ನ್ಯೂಸ್

‘ಜನಸ್ಪಂದನ‘ ಕಾರ್ಯಕ್ರಮ: ಸಿಎಂ ಸಿದ್ದು ಮುಂದೆ ರಾಹುಲ್ ಗಾಂಧಿ ಭೇಟಿಗೆ ಬೇಡಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ' ಜನಸ್ಪಂದನ ' ಕಾರ್ಯಕ್ರಮದಲ್ಲಿ ತರಹೇವಾರಿ ಅಹವಾಲು ಹೊತ್ತುಕೊಂಡು ಧಾವಿಸಿದ ಜನರು ಮನವಿ ಸಲ್ಲಿಸಿ ಪರಿಹಾರಕ್ಕೆ ಮೊರೆಯಿಟ್ಟರು. ಆದರೆ ಬೆಳಗಾವಿ ಜಿಲ್ಲೆಯ ಅಥಣಿಯ ಅಶೋಕ್ ತಲವಾರ್ ರಿಂದ ವಿಚಿತ್ರ ಬೇಡಿಕೆಯಿಟ್ಟರು !

ಊರಲ್ಲಿ ಇಂದಿರಾ ಗಾಂಧಿಯ ಪ್ರತಿಮೆ ಮಾಡಿಸಿದ್ದೇನೆ. ಅದನ್ನು ತೋರಿಸಲು ರಾಹುಲ್ ಗಾಂಧಿಯನ್ನು ಭೇಟಿ ಮಾಡಿಸಿ ಎಂದು ಮನವಿ ಮಾಡಿಕೊಂಡರು. 'ಆಯ್ತಪ್ಪಾ ನೋಡೋಣ ಎಂದ ಸಿಎಂ ಸಿದ್ದರಾಮಯ್ಯ ಹೇಳಿ ಕಳುಹಿಸಿದರು.

ಮನೆ ಭೋಗ್ಯಕ್ಕೆ ಹಾಕಿಕೊಂಡವರ ಗೋಳು

ಮೈಸೂರು ರಸ್ತೆಯ ಬ್ಯಾಟರಾಯನಪುರದ 3 ನೇ ಅಡ್ಡ ರಸ್ತೆಯಲ್ಲಿ ರಾಜೇಶ್ವರಿ ಮಲ್ಲೇಶ್ ಎಂಬುವರ ಮನೆಯಲ್ಲಿ ಭೋಗ್ಯಕ್ಕೆ ನೆಲೆಸಿರುವ ನಿವಾಸಿಗಳು ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಮನೆ ಮಾಲೀಕರು ನಾಪತ್ತೆಯಾಗಿದ್ದು, ಬ್ಯಾಂಕ್ ನವರು ಮನೆ ಜಪ್ತಿಗೆ ಬಂದಿದ್ದಾರೆ.

ನಾವು ಈ ಮನೆಗೆ ಲೀಸ್ ಗೆ ಬಂದಿದ್ದೇವೆ. ಆದರೆ ಮನೆ ಮಾಲೀಕರು ಮನೆಯ ಮೇಲೆ ಸಾಲ ಪಡೆದು ಅದನ್ನು ಕಟ್ಟದೆ ಪರಾರಿ ಆಗಿದ್ದಾರೆ. ಈಗ ಬ್ಯಾಂಕಿನವರು ಮನೆ ಜಪ್ತಿಗೆ ಬಂದಿದ್ದಾರೆ.‌ ನಮ್ಮ ಲೀಸ್ ಹಣವೂ ಹೋಗುತ್ತದೆ ಎಂದು ಗೋಳು ತೋಡಿಕೊಂಡರು.

ತಾವು ಹಾಕಿದ ಹಣ ಕಳೆದುಕೊಳ್ಳುವ ಭೀತಿಯಲ್ಲಿದ್ದೇವೆ. ಮಕ್ಕಳೊಂದಿಗೆ ಬೀದಿಗೆ ಬರುವ ಸ್ಥಿತಿ ಇದೆ, ನೆರವು ನೀಡಿ  ಎಂದು  ಮನವಿ ಮಾಡಿದರು.

ತಕ್ಷಣ ನಗರ ಪೊಲೀಸ್ ಕಮಿಷನರ್ ದಯಾನಂದ್ ಅವರನ್ನು ಕರೆದ ಮುಖ್ಯಮಂತ್ರಿಗಳು ಪ್ರಕರಣ ಪರಿಶೀಲಿಸುವಂತೆ ಸೂಚಿಸಿದರು. ಪೊಲೀಸ್ ಆಯುಕ್ತ ದಯಾನಂದ್ ಅವರು ಸಮಗ್ರವಾಗಿ ಸಮಸ್ಯೆ ಕೇಳಿಸಿಕೊಂಡು ಪರಿಹಾರಕ್ಕೆ ಡಿಸಿಪಿ ಅವರಿಗೆ ಸೂಚಿಸಿದರು.