ಬೆಂಗಳೂರು: ಡೆಂಘೆ ಸೋಂಕು ಪತ್ತೆಗೆ ನಡೆಸುವ ಎಲಿಜಾ ಪರೀಕ್ಷೆಗೆ ಖಾಸಗಿ ಆಸ್ಪತ್ರೆಗಳಿಗೆ ಏಕರೂಪ ದರ ನಿಗದಿಪಡಿಸಲು ಸರ್ಕಾರ ಮುಂದಾಗಿದೆ.
ಡೆಂಘೆ ರಾಜ್ಯಾದ್ಯಂತ ರಾಜ್ಯಾದ್ಯಂತ ಉಲ್ಬಣಗೊಳ್ಳುತ್ತಿದ್ದು, ಈ ಸೋಂಕು ಪರೀಕ್ಷೆಗೆ ಖಾಸಗಿ ಆಸ್ಪತ್ರೆಗಳು ಬೇಕಾಬಿಟ್ಟಿ ಶುಲ್ಕ ವಸೂಲು ಮಾಡುತ್ತಿರುವ ಕುರಿತು ಇಲಾಖೆಗೆ ದೂರು ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಆರೋಗ್ಯ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ವಿಷಯ ತಿಳಿಸಿದರು.
ಡೆಂಘೆ ಪರೀಕ್ಷೆಯನ್ನೇ ಖಾಸಗಿ ಆಸ್ಪತ್ರೆಗಳು, ಲ್ಯಾಬ್‌ಗಳು ಬಂಡವಾಳ ಮಾಡಿಕೊಳ್ಳುತ್ತಿವೆ. ಬಡ ರೋಗಿಗಳ ಸುಲಿಗೆ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ಆರೋಪ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶೀಘ್ರದಲ್ಲೇ ದರ ನಿಗದಿ ಮಾಡಿ ಅಧಿಸೂಚನೆ ಹೊರಡಿಸುವುದಾಗಿ ಹೇಳಿದರು.
ಸರ್ಕಾರಿ ಆಸ್ಪತ್ರೆಗಳಿಗೆ ಟೆಸ್ಟಿಂಗ್ ಕಿಟ್‌ಗಳನ್ನು ಉಚಿತವಾಗಿ ಕೊಡಲಾಗುತ್ತಿದೆ ಎಂದು ತಿಳಿಸಿದರು.
ಡೆಂಘೆ ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇದುವರೆಗೆ ಏನಾಗಿದೆ? ಮುಂದೇನಾಗಬೇಕು ಎಂದು ಚರ್ಚೆ ಮಾಡಿದ್ದೇವೆ. ಸಾಧಾರಣವಾಗಿ ಈ ವರ್ಷ ಬಂದರೆ ಮುಂದಿನ ವರ್ಷ ಬರುತ್ತಿರಲಿಲ್ಲ. ಆದರೆ, ಕಳೆದ ಬಾರಿಯೂ ಡೆಂಘೆ ಇತ್ತು, ಈ ಬಾರಿ ಜಾಸ್ತಿ ಆಗಿದೆ ಎಂದರು.
ಜು.1 ರವರೆಗೆ 6187 ಪಾಸಿಟಿವ್ ಪ್ರಕರಣ ವರದಿಯಾಗಿವೆ. ಕಳೆದ ಬಾರಿ 2903 ಪಾಸಿಟಿವ್ ಪ್ರಕರಣ ವರದಿಯಾಗಿದ್ದವು. ಪರೀಕ್ಷೆ ಜಾಸ್ತಿ ಮಾಡಿರುವುದರಿಂದ ಪ್ರಕರಣ ಕೂಡ ಹೆಚ್ಚು ಬೆಳಕಿಗೆ ಬರುತ್ತಿವೆ. ಶೇ.47 ರಷ್ಟು ತಪಾಸಣೆ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಅನೇಕ ಖಾಸಗಿ ಆಸ್ಪತ್ರೆಗಳು ಸರಿಯಾಗಿ ಮಾಹಿತಿ ಅಪ್‌ಲೋಡ್ ಮಾಡುತ್ತಿಲ್ಲ. ಪ್ರಕರಣ ಜಾಸ್ತಿಯೂ ಇರಬಹುದು. ಇನ್ನು ಮುಂದೆ ಕಡ್ಡಾಯವಾಗಿ ಪೋರ್ಟಲ್ ಅಲ್ಲಿ ಅಪ್‌ಲೋಡ್ ಮಾಡಬೇಕು ಎಂದರು.
ಟೆಸ್ಟಿಂಗ್ ಕಿಟ್‌ಗಳಿಗೆ ಕೊರತೆ ಇಲ್ಲ. ಪ್ಯಾರಾಸೆಟಮಾಲ್ ಒಂದೇ ಮದ್ದು. ತೀವ್ರ ಆದರೆ ಪ್ಲೇಟ್‌ಲೆಟ್ ಕಡಿಮೆ ಆಗುತ್ತದೆ. ರಕ್ತನಿಧಿ ಕೇಂದ್ರದ ಜತೆ ಸಂಪರ್ಕದಲ್ಲಿದ್ದೇವೆ. ಪ್ಲೇಟ್‌ಲೆಟ್ ಗೆ ಕೊರತೆ ಇಲ್ಲ. ಐವಿ ಫ್ಲ್ಯುಯಿಡ್ ಕೂಡ ಸಾಕಷ್ಟು ಸಂಗ್ರಹವಿದ್ದು, ಪೂರೈಕೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಜನರು ಭೀತಿ ಆಗಬಾರದು. ಯಾವುದನ್ನೂ ಮುಚ್ಚಿ ಹಾಕುವಂಥದ್ದೇನಲ್ಲ. ಶಂಕಿತ ಪ್ರಕರಣಗಳನ್ನೇ ಡೆಂಘೆ ಮರಣ ಎಂದು ಮಾಧ್ಯಮಗಳು ತೋರಿಸಬಾರದು ಎಂದು ಮನವಿ ಮಾಡಿದರು.