ನಂಜನಗೂಡು: ಬೆಂಗಳೂರಿನ ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರದ ಶಾಸಕ ಮುನಿರತ್ನ ಒಕ್ಕಲಿಗರು, ದಲಿತರು ಹಾಗೂ ಮಹಿಳೆಯರ ಬಗ್ಗೆ ಅಶ್ಲೀಲ ಮತ್ತು ಅಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ನಂಜನಗೂಡಿನ ಹುಲ್ಲಹಳ್ಳಿ ವೃತ್ತದ ಬಳಿ ಕಾಂಗ್ರೆಸ್ ವತಿಯಿಂದ ಸೋಮವಾರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಶಾಸಕ ಮುನಿರತ್ನ ಹಾಗೂ ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಮುನಿರತ್ನ ಪ್ರತಿಕೃತಿ ಧಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಶಾಸಕ ಮುನಿರತ್ನ ಒಕ್ಕಲಿಗ, ದಲಿತ ಹಾಗೂ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿರುವುದು ಖಂಡನೀಯ. ಬಿಜೆಪಿಯ ಎಲ್ಲಾ ಹಿರಿಯ ನಾಯಕರು ಹಾಗೂ ಪಕ್ಷದ ಅಧ್ಯಕ್ಷರ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವುದು ಆಘಾತಕಾರಿ ವಿಚಾರವಾಗಿದೆ.
ಸಾಂವಿಧಾನಿಕ ಹುದ್ದೆಯಲ್ಲಿ ಇದ್ದು ಕೊಂಡು ಈ ರೀತಿ ನಡೆದುಕೊಂಡಿರುವುದು ಖಂಡನೀಯ. ಶಾಸಕರಾಗಿ ಮತ್ತು ಸಚಿವರಾಗಿ ನಿರಂತರ ದಬ್ಬಾಳಿಕೆ ಮಾಡಿಕೊಂಡು ಬಂದಿದ್ದಾರೆ. ಮುನಿರತ್ನ ಅವರು ನೈತಿಕ ಹೊಣೆ ಹೊತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ ಇತರರು ಇದ್ದರು.