| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಕಳೆದ ನಾಲ್ಕು ದಶಕದಿಂದ ನಡೆಯುತ್ತಿರುವ ಇಲಾಖೆಗಳ ನಡುವಿನ ಕಿತ್ತಾಟಕ್ಕೆ ಇನ್ನೇನು ಪೂರ್ಣ ವಿರಾಮ ಬಿತ್ತು ಎನ್ನುವಾಗಲೇ ಆಗಿಹೋದ ಪ್ರಕ್ರಿಯೆಗೆ ತಡೆಹಾಕಲು ಕಾಣದ ಕೈಗಳು ಪ್ರಯತ್ನಿಸಿರುವ ಬೆಳವಣಿಗೆ ನಡೆದಿದೆ.
ಆಗಿರುವುದಿಷ್ಟು.. ವಿವಿಧ ಶ್ರೇಣಿಯ ಅಭಿಯಂತರ (ಇಂಜಿನಿಯರ್)ರಿಗೆ ಲೋಕೋಪಯೋಗಿ ಮಾತೃ ಇಲಾಖೆಯಾಗಿ ಪರಿಗಣಿತವಾಗಿತ್ತು. ಲೋಕೋಪಯೋಗಿ ಇಲಾಖೆಯಿಂದಲೇ ನಗರಾಭಿವೃದ್ಧಿ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಸೇರಿ ವಿವಿಧ ಇಲಾಖೆ ನಿಗಮ, ಸ್ಥಳೀಯ ಸಂಸ್ಥೆಗೆ ಇಂಜಿನಿಯರ್ ನಿಯೋಜನೆ ಗೊಳ್ಳುತ್ತಿದ್ದರು. ಇಲಾಖೆಗಳ ಬೇಡಿಕೆಗೆ ತಕ್ಕಂತೆ ಇಂಜಿನಯರ್ಗಳನ್ನು ಲೋಕೋಪಯೋಗಿ ಇಲಾಖೆ ನಿಯೋಜಿಸುತ್ತಿತ್ತು. ಆದರೆ, ಈ ಇಲಾಖೆಗಳು ತಾವೇ ನೇರವಾಗಿ ಇಂಜಿನಿಯರ್ಗಳನ್ನು ನೇಮಕ ಮಾಡಿಕೊಂಡು ಮತ್ತು ಅವರಿಗೆ ಬಡ್ತಿ ಕೊಡಲಾರಂಭಿಸಿದವು. ಇದು ಲೋಕೋಪಯೋಗಿ ಇಲಾಖೆಯಿಂದ ನಿಯೋಜನೆಗೊಂಡ ಇಂಜಿನಿಯರುಗಳ ಕಸಿವಿಸಿಗೆ ಕಾರಣವಾಯಿತು. ತಮಗಿಂತ 10-15 ವರ್ಷ ಕಿರಿಯರಾದವರು ತಮ್ಮ ಹಿರಿಯ ಅಧಿಕಾರಿಯಾಗುವುದನ್ನು ಅವರು ಒಪ್ಪಿಕೊಳ್ಳದೆ ಹೋದರು.
ಸಮಸ್ಯೆ ಅರಿತ ಸರ್ಕಾರ ಲೋಕೋಪಯೋಗಿ ಇಲಾಖೆ ಇಂಜಿನಿಯರ್ಗಳನ್ನು ಇಲಾಖಾವಾರು ಕಾಯಂ ಹಂಚಿಕೆ ಮಾಡಲು ನಿರ್ಧರಿಸಿ, ಅಪರ ಮುಖ್ಯಕಾರ್ಯದರ್ಶಿ ನೇತೃತ್ವದ ಸಮಿತಿ ಮಾಡಿತು. ಯಾರು ಯಾವ ಇಲಾಖೆಗೆ ಹೋಗಲು ಬಯಸುತ್ತೀರೋ ಸಹಮತಿ ನೀಡಿ ಎಂದು 60 ದಿನ ಕಾಲಾವಕಾಶವನ್ನೂ ನೀಡಲಾಗಿತ್ತು. ಗ್ರಾಮೀಣಾಭಿವೃದ್ಧಿ, ಜಲಸಂಪನ್ಮೂಲ, ನಗರಾಭಿವೃದ್ಧಿ ಹೀಗೆ ತಮಗಿರುವ ಅವಕಾಶಗಳನ್ನು ಗಮನಿಸಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್ಗಳು ಸಹಮತಿ ನೀಡಿದರು. ಇಷ್ಟರಲ್ಲಿ ಅವರು ತೆರಳಿದ ಇಲಾಖೆಯಲ್ಲಿ ಜ್ಯೇಷ್ಠತೆ ವ್ಯತ್ಯಾಸವಾಗಿ ಗೊಂದಲ ಸೃಷ್ಟಿಯಾಗಿದೆ. ಜತೆಗೆ ಕೆಲವು ಇಲಾಖೆಗಳಲ್ಲಿ ಹುದ್ದೆ ಮತ್ತು ಸಂಖ್ಯೆ ಹಂಚಿಕೆಯಲ್ಲಿ ವ್ಯತ್ಯಯವಾಗಿದೆ. ಈ ಅಸಮತೋಲನ ಸರಿಪಡಿಸಲು ಉನ್ನತ ಮಟ್ಟದ ಸಮಿತಿ ಹೆಣಗಾಡುತ್ತಿದೆ. ಇನ್ನೊಂದೆಡೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಕೆಲವು ಇಂಜಿನಿಯರ್ಗಳು ತಮಗೆ ಮತ್ತೆ ಇಲಾಖೆ ಬದಲಿಸಿಕೊಳ್ಳಲು ಅವಕಾಶ ಕೊಡಬೇಕೆಂದು ನ್ಯಾಯಾಲಯವನ್ನು ಕೋರಿದ್ದು, ಕೋರ್ಟ್ ಅವಕಾಶ ನಿರಾಕರಿಸಿದೆ.
ಈಗ ಹೊಸದೊಂದು ಒಡಕುದನಿ ಎದ್ದಿದೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದ ಇಂಜಿನಿಯರ್ಗಳ ಹಂಚಿಕೆ ಪ್ರಕ್ರಿಯೆ ಇನ್ನೇನು ಕೊನೆಯಾಗುವ ಹಂತ ತಲುಪಿದೆ ಎನ್ನುವಾಗಲೇ ಸಿಎಂ ಬದಲಾದಂತೆ, ಈ ಪ್ರಕ್ರಿಯೆಗೆ ತಡೆ ಹಾಕುವ ಮತ್ತು ಪುನರ್ ಪ್ರಕ್ರಿಯೆ ನಡೆಸಬೇಕೆಂಬ ಒತ್ತಡ ಶುರುವಾಗಿದೆ. ಸಹಾಯಕ ಇಂಜಿನಿಯರ್ ಹುದ್ದೆಯಿಂದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ನೀಡಲಾದ ಬಡ್ತಿಯನ್ನು ಹಿಂಪಡೆಯಬೇಕು, ಹೊಸದಾಗಿ ಪ್ರಕ್ರಿಯೆ ನಡೆಯಲಿ ಎಂದು ಕೆಲವು ಹಿತಾಸಕ್ತಿಗಳು ಪ್ರಯತ್ನಿಸಿವೆ. ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಒಬ್ಬರೇ ನೇರವಾಗಿ ಪ್ರಭಾವ ಬಳಸಿ ಹಸ್ತಕ್ಷೇಪ ನಡೆಸಿದ್ದಾರೆಂಬ ಚರ್ಚೆ ಇಲಾಖೆಯಲ್ಲಿದೆ. ಜತೆಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಿಂದ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಬಡ್ತಿ ನೀಡಲು ಇಲಾಖಾ ಪದೋನ್ನತಿ ಸಭೆ ನಡೆದಿದ್ದು, ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸದಂತೆ ಒತ್ತಡ ತರುವ ಕೆಲಸವೂ ನಡೆದಿದೆ ಎಂಬ ಮಾಹಿತಿ ಇದೆ.
ಪ್ರಸ್ತುತ ಮುಖ್ಯಕಾರ್ಯದರ್ಶಿ ರವಿಕುಮಾರ್ ಈ ಹಿಂದೆ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದಾಗಲೇ ಈ ಎಲ್ಲ ಪ್ರಕ್ರಿಯೆ ನಡೆದಿತ್ತು. ಅದನ್ನೇ ಈಗ ಪುನಃ ನಡೆಸಬೇಕು ಎಂಬ ಪ್ರಯತ್ನ ಅನೇಕ ಅನುಮಾನಗಳಿಗೂ ಕಾರಣವಾಗಿದೆ. ಹಣ ಗಳಿಸುವ ಉದ್ದೇಶವಿದೆ ಎಂಬ ಆರೋಪಗಳು ಸಹ ಕೇಳಿಬಂದಿದೆ. ಇದೀಗ ಅಪರ ಮುಖ್ಯ ಕಾರ್ಯದರ್ಶಿಯಾಗಿರುವ ಅಮಿತಾ ಪ್ರಸಾದ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಸೋಮವಾರ ನಡೆಯುವುದಿದೆ. ಇಲಾಖೆಯಲ್ಲಿ ನಡೆದಿರುವ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಲು ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ.
ಪುನರ್ ವಿಮರ್ಶೆ?: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಒಪ್ಪಿಗೆ ನೀಡಿದ ವಿವಿಧ ಯೋಜನೆ ಗಳನ್ನು ಪುನರ್ ವಿಮರ್ಶೆ ನಡೆಸುವ ಪ್ರಯತ್ನ ಚರ್ಚೆಗೆ ಗ್ರಾಸವಾಗಿದೆ. ಬೋರ್ಡ್ ಮೀಟಿಂಗ್ನಲ್ಲಿ 12 ಸಾವಿರ ಕೋಟಿ ರೂ.ನ ಯೋಜನೆಗೆ ಅನುಮೋದನೆ ನೀಡಿದ್ದು, ಇದರ ಬಗ್ಗೆ ತಾಂತ್ರಿಕ ಸಹಾಯಕರಿಂದ ವಿವರಣೆ ಕೇಳಿದ್ದು, ಈ ವಿಷಯ ಬಿಎಸ್ವೈ ಗಮನಕ್ಕೂ ಬಂದಿದೆ ಎನ್ನಲಾಗಿದೆ.