ಸಾಗರ: ಸಾಗರ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕದ ಅಸಮರ್ಪಕ ನಿರ್ವಹಣೆಯಿಂದ ತೊರಗೋಡು, ಅಕ್ಕಿಮನೆ, ಹುಲ್ಲತ್ತಿ, ಸಿರವಾಳ, ನೇರಲಗಿ ಸೇರಿ ಅಕ್ಕಪಕ್ಕದ ಗ್ರಾಮಸ್ಥರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ ಸೂಕ್ತ ನಿರ್ವಹಣೆಗೆ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಘನತ್ಯಾಜ್ಯ ವಿಲೇವಾರಿ ಘಟಕದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಭೀಮನೇರಿ ಗ್ರಾಪಂ ವ್ಯಾಪ್ತಿಯ ಸಂಗಳ ಗ್ರಾಮದ ಸರ್ವೇ ನಂ. 93ರಲ್ಲಿ ನಗರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕವಿದೆ. ಆದರೆ ನಗರಸಭೆ ಆಡಳಿತ ಸರಿಯಾಗಿ ನಿರ್ವಹಿಸುತ್ತಿಲ್ಲ. ಕಲುಷಿತ ನೀರು ರೈತರ ಜಮೀನು, ಜನವಸತಿ ಪ್ರದೇಶಗಳಿಗೆ ಹರಿದು ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ. ಅಲ್ಲದೆ ಭದ್ರತೆ ಇಲ್ಲದ್ದರಿಂದ ಜಾನುವಾರುಗಳು ಘಟಕದೊಳಗೆ ನುಗ್ಗಿ ತ್ಯಾಜ್ಯ ತಿಂದು ಸಾವಿಗೀಡಾಗುತ್ತಿವೆ ಎಂದು ದೂರಿದರು.
ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ರೈತರು ಮತ್ತು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ. ಇದರಿಂದ ಜಾನುವಾರುಗಳು ಸಾವಿಗೀಡಾಗುತ್ತಿವೆ. ಒಣ ಕಸಕ್ಕೆ ಬೆಂಕಿ ಹಚ್ಚುತ್ತಿರುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಜನರಿಗೆ ಸಾಂಕ್ರಾಮಿಕ ಕಾಯಿಲೆ ಜತೆಗೆ ಉಸಿರಾಟದ ಸಮಸ್ಯೆಯೂ ಎದುರಾಗಿದೆ. ಘಟಕಕ್ಕೆ ಕೂಡಲೇ ಭದ್ರತೆ ವ್ಯವಸ್ಥೆ ಮಾಡಬೇಕು. ಬೀದಿನಾಯಿಗಳನ್ನು ಸ್ಥಳಾಂತರಿಸಬೇಕು. ಒಣ ಮತ್ತು ಹಸಿ ಕಸವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕು. ತ್ಯಾಜ್ಯದ ನೀರು ಜನವಸತಿ ಪ್ರದೇಶಕ್ಕೆ ಹರಿಯದಂತೆ ಕ್ರಮ ಕೈಗೊಳ್ಳಬೇಕು. ಹುಚ್ಚುನಾಯಿ ಕಡಿತದಿಂದ ಮೃತಪಟ್ಟ ಜಾನುವಾರುಗಳ ಮಾಲೀಕರಿಗೆ ಪರಿಹಾರ ಕಲ್ಪಿಸಬೇಕು. ಮುಂಜಾಗ್ರತೆ ವಹಿಸದಿದ್ದರೆ ಘಟಕವನ್ನು ಬೇರೆ ಕಡೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
ಗಿರೀಶ್ ತೊರಗೋಡು, ರೇಖಾ, ಗಣೇಶ್, ಗಿರೀಶ್, ನಾರಾಯಣ ಇತರರಿದ್ದರು.