ಬೆಂಗಳೂರು: ಭಾರತದಲ್ಲಿರುವ ಆರೋಪಿಯಾಗಿರುವ ಚೀನಾ ಪ್ರಜೆಯನ್ನು ವಿದೇಶಕ್ಕೆ ರವಾನಿಸಲು ಕಾನೂನುಗಳನ್ನು ಸಡಿಲಗೊಳಿಸಲಾಗದು ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್, ಪವರ್ ಬ್ಯಾಂಕ್ ಹಗರಣ ಆರೋಪಿಯಾಗಿರುವ ಚೀನಾದ ಪ್ರಜೆಯೊಬ್ಬರನ್ನು ಸ್ವದೇಶಕ್ಕೆ ತೆರಳಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರದ್ದುಪಡಿಸಿದೆ.
ತನ್ನ ವಯಸ್ಸಾದ ತಂದೆ ಅನಾರೋಗ್ಯಕ್ಕೆ ತುತ್ತಾಗಿದ್ದು, ನೋಡುವುದಕ್ಕಾಗಿ ಚೀನಾಗೆ ಪ್ರಯಾಣಿಸಲು ಅನುಮತಿ ಕೋರಿ ಚೀನಾ ಪ್ರಜೆಯಾಗಿರುವ ಬೆಂಗಳೂರು ನಿವಾಸಿ ಎಚ್.ಯು.ಕ್ಸಿಯೋಲಿನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಇದೇ ಆರೋಪದಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ತನ್ನ ಸ್ವದೇಶಕ್ಕೆ ತೆರಳಲು ಕೇರಳ ಹೈಕೋರ್ಟ್ ಸಮ್ಮತಿ ನೀಡಿದೆ. ಈ ನಿಟ್ಟಿನಲ್ಲಿ ಅರ್ಜಿದಾರರು ವಿದೇಶಕ್ಕೆ ತೆರಳಲು ಅವಕಾಶ ನೀಡಬೇಕು ಎಂದು ಕೋರಿದರು. ಅಲ್ಲದೆ, ಈ ಸಂದರ್ಭದಲ್ಲಿ ವಿದೇಶಕ್ಕೆ ತೆರಳಲು ಅವಕಾಶ ದೊರೆಯದಿದ್ದಲ್ಲಿ ತಂದೆಯೊಂದಿಗೆ ಕಳೆಯುವ ಕೊನೆ ಕ್ಷಣದಿಂ ಆಕೆ ವಂಚಿತಳಾಗುತ್ತಾಳೆ ಹೀಗಾಗಿ ಷರತ್ತುಗಳನ್ನು ಸಡಿಲಗೊಳಿಸಿ ಸ್ವದೇಶಕ್ಕೆ ತೆರಳಲು ಅನುಮತಿ ನೀಡಬೇಕು ಎಂದು ಕೋರಿದ್ದರು.
ಇದಕ್ಕೆ ಆಕ್ಷೇಪಿಸಿದ ಸರ್ಕಾರದ ಪರ ವಕೀಲರು, ಅರ್ಜಿದಾರರು ಮತ್ತು ಆಕೆ ಪತಿಯ ವಿರುದ್ಧ ಸುಮಾರು ಪವರ್ ಬ್ಯಾಂಕ್ ಹಕಗರಣ ಆರೋಪದಲ್ಲಿ ಏಳು ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಷರತ್ತುಗಳನ್ನು ಸಡಿಲಗೊಳಿಸಿದರೆ ಅರ್ಜಿದಾರರು ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡಿದಂತಾಗಲಿದೆ. ಜತೆಗೆ, ಅವರು ದೇಶಕ್ಕೆ ಹಿಂದಿರುಗುವುದಕ್ಕೆ ಮತ್ತೆ ವಾಪಸ್ ಕರೆತರವುದು ಕಷ್ಟವಾಗಲಿದೆ. ಹೀಗಾಗಿ ಮನವಿಯನ್ನು ತಿರಸ್ಕರಿಸಬೇಕು ಎಂದು ಕೋರಿದರು.
ವಾದ -ಪ್ರತಿವಾದ ಆಲಿಸಿದ ನ್ಯಾಯಪೀಠ, ಚೀನಾ ದೇಶದ ಕ್ರಿಮಿನಲ್ ಕೋಡ್ ಪ್ರಕಾರ ಆದೇಶದಲ್ಲಿರುವ ವಿದೇಶಿ ಪ್ರಜೆ ಯಾವುದೇ ಪ್ರಕರಣದಲ್ಲಿ ಆರೋಪಿಯಾದರೆ ಆ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೂ ದೇಶದಿಂದ ಹೊರ ಬರುವುದಕ್ಕೆ ಅವಕಾಶವಿಲ್ಲ. ಹೀಗಿರುವಾಗ ಚೀನಾದ ಕಾನೂನುಗಳನ್ನು ಹಲವು ರೀತಿಯ ಅಪರಾಧಗಳನ್ನು ಎದುರಿಸುತ್ತಿರುವ ಚೀನಾದ ಪ್ರಜೆಯನ್ನು ವಿದೇಶಕ್ಕೆ ರವಾನಿಸುವುದಕ್ಕೆ ಭಾರತದ ಕಾನೂನುಗಳನ್ನು ಸಡಿಲಗೊಳಿಸಲಾಗದು ಎಂದು ಪೀಠ ತಿಳಿಸಿದೆ.
ಅಲ್ಲದೆ, ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಅರ್ಜಿದಾರರನ್ನು ದೇಶದಿಂದ ಹೊರ ಹೋಗಲು ಅನುಮತಿ ನೀಡಿದಲ್ಲಿ ಅವರ ವಿರುದ್ಧ ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಲು ಅಡ್ಡಿಯಾಗಲಿದೆ. ಜತೆಗೆ, ಅವರನ್ನು ನ್ಯಾಯಾಲಯದ ವಿಚಾರಣೆ ಎದುರಿಸದೆ ಪಲಾಯನ ಮಾಡುವುದಕ್ಕೆ ಅವಕಾಶ ನೀಡಿದಂತಾಗಲಿದೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.
ಈ ಹಿಂದೆ ಇದೇ ಅರ್ಜಿದಾರರ ಕೋರಿದ್ದ ಮನವಿಯನ್ನು ಸೆಷನ್ಸ್ ನ್ಯಾಯಾಲಯ ಮತ್ತು ಹೈಕೋರ್ಟ್‌ನ ಮತ್ತೊಂದು ಪೀಠ ಷರತ್ತುಗಳನ್ನು ಸಡಿಲಿಸಲು ಸಾಧ್ಯವಿಲ್ಲ ಎಂದು ತಿಳಿಸಿ ಮನವಿಯನ್ನು ತಿರಸ್ಕರಿಸಿದೆ. ಈ ನಡುವೆ ಮತ್ತೊಂದು ಅರ್ಜಿ ಸಲ್ಲಿಸಿದ್ದು, ಅದೂ ಸಹಾ ಷರತ್ತುಗಳನ್ನು ಸಡಿಲಿಸಲು ತಿರಸ್ಕರಿಸಿದೆ. ಇದೀಗ ತಂದೆಗೆ ಅನಾರೋಗ್ಯ ಎಂದು ಹೊಸ ಕಾರಣವ ಹುಡುಕಿದ್ದಾರೆ. ಹೀಗಾಗಿ ಮನವಿಯನ್ನು ತಿರಸ್ಕರಿಸಲಾಗುತ್ತಿದೆ ಎಂದು ಪೀಠ ತಿಳಿಸಿದೆ.
ಜತೆಗೆ, ಅರ್ಜಿದಾರರರ ವಿರುದ್ಧ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಪ್ರಕರಣ ದಾಖಲಾಗಿವೆ. ನಿದಿಷ್ಟ ರಾಜ್ಯದ ಅಧಿಕಾರದ ವ್ಯಾಪ್ತಿಯನ್ನು ಮೀರಿರುವ ಹಗರಣವಾಗಿದ್ದು, ಈವರೆಗೂ ಆರೋಪ ಪಟ್ಟಿ ಸಲ್ಲಿಸಲಾಗಿಲ್ಲ. ಈ ಸಂದರ್ಭದಲ್ಲಿ ದೇಶದಿಂದ ಹೊರ ಹೋಗಲು ಅನುಮತಿ ನೀಡಿದಲ್ಲಿ ವಿಚಾರಣೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಅನುಮತಿ ನೀಡಿದಂತಾಗಲಿದೆ ಎಂದು ಪೀಠ ಹೇಳಿದೆ
ಅರ್ಜಿ ವಜಾಗೊಳಿಸಿದೆ