ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಚ್.ಡಿ.ಕೋಟೆಯಲ್ಲಿ ದಸಂಸ ಅಂಬೇಡ್ಕರ್ ವಾದ ಸಂಘಟನೆಯ ವತಿಯಿಂದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. 
ನ್ಯೂಸ್

ಸಾಗುವಳಿ ಹಕ್ಕುಪತ್ರ ನೀಡಲು ಸರ್ಕಾರ ಮುಂದಾಗಲು ಒತ್ತಾಯ

ಎಚ್.ಡಿ.ಕೋಟೆ: ಸಾಗುವಳಿ ಹಕ್ಕುಪತ್ರ ಪಡೆಯಲು ರೈತರು ದರಖಾಸ್ತು ಮೂಲಕ ಸಲ್ಲಿಸಿದ ಅರ್ಜಿಗಳಿಗೆ ಸಾಗುವಳಿ ಹಕ್ಕುಪತ್ರ ನೀಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ದಸಂಸ ಅಂಬೇಡ್ಕರ್ ವಾದ ಸಂಘಟನೆ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ತಾಲೂಕು ಕಚೇರಿ ಆವರಣದಲ್ಲಿ ಸೇರಿದ ಪ್ರತಿಭಟನಾಕಾರರು ಸರ್ಕಾರ ದರಖಾಸ್ತು ಭೂಮಿ ಸಕ್ರಮೀಕರಣದ ಸಮಿತಿಗೆ ಸಲ್ಲಿಸಿದ ಅರ್ಜಿಗಳನ್ನು ಆಯಾ ಕ್ಷೇತ್ರದ ಶಾಸಕರು ಅರ್ಜಿ ವಿಲೇವಾರಿ ಮಾಡದೆ ತುಂಬ ನಿರ್ಲಕ್ಷತೆಯಿಂದಾಗಿ ಫಾರಂ 50, 53, 57 ರಲ್ಲಿ ಸಲ್ಲಿಸಿರುವ ದಲಿತ ಮತ್ತು ತಳ ಸಮುದಾಯಗಳ ಅರ್ಜಿಗಳು ಕೊಳೆಯುತ್ತಾ ಬಿದ್ದಿವೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಾಗುವಳಿ ಪಡೆಯಲು ಸಲ್ಲಿಸಿದ ಎಲ್ಲರಿಗೂ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ತಾಲೂಕು ಸಂಚಾಲಕ ಸಣ್ಣ ಕುಮಾರ್, ಕಳೆದ ನಾಲ್ಕು ದಶಕಗಳಿಂದ ಬಾಬಾ ಸಾಹೇಬರ ಸೈದ್ಧಾಂತಿಕ ನೆಲೆಯಲ್ಲಿ ದಲಿತ ಚಳವಳಿ ಭೂಮಿ, ಶಿಕ್ಷಣ, ಉದ್ಯೋಗ ಮುಂತಾದ ಮನುಷ್ಯನ ಮೂಲಭೂತ ಅವಶ್ಯಕತೆಗಾಗಿ ಆಳುವ ವರ್ಗಗಳೊಂದಿಗೆ ನಿರಂತರವಾಗಿ ಸಂಘರ್ಷ ನಡೆಸುತ್ತಲೇ ಬಂದಿದೆ. ದಲಿತರ ಭೂಮಿ ಹಕ್ಕಿಗಾಗಿ ನಡೆಸಿದ ಹೋರಾಟದ ಪ್ರತಿಫಲವಾಗಿ ಸರ್ಕಾರ ದರಖಾಸ್ತು ಜಮೀನು ಮಂಜೂರು ಮಾಡುವ ಕಾಯ್ದೆ ಜಾರಿಗೆ ತಂದಿತ್ತು. ಹಾಗೆಯೇ 70ರ ದಶಕದಲ್ಲಿ ಬಿ.ಬಸವಲಿಂಗಪ್ಪನವರ ದೂರದೃಷ್ಟಿಯ ಫಲವಾಗಿ ಪಿಟಿಸಿಎಲ್ ಕಾಯ್ದೆ ಜಾರಿಗೆ ಬಂದಿದ್ದರೂ ಜಾತಿವಾದಿಗಳು ಮತ್ತು ಅಧಿಕಾರಶಾಹಿಗಳ ಮಸಲತ್ತಿನಿಂದ ಹಾಗೂ ಸರ್ಕಾರಗಳ ಕುತಂತ್ರದಿಂದ ಪಿಟಿಸಿಎಲ್ ಜಮೀನುಗಳ ಪ್ರಕರಣಗಳಲ್ಲಿ ದಲಿತ ಸಮುದಾಯಗಳು ಕೋರ್ಟ್‌ಗಳಿಗೆ ಅಲೆಯುತ್ತಾ ವಂಚನೆಗೆ ಒಳಗಾಗಿದ್ದಾರೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಅನುಷಾ ಕೋಟೆ, ರಾಜಪ್ಪ ಕೆ.ಜಿ.ಹಳ್ಳಿ, ಕಾಳಪ್ಪಾಜಿ ಬೋಗಿಶ್ವರ ಕಾಲನಿ ಮಹೇಶ ಮಟಕೆರೆ, ಉದಯಕೋಟೆ, ಕುಮಾರ ಹೈರಿಗೆ, ಶಿವಯ್ಯ ಕೆ.ಜಿ, ಸಮೀವುಲ್ಲಾ, ಶಿವಣ್ಣ ಕೆ.ಜಿ. ಹಳ್ಳಿ, ಸತೀಶ್‌ಕುಮಾರ್ ಕೋಟೆ, ಪುಟ್ಟಬಸವ, ಸೋಮಪ್ಪ, ಜ್ಯೋತಿ, ಮಹದೇವಮ್ಮ, ಪ್ರೇಮಾ, ಚಂದ್ರು ಟೈಲರ್ ಸೇರಿದಂತೆ ನೂರಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.