ನ್ಯೂಸ್

ಬಾಲಿವುಡ್​ ಸ್ಟೈಲ್​ನಲ್ಲಿ ಬೈಕ್ ಸ್ಟಂಟ್​: ನವಜೋಡಿಯ ವಿಭಿನ್ನ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ವಿಡಿಯೋ ವೈರಲ್​

ನವದೆಹಲಿ: ಮದುವೆಗೂ ಮುನ್ನ ಅಥವಾ ನಂತರ ಸಮಯ ಯಾವುದೇ ಇರಲಿ ಇಂದಿನ ದಿನದಲ್ಲಿ ವೆಡ್ಡಿಂಗ್​ ಫೋಟೋಶೂಟ್​ ನವ ಜೋಡಿಯ ಅವಿಭಾಜ್ಯ ಅಂಗವಾಗಿದೆ. ಬಹುತೇಕ ಜೋಡಿಗಳು ತಮ್ಮ ವೆಡ್ಡಿಂಗ್​ ಫೋಟೋ ಮತ್ತು ವಿಡಿಯೋಗಳು ತುಂಬಾ ವಿಭಿನ್ನವಾಗಿರಬೇಕೆಂಬ ಕನಸನ್ನೂ ಹೊಂದಿರುತ್ತಾರೆ. ಸಾಧ್ಯವಾದಷ್ಟು ಸುಂದರವಾದ ತಾಣಗಳಲ್ಲಿ ಸೆರೆಹಿಡಿಯಬೇಕೆಂದು ಬಯಸುತ್ತಾರೆ. ಇನ್ನು ಕೆಲವು ಜೋಡಿ ತುಂಬಾ ವಿಭಿನ್ನವಾಗಿರಬೇಕೆಂದು ಸಾಹಸಕ್ಕೂ ಕೈಹಾಕುತ್ತಾರೆ. ಅದಕ್ಕೆ ತಾಜಾ ಉದಾಹಣೆಯಂತಿದೆ ಈ ವಿಡಿಯೋ.

ನವಜೋಡಿಯೊಂದು ಬಾಲಿವುಡ್​ ಸ್ಟೈಲ್​ನಲ್ಲಿ ಬೈಕ್​ ಸಾಹಸ ಮಾಡುವ ಪರಿಕಲ್ಪನೆಯಲ್ಲಿ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬೆಸ್ಟ್​ ಆಫ್​ ದಿ ಬೆಸ್ಟ್​ ಹೆಸರಿನ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಅಪ್​ಲೋಡ್​ ಆಗಿದೆ. ವಿಡಿಯೋದಲ್ಲಿ ಮದುವೆಯ ಸಾಂಪ್ರದಾಯಿಕ ಉಡುಗೆಯಲ್ಲಿ ಬೈಕ್​ ಮೇಲೆ ಕುಳಿತು ಸಾಹಸ ಮಾಡುವ ಮೂಲಕ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ಹಾಗಂತ ನವಜೋಡಿ ನಿಜವಾಗಿಯೂ ಸಾಹಸ ಮಾಡಿಲ್ಲ. ಕ್ರೇನ್​ ಮತ್ತು ರೋಪ್​ನ ನೆರವಿನಿಂದ ಈ ರೀತಿಯ ಫೋಟೋಶೂಟ್​ ಮಾಡಿಸಿದ್ದಾರೆ.

ಅಡ್ಡಲಾಗಿ ಕಾರೊಂದನ್ನು ನಿಲ್ಲಿಸಿ, ಬೈಕ್​ಗೆ ರೋಪ್​ ಕಟ್ಟಿ ಕ್ರೇನ್​ ಮೂಲಕ ಕಾರಿನ ಮೇಲಿಂದ ನವಜೋಡಿ ಬೈಕ್​ ಹಾರಿಸುತ್ತಿರುವಂತೆ ವಿಭಿನ್ನವಾಗಿ ಫೋಟೋಶೂಟ್​ ಮಾಡಿಸಲಾಗಿದೆ. ವಿಡಿಯೋವನ್ನು ಅ.27ರಂದು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಲಾಗಿದ್ದು, ಈವರೆಗೂ 9 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ವಿಡಿಯೋ ನೋಡಿ ಫಿದಾ ಆಗಿರುವ ನೆಟ್ಟಿಗರು ಕಾಮೆಂಟ್​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)