ಬೆಂಗಳೂರು ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ ಸಿಎಂ, ಡಿಸಿಎಂ ಹಾಗೂ ಗೃಹಸಚಿವರ ರಾಜೀನಾಮೆಗೆ ಒತ್ತಾಯಿಸಿ ಎಬಿವಿಪಿಯ ಎಚ್.ಕೆ.ಪ್ರವೀಣ್, ಲೋಹಿತ್, ಸುಧಾ, ದರ್ಶನ್, ಅಮಿತ್, ರವಿಕಿರಣ್ ಮುಂತಾದವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. 
ನ್ಯೂಸ್

ಸಿಎಂ, ಡಿಸಿಎಂ, ಗೃಹ ಸಚಿವರ ರಾಜೀನಾಮೆಗೆ ಒತ್ತಾಯ

ಶಿವಮೊಗ್ಗ: ಆರ್‌ಸಿಬಿ ತಂಡ ಐಪಿಎಲ್ ಟ್ರೋಪಿ ಗೆದ್ದ ಬಳಿಕ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಸಂಭ್ರಮಾಚರಣೆ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಪೊಲೀಸ್ ಅಧಿಕಾರಿಗಳ ಮೇಲಿನ ಅಮಾನತನ್ನು ಸರ್ಕಾರ ಹಿಂಪಡೆಯಬೇಕು. ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಎಬಿವಿಪಿ ಪ್ರಮುಖರು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಸರ್ಕಾರದ ಹೊಣೆಗೇಡಿತನದ ವರ್ತನೆಯಿಂದ ದುರ್ಘಟನೆ ಸಂಭವಿಸಿದೆ. ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಇಡೀ ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ಬಲಿಪಶುಗಳನ್ನಾಗಿ ಮಾಡಲಾಗಿದೆ ಎಂದು ಮನವಿಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಈ ಸಂಭ್ರಮಾಚರಣೆ ಆತುರದ ಆಯೋಜನೆಯಾಗಿತ್ತು. ವಿವೇಚನಾರಹಿತ ತೀರ್ಮಾನವಾಗಿತ್ತು. ಪೊಲೀಸರು ಎಚ್ಚರಿಕೆ ನೀಡಿದರೂ ಅದನ್ನು ಕಡೆಗಣಿಸಲಾಗಿತ್ತು. ದೇಶದ ವಿವಿಧೆಡೆ ಈಗಾಗಲೇ ಅನೇಕ ಕಾಲ್ತುಳಿತ ಪ್ರಕರಣಗಳು ನಡೆದಿದ್ದರೂ ರಾಜ್ಯ ಸರ್ಕಾರ ಆತುರದ ತೀರ್ಮಾನ ಕೈಗೊಂಡಿದ್ದು ಘಟನೆಗೆ ಕಾರಣವಾಗಿದೆ. 11 ಮಂದಿ ದುರ್ಮರಣದಿಂದ ಆ ಕುಟುಂಬಗಳಲ್ಲಿ ಶೋಕ ಮಡುಗಟ್ಟಿದೆ. ಇಡೀ ಘಟನೆಯ ಬಗ್ಗೆ ಪ್ರಾಮಾಣಿಕ ತನಿಖೆ ನಡೆಸಬೇಕೆಂದು ಮನವಿ ಮೂಲಕ ಆಗ್ರಹಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಎಬಿವಿಪಿ ದಕ್ಷಿಣ ಪ್ರಾಂತ ಕಾರ್ಯದರ್ಶಿ ಎಚ್.ಕೆ.ಪ್ರವೀಣ್, ವಿಭಾಗ ವಿದ್ಯಾರ್ಥಿನಿ ಪ್ರಮುಖ್ ಸುಧಾ, ನಗರ ಕಾರ್ಯದರ್ಶಿ ಲೋಹಿತ್, ಕಾರ್ಯಕರ್ತರಾದ ರವಿಕಿರಣ್, ದರ್ಶನ್, ಅಮಿತ್ ಮುಂತಾದವರಿದ್ದರು.