| ಮರಿದೇವ ಹೂಗಾರ ಹುಬ್ಬಳ್ಳಿ
ಡೆಂಘೆ ಜ್ವರ ತೀವ್ರಗತಿಯಲ್ಲಿ ಏರುತ್ತಿದ್ದಂತೆಯೇ ಪ್ಲೇಟ್ಲೆಟ್ ಕಣಗಳಿಗೆ ಬಹುಬೇಡಿಕೆ ಸೃಷ್ಟಿಯಾಗಿದೆ. ರಾಜ್ಯಾದ್ಯಂತ ಪ್ರತಿದಿನ 363 ಯೂನಿಟ್ ಪ್ಲೇಟ್ಲೆಟ್ ಆಯಾ ಜಿಲ್ಲೆಯ ರಕ್ತ ಭಂಡಾರಗಳಿಂದ ಪೂರೈಕೆ ಆಗುತ್ತಿದೆ.
ರಾಜ್ಯದಲ್ಲಿ ಸರ್ಕಾರಿ, ಖಾಸಗಿ ಹಾಗೂ ಸೊಸೈಟಿ ಸೇರಿ 250ಕ್ಕೂ ಹೆಚ್ಚು ರಕ್ತ ಭಂಡಾರಗಳಿವೆ. ಕೆಲ ಜಿಲ್ಲೆಯಲ್ಲಿ ಪ್ರತಿನಿತ್ಯ 30 ಯೂನಿಟ್ ಪ್ಲೇಟ್ಲೆಟ್ ಅಗತ್ಯವಿದೆ ಎಂಬುದು ಆರೋಗ್ಯ ಇಲಾಖೆ ಸಂಗ್ರಹಿಸಿದ ಅಂಕಿ-ಅಂಶಗಳಿಂದ ತಿಳಿದುಬರುತ್ತಿದೆ. ಜು. 8ರ ಮಾಹಿತಿ ಪ್ರಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 161 ಯೂನಿಟ್ (ಪ್ರತಿ ಯೂನಿಟ್ 50ಎಂಎಲ್), ಬಿಬಿಎಂಎಪಿ ವ್ಯಾಪ್ತಿಯಲ್ಲಿ 24 ಯೂನಿಟ್ ಪ್ಲೇಟ್ಲೆಟ್ ಕೊಡಲಾಗಿದೆ. ಚಿಕ್ಕಮಗಳೂರಿಗೆ 32, ಧಾರವಾಡ 37, ಹಾಸನ 61, ಕೊಪ್ಪಳಕ್ಕೆ 24 ಯೂನಿಟ್ ಪ್ಲೇಟ್ಲೆಟ್ ಪೂರೈಕೆ ಮಾಡಲಾಗಿದೆ. ಆದರೂ ಕೆಲವೆಡೆ ರಕ್ತ ಭಂಡಾರಗಳಲ್ಲಿ ಪ್ಲೇಟ್ಲೆಟ್ಗಳ ಸಂಗ್ರಹವಿದೆ. ಚಾಮರಾಜನಗರ ಜಿಲ್ಲೆಯಲ್ಲಿ 6 ಯೂನಿಟ್ ಪ್ಲೇಟ್ಲೆಟ್ ಅವಧಿ ಮೀರಿ ಹೋಗಿದ್ದವು. ಪ್ರತಿ ದಿನವೂ ಪೂರೈಕೆ ಮತ್ತು ಸದ್ಯದ ಸ್ಥಿತಿಗತಿಗಳ ಮಾಹಿತಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.
ರಾಜ್ಯದಲ್ಲಿ ಸದ್ಯ ಪ್ಲೇಟ್ಲೆಟ್ ಕೊರತೆ ಇಲ್ಲ. ಆದರೆ, ಕೊರತೆಯಾಗಬಾರದು ಎಂಬ ಉದ್ದೇಶದಿಂದ ಆಯಾ ಜಿಲ್ಲೆಯಲ್ಲಿ ಹಿರಿಯ ವೈದ್ಯರನ್ನು ನಿಯೋಜನೆ ಮಾಡಲಾಗಿದೆ. ರ್ಯಾಂಡಮ್ ಡೋನರ್ ಪ್ಲೇಟ್ಲೆಟ್, ಸಿಂಗಲ್ ಡೋನರ್ ಪ್ಲೇಟ್ಲೆಟ್, ಸಿಂಗಲ್ ಡೋನರ್ ಪ್ಲಾಸ್ಮಾ, ರೆಡ್ಬ್ಲಡ್ ಸೆಲ್ಸ್ (ಆರ್ಬಿಸಿ), ಪ್ಲಾಸ್ಮಾ ಸೇರಿ ವಿವಿಧ ಮಾದರಿಯ ಮಾಹಿತಿ ಪಡೆಯಲಾಗುತ್ತಿದೆ. ಆಯಾ ಜಿಲ್ಲೆಯ ಖಾಸಗಿ, ಸರ್ಕಾರಿ ಹಾಗೂ ಸೊಸೈಟಿ ಸಹಯೋಗದಲ್ಲಿ ನಡೆಯುತ್ತಿರುವ ರಕ್ತ ಭಂಡಾರಗಳು ಪ್ರತಿ ದಿನವೂ ಮಾಹಿತಿ ರವಾನಿಸುತ್ತಿವೆ.
ಐದೇ ದಿನ ಆಯಸ್ಸು: ಪ್ಲೇಟ್ಲೆಟ್ಗಳಲ್ಲಿ ಆರ್ಡಿಪಿ (ರ್ಯಾಂಡಮ್ ಡೋನರ್ ಪ್ಲೇಟ್ಲೆಟ್) ಹಾಗೂ ಎಸ್ಡಿಪಿ (ಸಿಂಗಲ್ ಡೋನರ್ ಪ್ಲೇಟ್ಲೆಟ್) ಎಂಬ ವಿಭಜನೆಯಿದೆ. ಇವೆರಡಕ್ಕೂ ಕೇವಲ ಐದು ದಿನ ಆಯಸ್ಸು. ಸರ್ಕಾರಿ ಆಸ್ಪತ್ರೆಯಲ್ಲಿ ಆರ್ಡಿಪಿ ಮತ್ತು ಎಸ್ಡಿಪಿಗೆ ನಿಗದಿತ ದರವಿದೆ. ಡೆಂಘೆ ಜ್ವರ ಬಾಧಿತರಲ್ಲಿ ಪ್ಲೇಟ್ಲೆಟ್ ಸಂಖ್ಯೆ ಕುಸಿಯುತ್ತಿದ್ದಂತೆಯೇ ಈ ಎಸ್ಡಿಪಿ ಇಲ್ಲವೇ ಆರ್ಡಿಪಿ ಅಗತ್ಯ ಉಂಟಾಗುತ್ತದೆ. ರೋಗಿಗೆ 1 ಆರ್ಡಿಪಿ ಹಾಕಿದರೆ 5ರಿಂದ 8 ಸಾವಿರ ರಕ್ತ ಕಣಗಳು ದೇಹದಲ್ಲಿ ಏರಿಕೆಯಾಗುತ್ತವೆ. 1 ಎಸ್ಡಿಪಿ ಹಾಕಿದರೆ 40ರಿಂದ 50 ಸಾವಿರ ರಕ್ತ ಕಣಗಳು ದಿಢೀರನೆ ವೃದ್ಧಿಯಾಗುತ್ತವೆ. ಆದರೆ, ರೋಗಿಗೆ ಯಾವ ರಕ್ತದ ಗುಂಪು ಇರುತ್ತದೋ ಅಂಥ ಗುಂಪಿನವರೇ ಎಸ್ಡಿಪಿ ದಾನ ಮಾಡಬೇಕು. ದಾನಿಯಿಂದ ಪ್ಲೇಟ್ಲೆಟ್ ಮಾತ್ರ ತೆಗೆದುಕೊಂಡು ರಕ್ತವನ್ನು ದಾನ ಮಾಡಿದ ವ್ಯಕ್ತಿಗೇ ಮರು ಪೂರೈಕೆ ಮಾಡಲಾಗುತ್ತದೆ.
| ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ರಾಜ್ಯದಲ್ಲಿ ಡೆಂಘೆ ಆರ್ಭಟದ ಬೆನ್ನಲ್ಲೇ ರಕ್ತ ಹಾಗೂ ಮತ್ತದರ ಅಂಗಾಂಶಗಳು, ಮುಖ್ಯವಾಗಿ ಪ್ಲೇಟ್ಲೇಟ್ಗೆ ಬೇಡಿಕೆ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ರಾಜ್ಯದ ರಕ್ತ ಕೇಂದ್ರಗಳ ಪೈಕಿ ಹಲವು ತಮ್ಮಲ್ಲಿರುವ ರಕ್ತ ಸಂಗ್ರಹಣೆ ದಾಸ್ತಾನು ಮಾಹಿತಿಯನ್ನು ಉಚkಠಿkಟಠಜ ಕೇಂದ್ರೀಕೃತ ರಕ್ತ ನಿರ್ವಹಣಾ ವ್ಯವಸ್ಥೆಗೆ ಸೂಕ್ತ ರೀತಿ ತಿಳಿಸದ ಕಾರಣ ರೋಗಿಗಳು ಪರದಾಡುವಂತಾಗಿದೆಯಂತೆ.
ಮಾಹಿತಿ ಅಪ್ಲೋಡ್ ಮಾಡದೇ ಇರುವುದು ಎನ್ಬಿಟಿ/ಕೆಎಸ್ಬಿಟಿಸಿ ನಿಯಮಾವಳಿಗೆ ವಿರುದ್ಧವಾಗಿದೆ. ಹೀಗಾಗಿ ನಿತ್ಯ ಸಂಜೆ 4.30 ರೊಳಗೆ ಬ್ಲಡ್ಸೆಂಟರ್ಗಳು ತಮ್ಮಲ್ಲಿರುವ ರಕ್ತದ ಲಭ್ಯತೆ ಮಾಹಿತಿ ತಿಳಿಸಬೇಕು. ಒಂದು ವೇಳೆ ರಕ್ತ, ಅಂಗಾಂಶಗಳು, ಪ್ಲೇಟ್ಲೆಟ್ ಕೊರತೆಯಿಂದ ಸಾವು-ನೋವಿನಂಥ ಅನಾಹುತಗಳಾದಲ್ಲಿ ಆ ಪ್ರದೇಶ ವ್ಯಾಪ್ತಿಯ ಬ್ಲಡ್ ಸೆಂಟರ್ ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆ ಮಾಡುವುದಾಗಿ ಪರಿಷತ್ ನಿರ್ದೇಶಕರು ಎಚ್ಚರಿಕೆ ಕೊಟ್ಟಿದ್ದಾರೆ. ರಾಜ್ಯದಲ್ಲಿರುವ ಸರ್ಕಾರಿ ಮತ್ತು ಖಾಸಗಿಗೆ ಸಂಬಂಧಿಸಿದ 260 ರಕ್ತ ನಿಧಿ ಕೇಂದ್ರಗಳು, ನಿತ್ಯ ತಮ್ಮಲ್ಲಿರುವ ರಕ್ತ, ಅದರ ಅಂಗಾಂಶ ಇತ್ಯಾದಿ ಮಾಹಿತಿಯನ್ನು ಇ-ರಕ್ತ ಕೋಶ ಸಾಫ್ಟ್ವೇರ್ಗೆ ರವಾನಿಸಬೇಕು. ಇದರಿಂದ ಸಂಬಂಧಿಸಿದವರು ಈ ತಂತ್ರಾಂಶಕ್ಕೆ ಭೇಟಿ ನೀಡಿ ಸಮೀಪದ ಬ್ಲಡ್ಸೆಂಟರ್ಗಳಲ್ಲಿರುವ ರಕ್ತದ ಲಭ್ಯತೆ ತಿಳಿಯಬಹುದು. ಇ-ರಕ್ತಕೋಶ ತಂತ್ರಾಂಶದಲ್ಲಿ ರಾಜ್ಯ, ಜಿಲ್ಲೆ, ಅಗತ್ಯ ರಕ್ತದ ಬೇಡಿಕೆ ಸೆಲೆಕ್ಟ್ ಮಾಡಿದರೆ ಲಭ್ಯತೆಯ ವಿವರ ಗೊತ್ತಾಗಲಿದೆ. ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ಡೆಂಘೆಗೆ ತುತ್ತಾಗುತ್ತಿರುವ ಒಳ ಹಾಗೂ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಿಂಗಲ್ ಡೋನರ್, ರ್ಯಾಂಡಮ್ ಡೋನರ್ ಪ್ಲೇಟ್ಲೆಟ್ಗಳು (ಎಸ್ಡಿಪಿ-ಆರ್ಡಿಪಿ) ಕೊರತೆಯಾಗದಂತೆ ನೋಡಿ ಕೊಳ್ಳುವ ಹೊಣೆ ಆರೋಗ್ಯ ಇಲಾಖೆ ಮೇಲಿದೆ.
ಬೆಂಗಳೂರು: ರಾಜ್ಯದಲ್ಲಿ ವ್ಯಾಪಕವಾಗುತ್ತಿರುವ ಡೆಂಘ ನಿಯಂತ್ರಣ ವಿಚಾರದಲ್ಲಿ ಮೈಮರೆಯದಂತೆ ಜಿಲ್ಲಾಡಳಿತಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.
ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಡಿಎಸ್ಒ ಪ್ರತಿದಿನ ಸಭೆ ನಡೆಸಿ ಕ್ರಮಕೈಗೊಳ್ಳಬೇಕು. ಮುಖ್ಯವಾಗಿ ಜಿಲ್ಲಾ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸುವಂತೆಯೂ ತಿಳಿಸಿದ್ದಾರೆ. ಏನು ಮಾಡಬೇಕು, ಎಷ್ಟು ಹಣ ಅಗತ್ಯವಿದೆ ಎನ್ನುವುದನ್ನು ತಿಳಿಸಿ.
ತಕ್ಷಣ ಹಣ ಬಿಡುಗಡೆಗೆ ಸೂಚಿಸಿದ್ದೇನೆ. ರಾಜ್ಯದಲ್ಲಿ ಇದುವರೆಗೆ 7362 ಪ್ರಕರಣ ಪತ್ತೆಯಾಗಿದ್ದು, ಪ್ರಸ್ತುತ 303 ಸಕ್ರಿಯ ಪ್ರಕರಣಗಳಿವೆ. 7 ಸಾವು ಸಂಭವಿಸಿದೆ. ಸೊಳ್ಳೆ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯದಲ್ಲಿ ಆರೋಗ್ಯ ತುರ್ತಸ್ಥಿತಿಯನ್ನು ಘೊಷಿಸುವ ಅಗತ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಇದೇ ವೇಳೆ ತಿಳಿಸಿದರು. ಪ್ರತಿ ಜಿಲ್ಲಾಸ್ಪತ್ರೆಯಲ್ಲಿ 10 ಹಾಸಿಗೆಗಳ ವಿಶೇಷ ವಾರ್ಡ್ ಸಜ್ಜುಗೊಳಿಸಬೇಕು. ಮೆಡಿಕಲ್ ಕಾಲೇಜುಗಳಲ್ಲಿಯೂ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಬೇಕು. ಡೆಂಘ ಪತ್ತೆಗೆ ಪರೀಕ್ಷೆ ಹೆಚ್ಚಿಸಬೇಕು. ಪಾಸಿಟಿವ್ ಇರುವ ವ್ಯಕ್ತಿಗಳ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇರಿಸಬೇಕು ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್ಫೋರ್ಸ್ ರಚಿಸಬೇಕು ಎಂದರು. ಕೊಳಚೆ ಪ್ರದೇಶದಲ್ಲಿ ಡೆಂಘ ಕಂಡುಬಂದೆಡೆ ಸೊಳ್ಳೆ ಪರದೆಯನ್ನು ಉಚಿತವಾಗಿ ನೀಡಲು ಉದ್ದೇಶಿಸಲಾಗಿದ್ದು, ತಕ್ಷಣವೇ ಪ್ರಸ್ತಾವನೆ ಕಳಿಸಲೂ ಸೂಚಿಸಿದರು. ಮಳೆಗಾಲ ಮುಗಿಯುವ ತನಕ ಅಧಿಕಾರಿಗಳು ಪ್ರತಿದಿನ ಸಭೆಗಳನ್ನು ನಡೆಸಿ ಪರಿಶೀಲನೆ ನಡೆಸಬೇಕು. ಪ್ರಸ್ತುತ ಸಾಲಿನಲ್ಲಿ 215 ನಮ್ಮ ಕ್ಲಿನಿಕ್ಗಳನ್ನು ಆರಂಭಿಸಲು ಅನುಮೋದನೆ ನೀಡಲಾಗಿದ್ದು, 42 ಕಡೆಗಳಲ್ಲಿ ಕಟ್ಟಡ ಗುರುತಿಸಲಾಗಿದೆ. ರಾಜ್ಯದಲ್ಲಿ ಈಗಾಗಲೇ 503 ನಮ್ಮ ಕ್ಲಿನಿಕ್ಗಳು ಕಾರ್ಯಾಚರಿಸುತ್ತಿವೆ. ನಮ್ಮ ಕ್ಲಿನಿಕ್ಗಳಲ್ಲಿ ಲಭ್ಯವಿರುವ ಸೇವೆಗಳ ಮಾಹಿತಿ ಪ್ರಚುರಪಡಿಸಬೇಕು ಎಂದು ತಿಳಿಸಿದ್ದಾರೆ.