ನ್ಯೂಸ್

ನಿವೃತ್ತಿ ಆರ್ಥಿಕ ಸೌಲಭ್ಯಕ್ಕೆ ಆಗ್ರಹ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಏಳನೇ ವೇತನ ಆಯೋಗದ ವರದಿಯಂತೆ ನಿವೃತ್ತ ರಾಜ್ಯ ಸರ್ಕಾರಿ ನೌಕರರ ಪರಿಷ್ಕೃತ ವೇತನದ ಮೇಲೆ ನಿವೃತ್ತಿ ಆರ್ಥಿಕ ಸೌಲಭ್ಯಗಳಾದ ಡಿಸಿಆರ್‌ಬಿ ಕಮ್ಯೂಟೇಶನ್, ಗಳಿಕೆ ರಜೆ, ನಗದೀಕರಣಗಳ ಸೌಲಭ್ಯಗಳನ್ನು ನೀಡಬೇಕೆಂದು, ಲೆಕ್ಕಾಚಾರದ ವ್ಯತ್ಯಾಸದ ಮೊತ್ತವನ್ನು ಪಾವತಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ವೇದಿಕೆ ಪ್ರಮುಖರು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.

7ನೇ ವೇತನ ಆಯೋಗದಂತೆ ಲೆಕ್ಕಾಚಾರ ಮಾಡಿ ನಮಗೆ ನ್ಯಾಯೋಚಿತವಾಗಿ ಲಭ್ಯವಾಗುವ ಆರ್ಥಿಕ ಸೌಲಭ್ಯವನ್ನು ಸಚಿವ ಸಂಪುಟದ ಸಭೆಯಲ್ಲಿ ಮಂಡಿಸಿ ಅಂಗೀಕರಿಸಬೇಕು. 2024 ಸೆಪ್ಟೆಂಬರ್ 22ರ ಆದೇಶವನ್ನು ಪರಿಷ್ಕರಿಸಬೇಕು. ಆ ಮೂಲಕ ಸುಮಾರು 16 ಸಾವಿರ ನಿವೃತ್ತ ನೌಕರರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ವೇದಿಕೆ ಜಿಲ್ಲಾ ಸಂಚಾಲಕ ಕೆ.ನಾಗಪ್ಪ , ಪ್ರಮುಖರಾದ ಎಚ್.ಪರಮೇಶ್ವರಪ್ಪ , ಎನ್.ಮಾರುತಿ, ಸುಕನ್ಯಾ ಮುಂತಾದವರು ಈ ಸಂದರ್ಭದಲ್ಲಿದ್ದರು.