ನ್ಯೂಸ್

ನೆರೆ ಸಂತ್ರಸ್ತರಿಗೆ 48 ಗಂಟೆಯೊಳಗೆ ಪರಿಹಾರ: ಡಾ. ಆರ್.ಸೆಲ್ವಮಣಿ

ಶಿವಮೊಗ್ಗ: ಮಲೆನಾಡಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೆಲವೆಡೆ ಉಂಟಾಗಿರುವ ನೆರೆಯನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು 48 ಗಂಟೆಯೊಳಗೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಶೇ.60ರಷ್ಟು ನೆರೆ ಸಂತ್ರಸ್ತರಿಗೆ ಎನ್‌ಡಿಆರ್‌ಎಫ್(ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ) ಮಾರ್ಗಸೂಚಿ ಪ್ರಕಾರ ಪರಿಹಾರ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ತಿಳಿಸಿದರು.

ಭಾರಿ ಮಳೆಯಿಂದ ಎಲ್ಲ ತಾಲೂಕುಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಹಾನಿ ನಿಯಂತ್ರಿಸಿ ಮತ್ತು ಜನಜೀವನ ಸುಗಮವಾಗಿರುವಂತೆ ನೋಡಿಕೊಳ್ಳಲು ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ನೆರೆ ಸಂತ್ರಸ್ತರಿಗೆ ತುರ್ತು ಪರಿಹಾರ ವಿತರಿಸಲು ಎಲ್ಲ ತಹಸೀಲ್ದಾರ್‌ಗಳಿಗೆ ಸೂಚಿಸಲಾಗಿದೆ. ಉಳಿದ ಪರಿಹಾರವನ್ನು ಒಂದೆರಡು ದಿನಗಳಲ್ಲಿ ಪರಿಶೀಲಿಸಿ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಡಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸೊರಬ ಮತ್ತು ಹೊಸನಗರ ತಾಲೂಕುಗಳಲ್ಲಿ ತಲಾ ಒಂದೊಂದು ಜೀವಹಾನಿ ಪ್ರಕರಣ ದೃಢಪಟ್ಟಿದೆ. 8 ಜಾನುವಾರು ಮೃತಪಟ್ಟಿದ್ದು ಸಂತ್ರಸ್ತರಿಗೆ ಪರಿಹಾರ ವಿತರಿಸಲಾಗಿದೆ. ಮಾನವಹಾನಿಗೆ 5 ಲಕ್ಷ ರೂ. ಸರ್ಕಾರ ನಿಗದಿ ಮಾಡಿದೆ. ಇದುವರೆಗೆ 397 ಮನೆಗಳು ಹಾನಿಗೊಳಗಾಗಿವೆ. ಅವುಗಳ ಪೈಕಿ 30 ಮನೆಗಳು ಪೂರ್ಣ, 98 ಗಂಭೀರ ಮತ್ತು 262 ಮನೆಗಳು ಭಾಗಶಃ ಹಾನಿಗೊಳಗಾಗಿವೆ. 774 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ಮತ್ತು ಮೆಕ್ಕೆಜೋಳದ ಬೆಳೆ ನಾಶವಾಗಿವೆ ಎಂದು ಹೇಳಿದರು.

258 ಕಿ.ಮೀ. ರಸ್ತೆ, 546 ವಿದ್ಯುತ್ ಕಂಬಗಳು ಹಾಗೂ 6 ವಿದ್ಯುತ್ ಪರಿವರ್ತಕಗಳು, ಕೆಲ ಶಾಲಾ ಹಾಗೂ ಅಂಗನವಾಡಿ ಕಟ್ಟಡಗಳೂ ನಾಶವಾಗಿವೆ. ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು, ಜಿಲ್ಲೆಯಾದ್ಯಂತ ಆಗಿರುವ ಬೆಳೆಯ ಪೂರ್ಣ ಪ್ರಮಾಣದ ಮಾಹಿತಿ ಪಡೆದು ನಷ್ಟದ ಪರಿಹಾರಧನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.