ನ್ಯೂಸ್

ಮಹನೀಯರ 5, 10 ರೂ. ಮುಖಬೆಲೆ ನಾಣ್ಯಗಳ ಬಿಡುಗಡೆಗೆ ಆಗ್ರಹ

ಶಿವಮೊಗ್ಗ: ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ, ವೀರರಾಣಿ ಕಿತ್ತೂರು ಚನ್ನಮ್ಮ, ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಭಕ್ತ ಕನಕದಾಸ ಹಾಗೂ ನಾಡಪ್ರಭು ಕೆಂಪೇಗೌಡ ಅವರ ಚಿತ್ರವನ್ನೊಳಗೊಂಡ 5 ಮತ್ತು 10 ರೂ. ಮುಖಬೆಲೆಯ ನಾಣ್ಯಗಳನ್ನು ಬಿಡುಗಡೆ ಮಾಡುವಂತೆ ಮಲೆನಾಡು ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಾಹಕರ ಟ್ರಸ್ಟ್ ಅಧ್ಯಕ್ಷ ದೇವದಾಸ್ ನಾಯಕ್ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

ಯಾವುದೇ ವಿಶೇಷ ನಾಣ್ಯಗಳನ್ನು ಬಿಡುಗಡೆ ಮಾಡಿದ ಸಂದರ್ಭ 5 ಮತ್ತು 10 ರೂ. ನಾಣ್ಯಗಳನ್ನು ಚಲಾವಣೆಗೆ ಬಿಡಲಾಗುತ್ತಿತ್ತು. ಆದರೆ, ಈಗ ಈ ನಿಯಮ ಕೈಬಿಟ್ಟಿರುವುದರಿಂದ ಇಂತಹ ಮಹಾನ್ ವ್ಯಕ್ತಿಗಳ ನಾಣ್ಯ ಸಂಗ್ರಹಿಸುವುದು ದುಬಾರಿಯಾಗಿ ಪರಿಣಮಿಸಿದೆ. ಹೀಗಾಗಿ ಕೇಂದ್ರ ಸರ್ಕಾರ ಮಹಾನ್ ವ್ಯಕ್ತಿಗಳು ಸೇರಿ ಇತರೆ ವಿಶೇಷ ನಾಣ್ಯಗಳ ಜತೆಗೆ ಚಲಾವಣೆ ನಾಣ್ಯಗಳನ್ನು ಬಿಡುಗಡೆ ಮಾಡುವ ಮೂಲಕ ನಾಣ್ಯ ಸಂಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚಂದ್ರಕಾಂತ್ ಮಾತನಾಡಿ, ಪ್ರಪಂಚದ ಬಹುತೇಕ ದೇಶಗಳ ನೋಟುಗಳ ಮೇಲೆ ಅಲ್ಲಿನ ಪ್ರಮುಖ ವ್ಯಕ್ತಿಗಳ ಚಿತ್ರಗಳನ್ನು ಮುದ್ರಿಸಲಾಗುತ್ತಿದೆ. ಆದರೆ ಭಾರತದಲ್ಲಿ ಮಹಾತ್ಮ ಗಾಂಧಿ ಹೊರತುಪಡಿಸಿದರೆ ಇತರೆ ಮಹಾನ್ ವ್ಯಕ್ತಿಗಳ ಭಾವಚಿತ್ರಗಳ ನೋಟುಗಳು ಮುದ್ರಣವಾಗಿಲ್ಲ ಎಂದರು.

ಸಂಘದ ಅಧ್ಯಕ್ಷ ವಿನೋದ್‌ಕುಮಾರ್ ಜೈನ್, ಟ್ರಸ್ಟಿ ಮಹೇಂದ್ರಕುಮಾರ್ ಜೈನ್, ನಿರ್ದೇಶಕರಾದ ನಾಗರಾಜ್, ರಾಘವೇಂದ್ರ ಸುದ್ದಿಗೋಷ್ಠಿಯಲ್ಲಿದ್ದರು.

ಜ.16ರಿಂದ ರಾಷ್ಟ್ರಮಟ್ಟದ ಪ್ರದರ್ಶನ

ಮುಂದಿನ ವರ್ಷ ಜನವರಿ 16ರಿಂದ 18ರವರೆಗೆ ಶಿವಮೊಗ್ಗದಲ್ಲಿ ರಾಷ್ಟ್ರಮಟ್ಟದ ಪ್ರಾಚೀನ ನಾಣ್ಯ ಮತ್ತು ಅಂಚೆ ಚೀಟಿ ಪ್ರದರ್ಶನ ಏರ್ಪಡಿಸಲಾಗುವುದು ಎಂದು ಸಂಘದ ನಿರ್ದೇಶಕ ಎಲ್.ಸುಬ್ರಹ್ಮಣ್ಯ ಹೇಳಿದರು. ಈ ಸಂದರ್ಭದಲ್ಲಿ ಕರ್ನಾಟಕದ ರಾಜ ಮನೆತನಗಳಾದ ಕದಂಬರು, ಹೊಯ್ಸಳರು, ಚಾಲುಕ್ಯರು, ರಾಷ್ಟ್ರಕೂಟರು ಸೇರಿ ರಾಜರ ನಾಣ್ಯಗಳನ್ನು ಕೂಡ ಪ್ರದರ್ಶಿಸಲಾಗುವುದು ಎಂದರು.