ಕಂಪಲಾಪುರ ಕ್ಲಸ್ಟರ್‌ನ ಕಿರುನೆಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಾನಪದ ಉತ್ಸವದಲ್ಲಿ ಕಲಾತಂಡಗಳ ಮೆರವಣಿಗೆ ನಡೆಯಿತು. ಬಸವರಾಜ್, ಯಶೋದಮ್ಮ, ಸುದರ್ಶನ್, ಗಣೇಶ್, ಶ್ರೀಧರ್ ಇತರರಿದ್ದರು. 
ನ್ಯೂಸ್

ದೇಸಿ ಕಲೆಗಳು ಮರೆಯಾಗುತ್ತಿವೆ

ಕಂಪಲಾಪುರ: ಇತ್ತೀಚಿನ ದಿನಗಳಲ್ಲಿ ದೇಸಿ ಕಲೆಗಳು ಮರೆಯಾಗುತ್ತಿರುವುದು ಬೇಸರದ ಸಂಗತಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ್ ಅಭಿಪ್ರಾಯಪಟ್ಟರು.

ಕಂಪಲಾಪುರ ಕ್ಲಸ್ಟರ್‌ನ ಕಿರುನೆಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಾನಪದ ಉತ್ಸವ ಕಾರ್ಯಕ್ರಮವನ್ನು ರಾಗಿ ಬೀಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಶಾಲೆಗಳು ದೇವಾಲಯ ಇದ್ದಂತೆ. ಶಿಕ್ಷಕರು ಪೂಜಾರಿಗಳಿದ್ದಂತೆ. ಇದು ಸರಿ ಇದ್ದಾಗ ಇಂತಹ ಗ್ರಾಮೀಣ ಕಲಾ ವೈಭವ ಅನಾವರಣಗೊಳ್ಳುತ್ತದೆ. ಈ ಶಾಲೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಾಲೆ. ಅತ್ಯುತ್ತಮ ಎಸ್‌ಡಿಎಂಸಿ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದುಕೊಂಡಿದೆ. ಇದು ನಿಜಕ್ಕೂ ಶ್ಲಾಘನೀಯ ಎಂದರು.

ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಪ್ರಶಾಂತ್ ಮಾತನಾಡಿ, ಶಾಲೆಯಲ್ಲಿ ಹಮ್ಮಿಕೊಂಡ ಇಂತಹ ಕಾರ್ಯಕ್ರಮವನ್ನು ನೋಡಿದರೆ ದಸರಾ ವೈಭವ ನೆನಪಾಗುತ್ತದೆ. ಕನ್ನಡದ ಕಂಪು ಸೂಸುವ ಬಾವುಟಗಳು, ತಳಿರು-ತೋರಣಗಳು ಕಣ್ಣು ಕಟ್ಟುವ ರೀತಿ ಎದ್ದುಕಾಣುತ್ತವೆ. ಮೊಬೈಲ್ ಗೀಳಿನಿಂದ ದೇಸಿ ಸಂಸ್ಕೃತಿ ಮರೆಯಾಗುತ್ತಿದೆ. ನಾಳಿನ ಜನತೆಗೆ ಕೊಡುಗೆಯಾಗಿ ನೀಡಲು ಜಾನಪದ ಕಲೆಗಳನ್ನು ಉಳಿಸಬೇಕಿದೆ ಎಂದರು.

ನಂದಿಧ್ವಜ, ವೀರಗಾಸೆ, ಹುಲಿವೇಷ , ಗೊರವರ ಕುಣಿತ ಮುಂತಾದ ಕಲಾತಂಡಗಳು ಜಾನಪದ ಉತ್ಸವದಲ್ಲಿ ಪ್ರೇಕ್ಷಕರನ್ನು ರಂಜಿಸಿದವು. ಗ್ರಾಪಂ ಅದ್ಯಕ್ಷೆ ಯಶೋದಮ್ಮ, ಸಿಆರ್‌ಪಿಗಳಾದ ಸುದರ್ಶನ್, ಗಣೇಶ್, ಶಾಲೆಯ ಮುಖ್ಯಶಿಕ್ಷಕ ಶ್ರೀಧರ್, ಎಸ್‌ಡಿಎಂಸಿ ಅಧ್ಯಕ್ಷ ಶ್ರೀನಾಥ್, ಕೆಂಪೇಗೌಡ, ನಿಸಾರ್ ಅಹಮದ್ ಸೇರಿದಂತೆ ಶಿಕ್ಷಕ ಶಿಕ್ಷಕಿಯರು, ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.