ಬೆಂಗಳೂರು: ಎಸ್ಸಿ, ಎಸ್ಟಿ ಉದ್ಯಮಿಗಳಿಗೆ ಬಾಕಿ ಉಳಿಸಿಕೊಂಡಿರುವ ಕೈಗಾರಿಕಾ ಭೂಮಿ ಸಹಾಯಧನದ ಮೊತ್ತವನ್ನು ಸರ್ಕಾರ ಕೂಡಲೇ ಬಿಡುಗಡೆಗೊಳಿಸಿ, ಉದ್ಯಮಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ರಾಜ್ಯ ದಲಿತ ಉದ್ದಿಮೆದಾರರ ಸಂಘದ ರಾಜ್ಯಾಧ್ಯಕ್ಷ ಡಾ.ಎಲ್. ಹನುಮಂತಯ್ಯ ಒತ್ತಾಯಿಸಿದ್ದಾರೆ.
ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್ಸಿ, ಎಸ್ಟಿ ಉದ್ಯಮಿದಾರರಿಗೆ ನಿವೇಶನ ಖರೀದಿಗೆ ಸರ್ಕಾರವು ಕೆಐಎಡಿಬಿ ವತಿಯಿಂದ ಸಹಾಯಧನ ಬಿಡುಗಡೆ ಮಾಡುತ್ತಿದೆ. ಈ ಮೊತ್ತವು ಸುಮಾರು 825 ಕೋಟಿ ರೂ. ಬಾಕಿ ಇದೆ. ಬಿಡುಗಡೆಗೆ ಒತ್ತಾಯಿಸಿ, ಸಂಬಂಧಪಟ್ಟ ಸಚಿವ, ಅಧಿಕಾರಿಗಳನ್ನು ಒತ್ತಾಯಿಸಿದ್ದರು ಸಹ ಯಾವುದೇ ರೀತಿ ಪ್ರಯೋಜನವಾಗಿಲ್ಲ ಎಂದು ದೂರಿದರು.
ಜನಪ್ರತಿನಿಧಿಗಳು ಅವರ ಸ್ವಹಿತಾಸಕ್ತಿಗಾಗಿ ವೇದಿಕೆಗಳ ಮೇಲೆ ದಲಿತಪರ ಹೇಳಿಕೆಗಳನ್ನು ನೀಡುತ್ತಾರೆಯೇ ಹೊರತು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣವಾಗಿ ವಿಲರಾಗಿದ್ದಾರೆ. ಮೀಸಲಾತಿ ಕೋಟಾದಡಿ ದಲಿತ ಉದ್ಯಮಿಗಳಿಗೆ ನಿವೇಶನ ಹಂಚಿಕೆ ವಿಚಾರದಲ್ಲಿ ಹಲವು ಲೋಪಗಳು ಆಗಿವೆ. ಕೋರ್ಟ್ ದಾವೆ ಬಾಕಿ ಇರುವುದು, ತಗ್ಗು ಪ್ರದೇಶ, ಸಂತ್ರಸ್ತರಿಗೆ ಪರಿಹಾರ ಇತ್ಯರ್ಥ ಆಗದೆ ಇರುವ ನಿವೇಶನಗಳನ್ನು ನೀಡಲಾಗಿದೆ. ಇದರಿಂದ 236 ಮಂದಿ ಯೋಜನೆ ಜಾರಿಗೆ ತರಲು ಆಗದ ಪರಿಸ್ಥಿತಿಯಲ್ಲಿದ್ದಾರೆ ಎಂದರು.
ಸಂಘದ ಕಾರ್ಯಾಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಮುಂಗಡ ಹಣ ಪಾವತಿಸಿ ಹಂಚಿಕೆಗಾಗಿ ಕಾಯುತ್ತಿರುವ ಎಸ್ಸಿ, ಎಸ್ಟಿ ಉದ್ಯಮಿಗಳ ಹಳೆಯ ಬಾಕಿ ಪ್ರಕರಣಗಳು ಇತ್ಯರ್ಥವಾಗುವವರೆಗೆ ಹೊಸ ಭೂ ಹಂಚಿಕೆ ಪ್ರಕರಣಗಳಿಗೆ ಆದ್ಯತೆ ನೀಡಬಾರದು. ಸಂದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರವು ಕ್ರಮವಹಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದರ ಜತೆಗೆ ಸಮುದಾಯದ ಜನಪ್ರತಿನಿಧಿಗಳಿಗೆ ಘೇರಾವ್ ಹಾಕುವ ಮೂಲಕ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.