ಕರ್ನಾಟಕ ಪರಿಶಿಷ್ಟ ಜಾತಿ ವೈಜ್ಞಾನಿಕ ಒಳಮೀಸಲಾತಿ ಅನುಷ್ಠಾನ ಹೋರಾಟ ಸಮಿತಿ ಬುಧವಾರ ಒಳಮೀಸಲು ವಿಚಾರವಾಗಿ ನೇಮಕಗೊಂಡ ಆಯೋಗವನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಎಂ.ವೆಂಕಟೇಶ್, ಕಿರಣ್ ಕುಮಾರ್ ಮತ್ತಿತರರು ಇದ್ದರು. 
ನ್ಯೂಸ್

ಒಳಮೀಸಲಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ವರ್ಗ ಸೃಷ್ಟಿಸುವಂತೆ ಬೇಡಿಕೆ

ಶ್ರೀಕಾಂತ್ ಶೇಷಾದ್ರಿ

ಬೆಂಗಳೂರು: ಕರ್ನಾಟಕ ಪರಿಶಿಷ್ಟ ಜಾತಿ ಕೊರಮ, ಕೊರಚ, ಕುರುವನ್, ಕೇಪ್ಮಾರಿಸ್ ವೈಜ್ಞಾನಿಕ ಒಳಮೀಸಲಾತಿ ಅನುಷ್ಠಾನ  ಹೋರಾಟ ಸಮಿತಿಯ ನಿಯೋಗವು ಬುಧವಾರ ಒಳ ಮೀಸಲು ವಿಚಾರದಲ್ಲಿ ಸರ್ಕಾರ ರಚಿಸಿರುವ ನ್ಯಾ.ನಾಗಮೋಹನದಾಸ್ ನೇತೃತ್ವದ ವಿಚಾರಣಾ ಆಯೋಗಕ್ಕೆ ಮನವಿ ಸಲ್ಲಿಸಿ ತಮ್ಮ ಬೇಡಿಕೆಯನ್ನು ಪ್ರಸ್ತಾಪಿಸಿದೆ.

ಸುಪ್ರೀಂಕೋರ್ಟ್ ತೀರ್ಪಿನ ಮಾನದಂಡದಂತೆ ಪರಿಶಿಷ್ಟ ಜಾತಿಗಳಲ್ಲಿಯೇ ಅತ್ಯಂತ ಹಿಂದುಳಿದಿರುವ ಅಧಿಸೂಚಿತ ಸಮುದಾಯ (ಡಿಎನ್‌ಟಿಎಸ್) ವಿಮುಕ್ತ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾದ ವರ್ಗವನ್ನು ಸೃಷ್ಟಿಸಬೇಕು. ಆ ವರ್ಗದಲ್ಲಿ ಕೊರಚ, ಕೊರಮ, ಕುರವನ್ ಮತ್ತು ಕೇಪ್ ಮಾರಿಸ್ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಹಿಂದುಳಿದಿರುವಿಕೆಯನ್ನು ಪರಿಗಣಿಸಿ, ಸಮಾನವಾಗಿ ಹಿಂದುಳಿದಿರುವ ಜಾತಿಗಳನ್ನು ಒಂದೇ ವರ್ಗದಲ್ಲಿ ಸೇರಿಸಿ ಸಮರ್ಪಕ ಮೀಸಲಾತಿ ಆಧಾರದಲ್ಲಿ  ಶೇ.6 ಹೆಚ್ಚುವರಿ ಒಳಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿತು.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಿಯೋಗದ ನೇತೃತ್ವದ ವಹಿಸಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ವೆಂಕಟೇಶ್ ಪರಿಶಿಷ್ಟ ಜಾತಿಯಲ್ಲಿರುವ  ಸಮುದಾಯಗಳಲ್ಲಿ ಹಿಂದುಳಿದ, ಅತ್ಯಂತ ಹಿಂದುಳಿದ ಹಾಗೂ ಅತಿ ಹಿಂದುಳಿದ ಮಾದರಿಯಲ್ಲಿ ವರ್ಗಗಳನ್ನು ಸೃಜಿಸಬೇಕು. ಇದು ಜಾತಿ- ಉಪಜಾತಿ ಗುಂಪುಗಳಾಗಬಾರದು ಎಂದು ಮನವಿ ಮಾಡಲಾಯಿತು ಎಂದರು.

ನಮ್ಮ ಬೇಡಿಕೆಗೆ ಆಯೋಗವು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಬಗ್ಗೆ ಪರಿಶೀಲಸಿ,  ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ. ನಮ್ಮ ಬೇಡಿಕೆಗೆ ಮನ್ನಣೆ ಸಿಗುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.

ನಿಯೋಗದಲ್ಲಿ ವಕೀಲರಾದ ಕಿರಣ್ ಕುಮಾರ್ ಕೊತ್ತಗೆರೆ, ಮಹದೇವು ಚಾಮರಾಜನಗರ, ಗಂಗಾಧರ್, ನೆಲಮಂಗಲ, ಮಲ್ಲೇಶ್, ರವಿ ಮಹದೇವು ಬೆಂಗಳೂರು, ಮನ್ಮಥ್, ನಾಗಮ್ಮ, ಚಂದ್ರಿಕಾ, ರಾಜೇಶ್ ಸೇರಿದಂತೆ ವಿಧ ಜಿಲ್ಲೆಗಳ ಕುಳುವ (ಕೊರಮ-ಕೊರಚ) ಸಮಾಜದ ವಿವಿಧ ಸಂಘಟನೆಯ ಮುಖಂಡರು ಹಾಜರಿದ್ದರು.