ಚಿಕ್ಕಮಗಳೂರು: ಜಿಲ್ಲೆಯ ವಿವಿಧ ತಾಲೂಕು ಕಚೇರಿಗಳಲ್ಲಿ ನಡೆದಿರುವ ಭೂ ಮಂಜೂರಾತಿ ಪ್ರಕರಣಗಳನ್ನು ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಬೇಕು, ಜಮೀನನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ ಗುರುಶಾಂತಪ್ಪ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಡೂರು, ಮೂಡಿಗೆರೆ ತಾಲೂಕು ಕಚೇರಿಗಳಲ್ಲಿ ಅಕ್ರಮ ಭೂಮಂಜೂರು ಪ್ರಕರಣಗಳು ಹೆಚ್ಚಾಗಿ ನಡೆದಿದೆ. ಈಗ 15 ಮಂದಿ ತನಿಖಾಧಿಕಾರಿಗಳ ನೇಮಿಸಿ ತನಿಖೆಗೆ ಆದೇಶಿಸಿರುವುದು ಸ್ವಾಗತಾರ್ಹ. ಪ್ರಕರಣದಲ್ಲಿ ತಪ್ಪಿತಸ್ಥ ಕೆಳಹಂತದ ಸಿಬ್ಬಂದಿ ವಿರುದ್ಧವೂ ತನಿಖೆಯಾಗಬೇಕು ಎಂದರು.
ಕಡೂರು ಮತ್ತು ಮೂಡಿಗೆರೆ ತಾಲ್ಲೂಕು ಕಚೇರಿಯಲ್ಲಿ ನಮೂನೆ 50, 53, 57 ಸಂಬಂಧಪಟ್ಟಂತೆ ಅಕ್ರಮ ಭೂಮಂಜೂರಾತಿ ಕುರಿತು ಸಮಗ್ರ ತನಿಖೆಯಾಗಬೇಕು. ಗ್ರಾಮಲೆಕ್ಕಿಗ ಹಾಗೂ ಆರ್‌ಐ ಸಹಿತ ಭೂಮಿ ಕೇಂದ್ರದ ಸಿಬ್ಬಂದಿ ವಿರುದ್ಧವೂ ತನಿಖಾಧಿಕಾರಿಗಳು ಕ್ರಮಜರುಗಿಸಬೇಕು. ಪ್ರಕರಣದಲ್ಲಿ ಕೆಲವು ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ರಕ್ಷಣೆ ಕೋರಿ ಶಾಸಕರ ಮೂಲಕ ಒತ್ತಡ ಹೇರುತ್ತಿರುವುದು ತಿಳಿದುಬಂದಿದೆ. ಶಾಸಕರು ಅಧಿಕಾರಿಗಳ ಒತ್ತಡಕ್ಕೆ ಮಣಿಯಬಾರದು ತನಿಖಾಧಿಕಾರಿಗಳ ನಿಷ್ಪಕ್ಷಪಾತ ತನಿಖೆಗೆ ಸಹಕರಿಸಬೇಕು ಎಂದು ಹೇಳಿದರು.
ನಮೂನೆ 50, 53, 57 ರಲ್ಲಿ ಸಲ್ಲಿಕೆಯಾದ ಅರ್ಜಿಗಳಲ್ಲಿ ಅರ್ಹಫಲಾನುಭವಿಗಳನ್ನು ಕಡೆಗಣಿಸಿ ಹಣ ಪಡೆದು ಉಳ್ಳವರಿಗೆ ಭೂಮಿ ಹಂಚಿಕೆ ಮಾಡಲಾಗಿದೆ. ಮೂಡಿಗೆರೆ ತಾಲೂಕಿನಲ್ಲಿಯೂ ಅಕ್ರಮ ಭೂ ಮಂಜೂರಾತಿಯಾಗಿದ್ದು ಸರ್ಕಾರಿ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಹೋಂಸ್ಟೇ, ರೆಸಾರ್ಟ್ ನಿರ್ಮಿಸಿಕೊಂಡಿದ್ದಾರೆ. ಅಕ್ರಮ ಖಾತೆ ವಜಾಗೊಳಿಸಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂದರು.
ಪತ್ರಿಕಾಗೋಷ್ಠೀಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್, ಕಡೂರು ತಾಲೂಕು ಅಧ್ಯಕ್ಷ ಕೆ.ಟಿ.ಆನಂದ, ಮುಖಂಡರಾದ ವಿಜಯಕುಮಾರ್, ಬಸವರಾಜ್, ಶಿವಾನಂದ್, ಶಿವಣ್ಣ ಹಾಜರಿದ್ದರು.