ್ರಿಪ್ತಿ ಕಾಂಬೊ ನಿಜಕ್ಕೂ ತೆರೆಮೇಲೆ ಮೋಡಿ ಮಾಡಬಹುದು" ಎಂದು ನೆಟ್ಟಿಗರು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).