ಬೆಂಗಳೂರು: ಯಾವುದೇ ಒತ್ತಡಕ್ಕೆ ಮಣಿಯದೆ ನ್ಯಾ.ನಾಗಮೋಹನ್‌ದಾಸ್ ಆಯೋಗದ ವರದಿ, ಶಿಾರಸಿನಂತೆ ಎಸ್‌ಸಿಗೆ ಒಳಮೀಸಲಾತಿ ಜಾರಿಗೊಳಿಸಲು ಮಾಜಿ ಸಚಿವ ಎಚ್.ಆಂಜನೇಯ ಒತ್ತಾಯಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಈ ಕುರಿತು ಪತ್ರ ಬರೆದಿರುವ ಅವರು, ಆಯೋಗದ ವರದಿಯಲ್ಲಿನ ವಿವರಣೆ, ಮಾಹಿತಿ, ದತ್ತಾಂಶಗಳು ಸ್ಪಷ್ಟವಾಗಿ ಎಲ್ಲವನ್ನು ತೆರೆದಿಟ್ಟಿವೆ. ಹಿರಿಯ ಸಾಹಿತಿಗಳಾದ ದೇವನೂರು ಮಹಾದೇವ ಅಂತಹವರು ಪ್ರಜ್ಞಾಪೂರ್ವಕವಾಗಿಯೇ ಪತ್ರ ಬರೆದು, ವರದಿ ಯಥಾವತ್ ಜಾರಿಗೆ ಒತ್ತಾಯಿಸಿದ್ದನ್ನು ಉಲ್ಲೇಖಿಸಿದ್ದಾರೆ.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿರುವಿಕೆ ಮಾನದಂಡದಂತೆ 101 ಜಾತಿಗಳನ್ನು ಐದು ಗುಂಪುಗಳಲ್ಲಿ ಆಯೋಗ ವಿಂಗಡಿಸಿ, ಶೇ.17 ಮೀಸಲು ಹಂಚಿಕೆಗೆ ಶಿಾರಸು ಮಾಡಿದೆ.
ಛಲವಾದಿ ಸಮುದಾಯದಲ್ಲಿನ ಕೆಲವರು ಅರಿತೋ ಅರಿಯದೆಯೋ ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ. ಈ ವಿಷಯಕ್ಕೆ ಮನ್ನಣೆ ನೀಡಬಾರದು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ವಿನಂತಿಸಿದ್ದಾರೆ.
ಅನೇಕ ಅನ್ಯ ಸಮುದಾಯಗಳು, ಛಲವಾದಿ ಜಾತಿಯ ಪ್ರಜ್ಞಾವಂತರು ಕೂಡ ವರದಿ ಜಾರಿ ಪರ ಮಾತನಾಡಿದ್ದು, ಒಟ್ಟು ಕುಟುಂಬದಲ್ಲಿದ್ದವರು ಅಣ್ಣ-ತಮ್ಮಂದಿರಾಗಿ ಯಾರೊಬ್ಬರ ಮಧ್ಯಸ್ಥಿಕೆ ಇಲ್ಲದೆ ಆಸ್ತಿ ಹಂಚಿಕೆ ಮಾಡಿಕೊಳ್ಳುವ ರೀತಿ ಒಳಮೀಸಲಾತಿ ಜಾರಿಯಲ್ಲಿ ಪ್ರಬುದ್ಧತೆ ಮೆರೆಯೋಣ ಎಂದು ಕೋರಿದ್ದಾರೆ.
ಛಲವಾದಿ ಸಮುದಾಯದವರು ಯಾವುದೇ ಗೊಂದಲಕ್ಕೆ ಸಿಲುಕದೆ ಸಂವಿಧಾನದ ಆಶಯದಂತೆ ಚಿಂತನೆ ನಡೆಸಬೇಕು. ಅತ್ಯಂತ ಹೀನಾಯ ಸ್ಥಿತಿಯಲ್ಲಿರುವ ಮಾದಿಗ ಮತ್ತು ಸಣ್ಣಪುಟ್ಟ ಜಾತಿಗಳು ಮುಖ್ಯವಾಹಿನಿಗೆ ಬರಬೇಕೆಂಬ ಮಾತೃಹೃದಯ ಹೊಂದಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಮನವಿ ಮಾಡಿದ್ದಾರೆ.