ಶಿವಮೊಗ್ಗ: ಕೇರಳದ ವಯನಾಡಿನಲ್ಲಿ ನಡೆದ ಭೀಕರ ಭೂಕುಸಿತದ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟ ಪ್ರದೇಶದ ಸೂಕ್ಷ್ಮತೆ ಮತ್ತು ಅದರ ಜಾಗತಿಕ ಮಹತ್ವ ಅರಿತು ಪರಿಸರ ರಕ್ಷಣೆಗಾಗಿ ಪ್ರೊ. ಮಾಧವ ಗಾಡ್ಗೀಳ್ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಪರಿಸರಕ್ಕಾಗಿ ನಾವು ಸಂಘಟನೆಯ ಕಾರ್ಯಕರ್ತರು ಬುಧವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವಯನಾಡಿನಲ್ಲಿ ಗುಡ್ಡಗಳು ಕುಸಿದು ರಾತ್ರಿ ಬೆಳಗಾಗುವುದರೊಳಗೆ ಅಪಾರ ಪ್ರಮಾಣದ ಜೀವ, ಆಸ್ತಿಪಾಸ್ತಿ ನಷ್ಟವಾಯಿತು. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲೂ ಭೂ ಕುಸಿತಗಳಾಗಿವೆ. ಇದಕ್ಕೆ ಕಾರಣ ಪ್ರಕೃತಿಯ ಮೇಲೆ ಮಾನವನ ದಬ್ಬಾಳಿಕೆ, ಅರಣ್ಯ ಪ್ರದೇಶಗಳ ಒತ್ತುವರಿ, ಅಕ್ರಮ ಗಣಿಗಾರಿಕೆ, ರೆಸಾರ್ಟ್, ಹೋಂ ಸ್ಟೇ, ಹೋಟೆಲ್‌ಗಳ ನಿರ್ಮಾಣ ಎಂದು ಪ್ರತಿಭಟನಾಕಾರರು ದೂರಿದರು.
ಪರಿಸರಕ್ಕೆ ವಿಪರೀತ ಹಾನಿ ಉಂಟುಮಾಡುವ ಇಂತಹ ಮಾರಕ ಚಟುವಟಿಕೆಗಳನ್ನು ತಡೆಗಟ್ಟಲು ಸರ್ಕಾರ ಯಾವುದೇ ಗಂಭೀರ ಪ್ರಯತ್ನವನ್ನೂ ಮಾಡಿಲ್ಲ. ದುರಂತ ಸಂಭವಿಸಿದ ಬಳಿಕ ಪರಿಹಾರ ನೀಡಿದರೆ ಜವಾಬ್ದಾರಿ ಮುಗಿಯಿತೆಂಬ ಭಾವನೆ ಸರ್ಕಾರಗಳಲ್ಲಿದೆ. ಸರ್ಕಾರ ಕೂಡಲೇ ಪರಿಸರ ರಕ್ಷಣೆಗಾಗಿ ಮಾಧವ್ ಗಾಡ್ಗೀಳ್ ವರದಿ ಜಾರಿ ಮಾಡಬೇಕೆಂದು ಆಗ್ರಹಿಸಿದರು.
ಪಶ್ಚಿಮ ಘಟ್ಟಕ್ಕೆ ಪ್ರಾಧಿಕಾರ ರಚನೆ, ಸೂಕ್ಷ್ಮ ಪರಿಸರ ವಲಯ ಘೋಷಣೆ, ಪರಿಸರ ಪರಿಣಾಮ ಅಧ್ಯಯನವನ್ನು ಬಲಪಡಿಸುವುದು, ಸುಸ್ಥಿರ ಕೃಷಿ ಮತ್ತು ಅರಣ್ಯೀಕರಣವನ್ನು ಪ್ರೋತ್ಸಾಹಿಸುವುದು ಹಾಗೂ ಪಂಚಾಯಿತಿ, ಹೋಬಳಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಜೀವ ವೈವಿಧ್ಯ ಸಂರಕ್ಷಣಾ ಪಡೆಯನ್ನು ರಚಿಸಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ಡಾ. ಶೇಖರ್ ಗೌಳೇರ, ಎನ್.ಗೋಪಿನಾಥ್, ವಸಂತ ಹೋಬಳಿದಾರ್, ನವ್ಯಶ್ರೀ ನಾಗೇಶ್, ಡಾ. ಪರಿಸರ ನಾಗರಾಜ್, ಗುರುದತ್, ಗೀತಾ, ಶರವಣ, ಎಸ್.ಬಿ.ಅಶೋಕ್‌ಕುಮಾರ್, ಆರ್.ಎನ್.ಸ್ವಾಮಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.