ಕಸಾಪ ಜಿಲ್ಲಾಧ್ಯಕ್ಷರು, ಸದಸ್ಯರ ಹಕ್ಕು ಮೊಟಕುಗೊಳಿಸುವ ಬೈಲಾ ಅಂಗೀಕಾರ ಹಿಂಪಡೆಯುವಂತೆ ಆಗ್ರಹಿಸಿ ಕನ್ನಡ ನಾಡು-ನುಡಿ ಜಾಗೃತಿ ಸಮಿತಿ ಪ್ರಮುಖರು ಡಿಸಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು. ಪ್ರೊ. ಎಚ್.ಟಿ.ಕೃಷ್ಣಮೂರ್ತಿ, ಕೆ.ಪಿ.ಶ್ರೀಪಾಲ್, ಹೊನ್ನಾಳಿ ಚಂದ್ರಶೇಖರ್, ಎಸ್.ಬಿ.ಅಶೋಕ್‌ಕುಮಾರ್, ದೇವಾನಂದ, ಪುಟ್ಟಯ್ಯ, ಅಕ್ಷತಾ ಹುಂಚದಕಟ್ಟೆ ಇದ್ದರು. 
ನ್ಯೂಸ್

ಕಸಾಪ ಬೈಲಾ ತಿದ್ದುಪಡಿ ಅಂಗೀಕಾರ ಹಿಂಪಡೆಯಲು ಒತ್ತಾಯ

ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ ಸದಸ್ಯರ ಹಕ್ಕು ಮೊಟಕುಗೊಳಿಸುವ ಬೈಲಾ ಅಂಗೀಕಾರವಾಗಿದ್ದು, ಅದನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಕನ್ನಡ ನಾಡು-ನುಡಿ ಜಾಗೃತಿ ಸಮಿತಿ ಪ್ರಮುಖರು ಸೋಮವಾರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಸಲ್ಲಿಸಿದರು.

ನಾಡು-ನುಡಿ ರಕ್ಷಣೆ ಹಾಗೂ ಸಂವರ್ಧನೆಗೆ 110 ವರ್ಷಗಳಿಂದ ಕಸಾಪ ಕೆಲಸ ಮಾಡುತ್ತಿದೆ. ಆದರೆ ಹಾಲಿ ಅಧ್ಯಕ್ಷ ಮಹೇಶ ಜೋಶಿ ಅವರು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಪರಿಷತ್ ಘನತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಸಾಪದಲ್ಲಿ ಕಳೆದ 3.5 ವರ್ಷದಲ್ಲಿ ಅವ್ಯವಹಾರ, ಆರ್ಥಿಕ ಅಶಿಸ್ತು ಎದ್ದುಕಾಣುತ್ತಿದೆ. ವರ್ಷಕ್ಕೆ 22.6 ಲಕ್ಷ ರೂ. ಪಡೆದಿದ್ದು, ಹಿಂದಿನ ಯಾವ ಅಧ್ಯಕ್ಷರೂ ಪಡೆಯದ ಸವಲತ್ತನ್ನು ಹಾಲಿ ಅಧ್ಯಕ್ಷರು ಪರಿಷತ್ ನಿಧಿಯಿಂದ ಬಳಸಿದ್ದಾರೆ. ಅಲ್ಲದೆ ಪದಾಧಿಕಾರಿಗಳು ಹಾಗೂ ಅನಗತ್ಯ ಘಟಕಗಳ ಮುಖ್ಯಸ್ಥರಿಗೆ ಪ್ರತಿವರ್ಷ 19 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಜತೆಗೆ 2023-24ನೇ ಸಾಲಿನ ವಾರ್ಷಿಕ ವರದಿ, ಲೆಕ್ಕ ಪರಿಶೋಧಕರ ತನಿಖಾ ವರದಿಯಲ್ಲಿ ಸದಸ್ಯತ್ವ ನೋಂದಣಿ, ಕಾಮಗಾರಿ ವೆಚ್ಚ, ನವೀಕರಣದ ಬಗ್ಗೆ ಲೋಪ ಎತ್ತಿಹಿಡಿದಿದ್ದು, ಈ ಎಲ್ಲದರ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಹಾಲಿ ಅಧ್ಯಕ್ಷರ ಧೋರಣೆ ಪ್ರಶ್ನಿಸುವ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು, ಆಜೀವ ಸದಸ್ಯರಿಗೆ ನೋಟಿಸ್ ನೀಡುವುದು, ಅಮಾನತು ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ಈಗಾಗಲೇ ನೀಡಿರುವ ನೋಟಿಸ್‌ಗಳನ್ನು, ಪ್ರಾಥಮಿಕ ಸದಸ್ಯತ್ವ ಅಮಾನತು ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಪ್ರೊ. ಎಚ್.ಟಿ.ಕೃಷ್ಣಮೂರ್ತಿ, ಕೆ.ಪಿ.ಶ್ರೀಪಾಲ್, ಹೊನ್ನಾಳಿ ಚಂದ್ರಶೇಖರ್, ಎಸ್.ಬಿ.ಅಶೋಕ್‌ಕುಮಾರ್, ದೇವಾನಂದ, ಪುಟ್ಟಯ್ಯ, ಅಕ್ಷತಾ ಹುಂಚದಕಟ್ಟೆ ಇತರರಿದ್ದರು.