ನ್ಯೂಸ್

ದೇಶದ ಹಿತಾಸಕ್ತಿಗಾಗಿ ಮೂರನೇ ಬಾರಿ ಮದುವೆ ಮುಂದೂಡಿದ ಪ್ರಧಾನಿ!

vinaymk1969

ನವದೆಹಲಿ: ವಿಶ್ವಾದ್ಯಂತ ಹಬ್ಬಿರುವ ಕೋವಿಡ್​-19 ಪಿಡುಗಿನಿಂದಾಗಿ ಜಗತ್ತಿನಾದ್ಯಂತ ಲಕ್ಷಾಂತರ ಮದುವೆ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿವೆ. ಕೆಲವು ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದ್ದರೆ, ಇನ್ನು ಹಲವು ಜೋಡಿಗಳು ಕೋವಿಡ್​-19 ಪರಿಸ್ಥಿತಿ ಸುಧಾರಿಸುವ ಸಮಯಕ್ಕಾಗಿ ಕಾಯುತ್ತಿವೆ.

ಆದರೆ, ಈ ದೇಶದ ಪ್ರಧಾನಿಯೊಬ್ಬರು ದೇಶದ ಹಿತದೃಷ್ಟಿಯಿಂದ ಮೂರನೇ ಬಾರಿಗೆ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಹೌದು. ಕೋವಿಡ್​-19 ಪರಿಸ್ಥಿತಿ ನಿಯಂತ್ರಿಸುವುದು ಸೇರಿ ನಾನಾ ಕಾರಣಗಳಿಗಾಗಿ ಡೆನ್ಮಾರ್ಕ್​ನ ಪ್ರಧಾನಿ ಮೆಟ್ಟೆ ಫ್ರೆಡ್ರಿಕ್​ಸೆನ್​ ಈ ಹಿಂದೆ ನಿಗದಿಯಾಗಿದ್ದ ತಮ್ಮ ಮದುವೆಯನ್ನು ಎರಡು ಬಾರಿ ಮುಂದೂಡಿದ್ದರು. ಇದೀಗ ಅವರು ಜುಲೈ 17 ಮತ್ತು 18ರಂದು ಬ್ರುಸೆಲ್ಸ್​ನಲ್ಲಿ ಯುರೋಪಿಯನ್​ ಕೌನ್ಸಿಲ್​ ಸಭೆ ಆಯೋಜನೆಗೊಂಡಿದೆ. ಕೋವಿಡ್​-19 ನಿಯಂತ್ರಣದ ಜತೆಗೆ ಅದರಿಂದಾಗಿ ಆರ್ಥಿಕತೆ ಮೇಲೆ ಉಂಟಾಗಿರುವ ದುಷ್ಪರಿಣಾಮದಿಂದ ಪಾರಾಗುವ ಬಗೆ ಕುರಿತು ಈ ಸಭೆಯಲ್ಲಿ ಚರ್ಚೆಗಳಾಗಲಿವೆ. ಈ ಸಭೆಯಲ್ಲಿ ಪಾಲ್ಗೊಳ್ಳುವ ಅನಿವಾರ್ಯತೆಗೆ ಒಳಗಾಗಿರುವ ಮೆಟ್ಟೆ, ಬೋ ಟೆನ್​ಬರ್ಗ್​ ಜತೆಗಿನ ತಮ್ಮ ವಿವಾಹವನ್ನು ಮತ್ತೊಮ್ಮೆ ಮುಂದೂಡಿದ್ದಾರೆ.

ಈ ವಿಷಯವನ್ನು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿರುವ ಮೆಟ್ಟೆ, ನಾನು ಬೋಗೆ ಯೆಸ್​ ಎಂದು ಹೇಳುವ ದಿನಕ್ಕಾಗಿ ಕಾತರಿಸುತ್ತಿದ್ದೇನೆ. ಆದರೆ, ನಾನಾ ಕಾರಣಗಳಿಗಾಗಿ ಮದುವೆ ಮುಂದೂಡಿಕೆಯಾಗುತ್ತಲೇ ಇದೆ. ಈ ಬಾರಿ ನಾವು ಜುಲೈ 17ರಂದು ಒಂದಾಗಲು ನಿರ್ಧರಿಸಿದ್ದೆವು. ಆದರೆ ದುರದೃಷ್ಟವಶಾತ್​, ಅಂದೇ ಯುರೋಪಿಯನ್​ ಕೌನ್ಸಿಲ್​ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪಾಲ್ಗೊಳ್ಳಲೇ ಬೇಕಾದ ಅನಿವಾರ್ಯತೆ ಇರುವುದರಿಂದ, ಮದುವೆಯನ್ನು ಕೂಡ ಅನಿವಾರ್ಯವಾಗಿ ಮುಂದೂಡಬೇಕಾಗಿದೆ. ಬೋ ತುಂಬಾ ತಾಳ್ಮೆಯ ವ್ಯಕ್ತಿಯಾಗಿರುವುದರಿಂದ, ನಮ್ಮಿಬ್ಬರ ಮದುವೆಗಾಗಿ ಇನ್ನಷ್ಟು ಕಾಲ ಕಾಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.