ಶಿವಮೊಗ್ಗ: ಹಿಂದಿ ಹೇರಿಕೆಯನ್ನು ಕೈಬಿಟ್ಟು, ದ್ವಿಭಾಷಾ ನೀತಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರದ ಪಠ್ಯಕ್ರಮದಲ್ಲಿ ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಕಲಿಸಲಾಗುತ್ತಿದೆ. ರಾಜ್ಯ ಪಠ್ಯಕ್ರಮದಲ್ಲಿ ಓದುವ ಮಕ್ಕಳು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 100 ಅಂಕಗಳಿಗೆ ಹಿಂದಿ ಪರೀಕ್ಷೆ ಬರೆಯಬೇಕಿದೆ. ತೃತೀಯ ಭಾಷೆಯಾದ ಹಿಂದಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಅನಗತ್ಯವಾದ ಒತ್ತಡ ಹೇರುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 90,794 ವಿದ್ಯಾರ್ಥಿಗಳಿಗೆ ಹಿಂದಿಯಲ್ಲಿ ಅನುತ್ತೀರ್ಣರಾಗಿದ್ದಾರೆ. ಶೇ.21ರಷ್ಟು ವಿದ್ಯಾರ್ಥಿಗಳು ಹಿಂದಿ ಕಾರಣದಿಂದ ಫೇಲಾಗುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಆದ್ದರಿಂದ ಹಿಂದಿ ಕಡ್ಡಾಯ ಕೈಬಿಡಬೇಕು. ಹಿಂದಿ ಹೇರಿಕೆಗೆ ಕನ್ನಡದ ಮಕ್ಕಳ ಭವಿಷ್ಯ ಬಲಿಯಾಗುತ್ತಿದ್ದು, ತಕ್ಷಣ ದ್ವಿಭಾಷಾ ನೀತಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ಆರ್.ಮಂಜು, ಪದಾಧಿಕಾರಿಗಳಾದ ಅಂಬರೀಶ್, ಮಧು, ನವೀನ್, ಶೈಲೇಶ್ ಕುಮಾರ್, ಜಿಯಾವುಲ್ಲಾ, ರವಿ ನಾಯ್ಕ, ನ್ಯಾಮತ್‌ಬೇಗ್ ಮತ್ತಿತರರಿದ್ದರು.