ಶಿವಮೊಗ್ಗ: ಗೋಪಾಲಗೌಡ ಬಡಾವಣೆಯಲ್ಲಿ ಕೈಗೊಳ್ಳಬೇಕಾದ ಕಾಮಗಾರಿ ಹಾಗೂ ಸಮಸ್ಯೆಗಳ ಪರಿಹರಿಸುವಂತೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಗುರುವಾರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಅವರಿಗೆ ಮನವಿ ಸಲ್ಲಿಸಿದರು.
ಎಸ್.ಬಂಗಾರಪ್ಪ ಒಳಾಂಗಣ ಷಟಲ್ ಕೋರ್ಟ್ ಕಾಮಗಾರಿ ಕೈಗೊಳ್ಳಬೇಕು. ಆಯನೂರು ಗೇಟ್‌ನಿಂದ ಶಾರದಾದೇವಿ ಅಂಧರ ವಿಕಾಸ ಶಾಲೆವರೆಗಿನ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಎಚ್‌ಟಿ ವಿದ್ಯುತ್ ಮಾರ್ಗದ ಕೆಳಗೆ ಬೆಳೆದಿರುವ ಗಿಡಗಂಟಿಗಳನ್ನು ತೆರವು ಮಾಡಬೇಕು. ಚಂದನ ಪಾರ್ಕ್ ತಡೆಗೋಡೆ ಕಾಮಗಾರಿ ತ್ವರಿತವಾಗಿ ಮುಗಿಸಬೇಕು ಎಂದು ಆಗ್ರಹಿಸಿದರು.
ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಬೇಕು. ಹಂದಿಗಳ ಕಾಟಕ್ಕೆ ಕಡಿವಾಣ ಹಾಕಬೇಕು. ಸ್ವಾಮಿ ವಿವೇಕಾನಂದ ಬಡಾವಣೆಯ ಕಸ ವಿಲೇವಾರಿಗೆ ಪೌರಕಾರ್ಮಿಕರ ಸಂಖ್ಯೆ ಕಡಿಮೆ ಇರುವುದರಿಂದ ಹೆಚ್ಚುವರಿ ಕಾರ್ಮಿಕರನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದರು.
ವಾರ್ಡ್‌ನಲ್ಲಿರುವ ಪಾರ್ಕ್‌ಗಳ ನಿರ್ವಹಣೆಗೆ ಹೆಚ್ಚುವರಿ ಸಿಬ್ಬಂದಿ ನೇಮಿಸಬೇಕು. ವಾರ್ಡ್ ಒಳಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಆದ್ಯತೆ ಮೇರೆಗೆ ರಿಪೇರಿ ಕಾಮಗಾರಿ ಕೈಗೊಳ್ಳಬೇಕು. ರಾಜಕಾಲುವೆ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಮಳೆಗಾಲದಲ್ಲಿ ಬಡಾವಣೆಗೆ ನೀರು ನುಗ್ಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿದರು.
ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರಮುಖರಾದ ಜಿ.ಡಿ.ಮಂಜುನಾಥ್ ಟಿ.ಡಿ ಗೀತೇಂದ್ರಗೌಡ, ಜಿ.ಎಸ್. ಶಿವಕುಮಾರ್, ಚಂದನ ಪಾರ್ಕ್ ಪ್ರಧಾನ ಕಾರ್ಯದರ್ಶಿ ಗುರುರಾಜ್, ಅಶೋಕ್, ರವಿ, ಬೋರೇಗೌಡ, ನಾಗೇಶ್ ರಂಗೇಗೌಡ್ರು, ಆನಂದ್ ಮತ್ತು 17ನೇ ವಾರ್ಡ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ರಾಜಶೇಖರ್ ಇತರರಿದ್ದರು.