ಹುಣಸೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ 187 ಕೋಟಿ ರೂ. ಭ್ರಷ್ಟಾಚಾರದ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ(ದಸಂಸ) ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ತಾಲೂಕು ಕಚೇರಿ ಆವರಣದ ಮುಂಭಾಗ ಪ್ರತಿಭಟನೆ ನಡೆಸಿದ ದಸಂಸ ಸದಸ್ಯರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.
ಈ ವೇಳೆ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ್ ಮಲ್ಲಾಡಿ, ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಸರ್ಕಾರ ನಿಗದಿಗೊಳಿಸಿದ್ದ 187 ಕೋಟಿ ಹಣವನ್ನು ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕೆ ಬಳಸದೆ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿರುವುದು ದಲಿತರಿಗೆ ಮಾಡಿರುವ ಘೋರ ಅನ್ಯಾಯವಾಗಿದೆ. ಈ ಭ್ರಷ್ಟಾಚಾರದ ವಿಷವರ್ತುಲದಿಂದ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಈ ಹಗರಣಕ್ಕೆ ಮತ್ತಷ್ಟು ಪುಷ್ಟಿ ಸಿಗುತ್ತಿದೆ ಎಂದು ಹೇಳಿದರು.
ದಲಿತರ, ಆದಿವಾಸಿಗಳ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ದಲಿತರ ಕಲ್ಯಾಣಕ್ಕಾಗಿ ನಿಗದಿಯಾಗಿರುವ ಹಣವನ್ನೇ ನುಂಗಿ ಹಾಕಿರುವುದು ದಲಿತರಿಗೆ ಮಾಡಿರುವ ಅನ್ಯಾಯವಾಗಿದೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ದಲಿತರಿಗೆ ಮೀಸಲಿಟ್ಟ 11 ಸಾವಿರ ಕೋಟಿ ರೂ. ಅನುದಾನವನ್ನು ದಲಿತರ ಕಲ್ಯಾಣಕ್ಕೆ ಬಳಸದೆ ಅನ್ಯ ಕೆಲಸಗಳಿಗೆ ಬಳಕೆ ಮಾಡುತ್ತಿರುವುದು ಸಹ ಅತ್ಯಂತ ನೋವಿನ ಸಂಗತಿಯಾಗಿದೆ. ಸಮಾಜ ಕಲ್ಯಾಣ ಇಲಾಖೆಗೆ ಒಳಪಡುವ ಎಲ್ಲಾ ನಿಗಮಗಳಲ್ಲೂ ಈ ರೀತಿಯ ಭ್ರಷ್ಟಾಚಾರ ನಡೆದಿರಬಹುದು ಎಂಬ ಶಂಕೆಯಿದೆ. ನಿಗಮಗಳಲ್ಲಿ ಹತ್ತಾರು ವರ್ಷಗಳಿಂದ ಅಧಿಕಾರಿಗಳು ಬೀಡು ಬಿಟ್ಟುಕೊಂಡು ದಲಿತರ ಹಣವನ್ನು ಯಾವ ರೀತಿ ಲಪಟಾಯಿಸಬೇಕು ಎಂಬುದನ್ನೇ ಕಾರ್ಯಗತ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಶಿಷ್ಟರ ಬೀದಿಗಳು ಕೊಳೆತು ನಾರುತ್ತಿವೆ. ಇವರ ಸ್ಮಶಾನ ಅಭಿವೃದ್ಧಿ ಹೊಂದದೇ ಶವಸಂಸ್ಕಾರಕ್ಕೆ ಪರಿಶಿಷ್ಟರು ಪರದಾಡುವ ಪರಿಸ್ಥಿತಿ ಇದೆ. ವಾಸಿಸಲು ಮನೆ ಮೂಲ ಸೌಕರ್ಯಗಳಿಲ್ಲದೆ ದಲಿತರು ಹಂದಿ ಗೂಡುಗಳಲ್ಲಿ ವಾಸ ಮಾಡುವ ಪರಿಸ್ಥಿತಿ ಇದೆ. ಇಂತಹ ಸಂಕಷ್ಟದ ಜೀವನವನ್ನು ಸಾಗಿಸುತ್ತಿರುವ ಪರಿಸಿಷ್ಟ ಜಾತಿ, ಪಂಗಡದವರ ಕಲ್ಯಾಣಕ್ಕಾಗಿ ಮೀಸಲಿದ್ದ ಹಣವನ್ನು ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುವುದು ಹೇಯ ಕೃತ್ಯವಾಗಿದೆ. ಈ ಹಿನ್ನೆಲೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಾಂತರ ರೂ. ಹಗರಣವನ್ನು ಸರ್ಕಾರ ಸಿಬಿಐ ತನಿಖೆಗೆ ಕೂಡಲೇ ವಹಿಸಬೇಕು. ಈ ಹಗರಣದಲ್ಲಿ ಭಾಗಿಯಾಗಿರುವ ರಾಜಕಾರಣಿಗಳು, ಅಧಿಕಾರಿಗಳ ಮೇಲೆ ಕೂಡಲೇ ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ಅವರನ್ನು ಜೈಲಿಗಟ್ಟಬೇಕು ಎಂದು ಒತ್ತಾಯಿಸಿದರು.
ಉಪತಹಸೀಲ್ದಾರ್ ನರಸಿಂಹಯ್ಯ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಈ ವೇಳೆ ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ, ಮುಖಂಡರಾದ ಬಲ್ಲೇನಹಳ್ಳಿ ಕೆಂಪರಾಜು, ಶೇಖರ ಯಶೋಧರಪುರ, ಶ್ರೀನಿವಾಸ ದಾಸನಪುರ, ಮೊಗಣ್ಣೇಗೌಡ ಉಯಿಗೊಂಡನಹಳ್ಳಿ, ನಾಗನಾಯಕ ಕೆ.ಎಂ.ವಾಡಿ ಅಲೆಮಾರಿ ಸಂಘದ ಶೇಖರ, ಹರೀಶ, ಪೌರಕಾರ್ಮಿಕ ಸಂಘದ ಮುರುಗೇಶ, ಮಾದು, ದಲಿತ ಮಹಿಳಾ ಒಕ್ಕೂಟದ ಪಾರ್ವತಮ್ಮ, ಲಕ್ಷ್ಮಿ ಮತ್ತಿತರರಿದ್ದರು.