ಸಾಂದರ್ಭಿಕ ಚಿತ್ರ 
ನ್ಯೂಸ್

ಗೃಹಲಕ್ಷ್ಮಿ ಭತ್ಯೆ ವಂಚಿತರು; ಕಾರಣಗಳ ಪಟ್ಟಿ ಒಪ್ಪಿಸಿದ ಸಚಿವರು !

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಅರ್ಹರು ಹೆಸರುಗಳ ನೋಂದಣಿಗೆ ಹಲವು ವೇದಿಕೆಗಳನ್ನು ಸರ್ಕಾರ ಸೃಜಿಸಿ, ಸುಲಭ ಮತ್ತು ಸರಳ ಪ್ರಕ್ರಿಯೆಗೆ ಅನುಕೂಲ ಮಾಡಿಕೊಟ್ಟಿದ್ದು, ಬಡ ಮಹಿಳೆಯರು ಉತ್ಸಾಹಪೂರ್ಣವಾಗಿ ಸ್ಪಂದಿಸಿದ್ದಾರೆ. ಈ ನಡುವೆ ಮಾಸಿಕ ಎರಡು ಸಾವಿರ ರೂ. ಭತ್ಯೆ ನೀಡುವ ಯೋಜನೆಯ ಸೌಲಭ್ಯದಿಂದ 9.44 ಲಕ್ಷ ಅರ್ಜಿದಾರರು ವಂಚಿತರಾಗಿದ್ದಾರೆ.

ಮಹಿಳಾ ಆರ್ಥಿಕ ಸಬಲೀಕರಣ ಉದ್ದೇಶಿತ ಮಹತ್ವಾಕಾಂಕ್ಷಿ ಯೋಜನೆಯಡಿ 9,44,155 ಅರ್ಜಿದಾರರಿಗೆ ಹಣ ಸಂದಾಯವಾಗಿಲ್ಲ ಎನ್ನುವುದು ದೃಢಪಟ್ಟಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಈ ವಿಷಯ ಖಚಿತಪಡಿಸಿ, ಅದಕ್ಕೆ ಕಾರಣಗಳನ್ನು ಪಟ್ಟಿ ಮಾಡಿ ವಿವರಿಸಿದ್ದಾರೆ.
ಹಣ ಪಾವತಿಯಾಗದ ಅರ್ಜಿದಾರರ ಪೈಕಿ ಮರಣ ಹೊಂದಿದ 3,082 ಜನರನ್ನು ಅನರ್ಹಗೊಳಿಸಲಾಗಿದೆ. 1,59,356 ಅರ್ಜಿದಾರರ ಡೆಮೋ ದೃಢೀಕರಣ ವಿಲವಾಗಿದೆ. ಫಲಾನುಭವಿಗಳ ಆಧಾರ್ ಹಾಗೂ ಬ್ಯಾಂಕ್ ಖಾತೆ ಹೆಸರಿನಲ್ಲಿ ವ್ಯತ್ಯಾಸವಾಗಿದ್ದು, ಅವುಗಳನ್ನು ಸರಿಪಡಿಸಲಾಗುತ್ತಿದೆ.

ಅಲ್ಲದೆ, 5,96,268 ಫಲಾನುಭವಿಗಳ ಖಾತೆಯೊಂದಿಗೆ ಆಧಾರ್ ಜೋಡಣೆಯಾಗಿಲ್ಲ. ಈ ಪೈಕಿ 2,17,536 ಫಲಾನುಭವಿಗಳ ಬ್ಯಾಂಕ್ ಖಾತೆಯನ್ನು ಆಧಾರ್‌ಗೆ ಜೋಡಿಸಿದ್ದು, ಉಳಿದ ಫಲಾನುಭವಿಗಳಿಗೂ ಸಿಡಿಪಿಒ ಮಾಹಿತಿ ನೀಡಿ, ಆಧಾರ್ ಸಂಖ್ಯೆ ಫೀಡ್ ಮಾಡಿಸಲು ಕ್ರಮವಹಿಸಲಾಗಿದೆ.

ಹೆಸರು ಮತ್ತು ವಿಳಾಸಕ್ಕೆ ಸಂಬಂಧಿಸಿದಂತೆ 1,75,683 ಅರ್ಜಿಗಳಲ್ಲಿ ವ್ಯತ್ಯಾಸವಾಗಿದೆ. ಬ್ಯಾಂಕ್ ಮೂಲಕ ಇ-ಕೆವೈಸಿ ಮಾಡಿಸಲು ಇಲಾಖೆ ಕ್ರಮವಹಿಸಿದೆ. 9,766 ಇಂದೀಕರಿಸಿದ ದತ್ತಾಂಶದಿಂದ ಉಂಟಾಗಿರುವ ವಿಳಂಬವನ್ನು ಸೇವಾಸಿಂಧು ಮೂಲಕ ಪರಿಶೀಲಿಸಲಾಗುತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

4,449 ಕೋಟಿ ರೂ. ಬಿಡುಗಡೆ

ಯೋಜನೆಯಡಿ ಆಗಸ್ಟ್ 1.8 ಕೋಟಿ ಅರ್ಹ ಲಾನುಭವಿಗಳಿಗೆ 2,169 ಕೋಟಿ ರೂ., ಸೆಪ್ಟೆಂಬರ್‌ನಲ್ಲಿ 1.14 ಕೋಟಿ ಲಾನುಭವಿಗಳಿಗೆ 2,280 ಕೋಟಿ ರೂ. ಸೇರಿ ಎರಡು ತಿಂಗಳಲ್ಲಿ 4,449 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.

ಅ.4ರವರೆಗೆ 93 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲಾ ಎರಡು ಸಾವಿರ ರೂ.ಗಳನ್ನು ಯಶಸ್ವಿಯಾಗಿ ವರ್ಗಾಯಿಸಲಾಗಿದೆ. ಉಳಿದ 5.5 ಲಕ್ಷ ಫಲಾನುಭವಿಗಳ ಮಾಹಿತಿ ಪರಿಶೀಲಿಸಿ ಡಿಬಿಟಿ ಮೂಲಕ ಹಣ ಪಾವತಿಗೆ ಕ್ರಮಕೈಗೊಳ್ಳಲಾಗಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.