ನ್ಯೂಸ್

ಶ್ರೀರಾಮನ ಬಗ್ಗೆ ಅವಹೇಳನಕಾರಿ ಪೋಸ್ಟ್, ಕಿಡಿಗೇಡಿ ಬಂಧನ

ದೇವದುರ್ಗ(ರಾಯಚೂರು): ಮರ್ಯಾದೆ ಪುರುಷ ಶ್ರೀರಾಮನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ಪೋಸ್ಟ್ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅನ್ಯಕೋಮಿನ ಯುವಕನೊಬ್ಬ ಶ್ರೀರಾಮ ಹಾಗೂ ಹಿಂದೂ ಕಾರ್ಯಕರ್ತರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದು, ವಾಟ್ಸ್ಆ್ಯಪ್ ಸ್ಟೇಟಸ್​ನಲ್ಲಿ ಹಾಕಿಕೊಂಡಿದ್ದಾನೆ. ಇದು ಹಿಂದು ಧರ್ಮಕ್ಕೆ ಮಾಡಿದ ಅಪಮಾನ. ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಪೊಲೀಸ್ ಠಾಣೆ ಮುಂದೆ ಹಿಂದುಪರ ಸಂಘಟನೆಯ ಮುಖಂಡರು ಬುಧವಾರ ತಡರಾತ್ರಿ ಪ್ರತಿಭಟನೆ ನಡೆಸಿದ್ದರು.

ತಡರಾತ್ರಿ ಠಾಣೆಯ ಮುಂದೆ ಸುಮಾರು ಐವತ್ತಕ್ಕೂ ಹೆಚ್ಚು ಮುಖಂಡರು ಜಮಾಯಿಸಿದ್ದರಿಂದ ಬಿಗುವಿನ ವಾತಾವರಣ ಉಂಟಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನ ಅರಿತ

ರಾಯಚೂರು ಎಸ್ಪಿ ಪ್ರಕಾಶ್ ನಿಕಮ್ ಹಾಗೂ ಅಡಿಷನಲ್ ಎಸ್ಪಿ ಶ್ರೀ ಹರಿಬಾಬು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಎಸ್.ಎಸ್. ಹುಲ್ಲೂರ್, ಹಿಂದು ಕಾರ್ಯಕರ್ತರ ಜೊತೆ ಚರ್ಚಿಸಿದರು. ಆರೋಪಿ ಜಹೀರ್​ನನ್ನು ಬಂಧಿಸಿದ್ದು, ಮುಂದಿನ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು. ಇದರಿಂದ ವಾತಾವರಣ ತಿಳಿಯಾಯಿತು.

ಆರೋಪಿ ಜಹೀರ್​, ಈ ಹಿಂದೆ ಸಾಕಷ್ಟು ಕೃತ್ಯಗಳಲ್ಲಿ ಭಾಗಿಯಾಗಿದ್ದ. ಕಳ್ಳತನ ಮಾಡುವ ಜೊತೆಗೆ ಹುಡುಗಿಯರನ್ನ ಚುಡಾಯಿಸುತ್ತಿದ್ದ. ಈತನ ವಿರುದ್ಧ ಈಗಾಗಲೇ ಎರಡ್ಮೂರು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.