ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ರಾಜಭವನದ ನಡೆ ಈಗ ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದು, ರಾಜ್ಯಪಾಲರ ‘ವಿವೇಚನಾಧಿಕಾರ’ ಏನಾಗಬಹುದೆಂಬ ಬಗ್ಗೆ ವ್ಯಾಪಕ ಚರ್ಚೆ ಆರಂಭವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಗೆ ಹಂಚಿಕೆಯಾದ 14 ನಿವೇಶನ ವಿಚಾರವಾಗಿ ಕಾನೂನು ಹೋರಾಟ ನಡೆಸುವ ಉದ್ದೇಶದಿಂದ ಅಭಿಯೋಜನೆಗೆ ಅವಕಾಶ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ರಾಜ್ಯಪಾಲರಿಗೆ ಸಲ್ಲಿಸಿರುವ ಕೋರಿಕೆಗೆ ಈಗ ರಾಜ್ಯಪಾಲರು ತಮ್ಮ ಅಭಿಪ್ರಾಯ ತಿಳಿಸಬೇಕು.
ಅದಕ್ಕೂ ಮುನ್ನ ಮುಖ್ಯಮಂತ್ರಿಯವರಿಗೆ ನೋಟಿಸ್ ನೀಡಿ, ಈ ಪ್ರಕರಣದಲ್ಲಿ ನಿಮ್ಮ ವಿರುದ್ಧ ಅಭಿಯೋಜನೆಗೆ ಅವಕಾಶ ಕೊಡಬಾರದೇಕೆ ಎಂದು ಏಳು ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿದ್ದರು. ಗುರುವಾರ ಈ ಗಡುವು ಮುಕ್ತಾಯವಾಗಿದ್ದು,ಮಂತ್ರಿ ಪರಿಷತ್ ತೆಗೆದುಕೊಂಡ ‘ನೋಟಿಸ್ ವಾಪಸ್ ಪಡೆಯಬೇಕೆಂಬ’ ನಿರ್ಣಯವನ್ನು ಮುಖ್ಯಮಂತ್ರಿಯವರು ಉತ್ತರ ರೂಪದಲ್ಲಿ ಕಳಿಸಿಕೊಟ್ಟಿದ್ದಾರೆ.
ಅಭಿಯೋಜನೆಗೆ ಅವಕಾಶ ಕೊಡಲು ಬರುವುದಿಲ್ಲ ಎಂದು ಹಲವು ಕಾರಣಗಳನ್ನು ಉತ್ತರದಲ್ಲಿ ಉಲ್ಲೇಖಿಸಲಾಗಿದೆ. ಮುಖ್ಯಮಂತ್ರಿಯವರ ಸಹಿ, ಶಿಾರಸು ಪತ್ರ, ಸಭೆಯ ನಡಾವಳಿ ಯಾವುದೂ ಇಲ್ಲ ಎಂದು ವಾದಿಸಲಾಗಿದೆ. ಈ ಮಧ್ಯೆ, ರಾಜ್ಯಪಾಲರು ತಮ್ಮ ವಿವೇಚನಾಧಿಕಾರ ಬಳಸಲು ಅವಕಾಶವಿದೆ, ಮಂತ್ರಿ ಪರಿಷತ್ ನಿರ್ಣಯವನ್ನೇ ಆಧಾರವಾಗಿಟ್ಟುಕೊಂಡು ತೀರ್ಮಾನ ಕೊಡಬೇಕಾಗಿಲ್ಲ ಎಂಬ ಚರ್ಚೆ ಕಾಂಗ್ರೆಸ್‌ನಲ್ಲೇ ಇದೆ. ಹೀಗಾಗಿ ಅವರ ವಿವೇಚನಾಧಿಕಾರ ಏನಾಗಿರುತ್ತದೆ ಎಂಬ ಕುತೂಹಲವಿದೆ.
ಇನ್ನೊಂದು ಬೆಳವಣಿಗೆಯಲ್ಲಿ ರಾಜಭವನ ಸರ್ಕಾರದ ಕಡೆಯಿಂದ ಇನ್ನಷ್ಟು ಮಾಹಿತಿ ಬಯಸುವ ಸಾಧ್ಯತೆ ಇದೆ. ಜತೆಗೆ ರಾಜ್ಯಪಾಲರು ತಮ್ಮ ಅಭಿಪ್ರಾಯ ನೀಡುವ ಮುನ್ನ ಅಡ್ವೋಕೇಟ್ ಜನರಲ್ ಅವರನ್ನು ರಾಜಭವನಕ್ಕೆ ಕರೆಸಿ ಖುದ್ದು ಹಾಗೂ ಲಿಖಿತ ರೂಪದಲ್ಲಿ ಅಭಿಪ್ರಾಯಕೊಳ್ಳುವರೆಂದು ಹೇಳಲಾಗುತ್ತಿದೆ. ಈ ಪ್ರಕ್ರಿಯೆ ಇದೇ ವಾರದಲ್ಲಿ ನಡೆಯಬಹುದು.