ಸಾಗರದ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ವಿದ್ಯುತ್ ಬಳಕೆದಾರರ ಹಿತ ರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ತೀ.ನ.ಶ್ರೀನಿವಾಸ್, ಹಿತಕರ ಜೈನ್, ಕೆ.ಎನ್.ಗಿರಿ, ಸುಂದರ ಸಿಂಗ್, ಪರಮೇಶ್ವರ ದೂಗೂರು, ಮಂಜುನಾಥ ಬಳಸಗೋಡು ಮತ್ತಿತರರಿದ್ದರು.  
ನ್ಯೂಸ್

ಗುಣಮಟ್ಟದ ವಿದ್ಯುತ್ ಪೂರೈಸುವಂತೆ ಒತ್ತಾಯ

ಶಿವಕುಮಾರ ಎಸ್.ಪಿ.

ಸಾಗರ: ಮೆಸ್ಕಾಂ ಉಪವಿಭಾಗೀಯ ವ್ಯಾಪ್ತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಹಾಗೂ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುತ್ತಿಲ್ಲ ಎಂದು ಆರೋಪಿಸಿ ವಿದ್ಯುತ್ ಬಳಕೆದಾರರ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ಸಾಗರ ಪಟ್ಟಣದ ಮೆಸ್ಕಾಂ ಕಚೇರಿ ಎದುರು ವಿದ್ಯುತ್ ಬಳಕೆದಾರರ ಹಿತರಕ್ಷಣಾ ಸಮಿತಿಯಿಂದ ಮೆಸ್ಕಾಂ ಉಪವಿಭಾಗೀಯ ವ್ಯಾಪ್ತಿಯಲ್ಲಿನ ಭ್ರಷ್ಟಾಚಾರ ಹಾಗೂ ಅವೈಜ್ಞಾನಿಕ ವಿದ್ಯುತ್ ಸರಬರಾಜು ಖಂಡಿಸಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಸಾಗರ ಪಟ್ಟಣದ 13 ಸಾವಿರ ಮನೆಗಳ ಸುಮಾರು 80 ಸಾವಿರ ಜನರಿಗೆ ಕುಡಿಯುವ ನೀರು ಸರಬರಾಜಿಗೆ ನಗರಸಭೆಯಿಂದ 85 ಲಕ್ಷ ರೂ. ವೆಚ್ಚದಲ್ಲಿ ಎಕ್ಸ್‌ಪ್ರೆಸ್ ಲೈನ್ ನಿರ್ಮಿಸಲಾಗಿದೆ. ಆದರೆ ಸರಿಯಾಗಿ ವಿದ್ಯುತ್ ಪೂರೈಕೆಯಾಗದ ಕಾರಣ ನೀರಿನ ಪೂರೈಕೆಗೂ ಅವ್ಯವಸ್ಥೆ ಉಂಟಾಗಿದೆ ಎಂದು ದೂರಿದರು.

ಅನಿಯಮಿತ ಲೋಡ್‌ಶೆಡ್ಡಿಂಗ್ ತಪ್ಪಿಸಬೇಕು. ಆವಿನಹಳ್ಳಿ ಗ್ರಾಮೀಣ ಭಾಗದಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜಿಗೆ ಕಾರಣವಾಗಿರುವ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಾಗರ ಕುಡಿಯುವ ನೀರಿನ ಯೋಜನೆ ಎಕ್ಸ್‌ಪ್ರೆಸ್ ಲೈನ್‌ಗೆ ಕಲ್ಪಿಸಿರುವ ಹೆಚ್ಚುವರಿ ಸಂಪರ್ಕ ತಪ್ಪಿಸಬೇಕು. ಆವಿನಹಳ್ಳಿ ಹೋಬಳಿ ಗ್ರಾಮಾಂತರ ವ್ಯಾಪ್ತಿಗೆ ಸಮರ್ಪಕ ಗುಣಮಟ್ಟದ ವಿದ್ಯುತ್ ಪೂರೈಸಬೇಕು. ಗಿಣಿವಾರದಲ್ಲಿ 33 ಕೆ.ವಿ. ವಿದ್ಯುತ್(ಉಪಕೇಂದ್ರ) ಗ್ರಿಡ್ ನಿರ್ಮಿಸಬೇಕು. ಹೊಸನಗರ ತಾಲೂಕಿನ ಹರಿದ್ರಾವತಿಯಲ್ಲಿ 33 ಕೆ.ವಿ(ಉಪಕೇಂದ್ರ) ನೂತನ ಗ್ರಿಡ್ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಸಾಗರ ಗ್ರಾಮಾಂತರ ಭಾಗದ ಮಾಸೂರು, ತ್ಯಾಗರ್ತಿ, ಉಳ್ಳೂರು ವ್ಯಾಪ್ತಿ ಮುಂತಾದೆಡೆ ಹೊಸದಾಗಿ ಮಂಜೂರಾತಿ ಮಾಡಿ ಅಳವಡಿಸಲಾದ 50ಕ್ಕೂ ಹೆಚ್ಚು ವಿದ್ಯುತ್ ಪರಿವರ್ತಕಗಳಿಗೆ ಸುರಕ್ಷಿತ ಜಿವೋಸ್ ಅಳವಡಿಸಿದ್ದರೂ ಬಿಲ್ ಪಾವತಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ವಿದ್ಯುತ್ ಬಳಕೆದಾರರ ಹಿತರಕ್ಷಣಾ ಸಮಿತಿ ಸಂಚಾಲಕ ಎಸ್.ವಿ.ಹಿತಕರ ಜೈನ್, ಕಾರ್ಯದರ್ಶಿ ಕೆ.ಎನ್.ಗಿರಿ, ಮಲೆನಾಡು ರೈತ ಹೋರಾಟ ವೇದಿಕೆ ಅಧ್ಯಕ್ಷ ತೀ.ನ.ಶ್ರೀನಿವಾಸ್, ತಾಲೂಕು ರೈತ ಸಂಘದ ಅಧ್ಯಕ್ಷ ಸುಂದರ ಸಿಂಗ್, ಡಿಎಸ್‌ಎಸ್‌ನ ಪರಮೇಶ್ವರ ದೂಗೂರು, ಸಾಮಾಜಿಕ ಕಾರ್ಯಕರ್ತ ಮಂಜುನಾಥ, ಪ್ರದೀಪ್, ಯಡಜಿಗಳೇಮನೆ ಗ್ರಾಪಂ ಸದಸ್ಯ ರವಿ, ಅಶೋಕ್ ಭಟ್, ಜಯಕುಮಾರ್, ಗಣೇಶ್, ಲಕ್ಷ್ಮೀನಾರಾಯಣ, ನರಹರಿ, ಪ್ರಸಾದ್, ನಾಗರಾಜ್, ಅಣ್ಣಪ್ಪ ಇತರರಿದ್ದರು.