ನ್ಯೂಸ್

ಈ ಜ್ವರ ಕಾಣಿಸಿಕೊಂಡವರ ಹತ್ತಿರ ಬರೋದೇ ಇಲ್ಲ ಕರೊನಾ..!

ನವದೆಹಲಿ: ಮಹಾಮಾರಿ ಕರೊನಾ ವೈರಸ್​ ತಡೆಗಟ್ಟಲು ಜಾಗತಿಕವಾಗಿ ನಾನಾ ಪಯತ್ನಗಳು ನಡೆಯುತ್ತಿವೆ. ಔಷಧಿ ಕಂಡುಹಿಡಿಯುವಲ್ಲಿ ನಿರತರಾಗಿದ್ದು, ಆಶಾದಾಯಕ ಬೆಳವಣಿಗೆಗಳು ಕಂಡುಬಂದಿದೆ. ಅನೇಕ ಅಧ್ಯಯನಗಳು ಕೂಡ ಕರೊನಾ ಕುರಿತಾಗಿ ಬಂದಿದ್ದು, ನೂತನ ಅಧ್ಯಯನವೊಂದರ ಪ್ರಕಾರ ಈಗಾಗಲೇ ಡೆಂಘೆ ಜ್ವರದಿಂದ ಬಳಲಿ ಚೇತರಿಸಿಕೊಂಡವರಿಗೆ ಕರೊನಾದಿಂದ ಯಾವುದೇ ಅಪಾಯವಿಲ್ಲ ಎಂದು ಹೇಳಿದೆ.

ಡ್ಯೂಕ್​ ಯೂನಿವರ್ಸಿಟಿಯ ಸಂಶೋಧಕರು ತಮ್ಮ ಸಂಶೋಧನಾ ಫಲಿತಾಂಶವನ್ನು ಸುದ್ದಿ ಸಂಸ್ಥೆ ರಾಯಿಟರ್ಸ್​ ಜತೆ ಹಂಚಿಕೊಂಡಿದ್ದಾರೆ. ಬ್ರೆಜಿಲ್​ನ ಸ್ಪೋಟಗೊಂಡ ಕರೊನಾ ವೈರಸ್​ಗೂ ಮತ್ತು ಸೊಳ್ಳೆಗಳಿಂದ ಹರಡಿದ ಅನಾರೋಗ್ಯದ ನಡುವೆ ಇರುವ ಸಂಬಂಧವನ್ನು ಪತ್ತೆಹಚ್ಚಲಾಗಿದೆ.

ಡ್ಯೂಕ್​ ಸ್ಕೂಲ್​ ಆಫ್ ಮೆಡಿಸಿನ್ ನ್ಯೂರೋಸೈನ್ಸ್ ಪ್ರಾಧ್ಯಾಪಕ ಡಾ. ಮಿಗ್ಯುಲ್​ ನಿಕೊಲಿಸ್​ ನೇತೃತ್ವದಲ್ಲಿ ಸಂಶೋಧನೆ ನಡೆದಿದ್ದು, ಈ ಬಗ್ಗೆ ಮಾತನಾಡಿರುವ ಅವರು ಕರೊನಾ ಪ್ರಕರಣಗಳು ಹರಡಿದ ಭೌಗೋಳಿಕ ವಿತರಣೆಯೊಂದಿಗೆ 2019 ಮತ್ತು 2020ರಲ್ಲಿ ಹರಡಿದ ಡೆಂಘೆಯೊಂದಿಗೆ ತಂಡವನ್ನು ಹೋಲಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮೇಲಿನ ವರ್ಷದಲ್ಲಿ ಡೆಂಘೆ ಹರಡುವಿಕೆಯಿಂದ ತುಂಬಾ ಬಳಲಿದ ಏರಿಯಾದಲ್ಲಿ ಕರೊನಾ ಸೋಂಕಿತ ಪ್ರಕರಣಗಳು ತುಂಬಾ ಕಡಿಮೆ ಇವೆ ಎಂದು ತಿಳಿದುಬಂದಿದ್ದು, ಡೆಂಘೆ ಜ್ವರ ರೋಗನಿರೋಧಕ ಶಕ್ತಿಯು ಕರೊನಾವನ್ನು ತಡೆಯುತ್ತದೆ ಮತ್ತು ತಟಸ್ಥಗೊಳಿಸುವ ಸಾಧ್ಯತೆ ಹೆಚ್ಚಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಮುಂದುವರಿದು ಮಾತನಾಡಿರುವ ನಿಕೊಲಿಸ್​, ಈ ಫಲಿತಾಂಶ ನಿಜಕ್ಕೂ ಆಸಕ್ತಿದಾಯಕವಾಗಿದೆ. ತಮ್ಮ ರಕ್ತದಲ್ಲಿ ಡೆಂಘೆ ನಿರೋಧಕ ಶಕ್ತಿಯನ್ನು ಹೊಂದಿದ ಜನರು ಕೋವಿಡ್​ ಪರೀಕ್ಷೆಯಲ್ಲಿ ನೆಗೆಟಿವ್​ ಬಂದಿರುವು ಈ ಹಿಂದಿನ ಅಧ್ಯಯನಗಳಲ್ಲಿ ನಾವು ಕಂಡಿದ್ದೇವೆಂದು ತಿಳಿಸಿದರು.

ಡೆಂಘೆ ಮತ್ತು ಕರೊನಾ ವೈರಸ್​ಗಳು ಬೇರೆ ಬೇರೆ ಕುಟುಂಬಕ್ಕೆ ಸೇರಿದ್ದಾಗಿದ್ದರೂ, ಯಾರೂ ನಿರೀಕ್ಷಿಸದ ಈ ಎರಡು ವೈರಸ್‌ಗಳ ನಡುವೆ ರೋಗನಿರೋಧಕ ಸಂವಹನ ಇದೆ ಎಂಬುದನ್ನು ಇದು ಸೂಚಿಸುತ್ತದೆ. ಆದರೂ ಈ ಬಗ್ಗೆ ನಿಖರ ಮಾಹಿತಿಗಾಗಿ ಹೆಚ್ಚಿನ ತನಿಖೆಯಲ್ಲಿ ತೊಡಗಿಕೊಂಡಿರುವುದಾಗಿ ನಿಕೊಲಿಸ್​ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)