ನ್ಯೂಸ್

ಡ್ರೋನ್​ಗಳಿಗೆ ಡಿಮಾಂಡು!

ಬಾಬುಪ್ರಸಾದ್​ ಮೋಡಿಸ್​

ನವದೆಹಲಿ: ಭಾರತದಲ್ಲಿ ಕೃಷಿ, ಲಾಜಿಸ್ಟಿಕ್ಸ್, ರಕ್ಷಣೆ ಸೇರಿ ಇನ್ನೂ ಮುಂತಾದ ಕ್ಷೇತ್ರಗಳಿಂದ ಡ್ರೋನ್​ಗಳಿಗೆ ಬೇಡಿಕೆ ಗಮನಾರ್ಹವಾಗಿ ಹೆಚ್ಚಿದೆ. ಪರಿಣಾಮವಾಗಿ 2030ರ ಹೊತ್ತಿಗೆ ಈ ಉದ್ಯಮದ ಗಾತ್ರ ಸುಮಾರು 2 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಲಿದೆ ಎಂದು ನೆಕ್ಷಜನ್ ಎಂಬ ಅಧ್ಯಯನ ವರದಿ ಮಾಹಿತಿಯನ್ನು ನೀಡಿದೆ.

ಇತ್ತೀಚೆಗೆ ಭಾರತದಲ್ಲಿ ಡ್ರೋನ್​ಗಳಿಗೆ ಭಾರಿ ಬೇಡಿಕೆ ಬರುತ್ತಿದೆ. ರಕ್ಷಣೆ ಹೊರತುಪಡಿಸಿದರೆ ಕೃಷಿ ಕ್ಷೇತ್ರದಿಂದ ಹೆಚ್ಚು ಬೇಡಿಕೆ ಇದೆ. ದೇಶದ 15 ನಗರಗಳಲ್ಲಿನ 150 ಡ್ರೋನ್ ಕಂಪನಿಗಳನ್ನು ಸಂದರ್ಶಿಸಿ, ಈ ವರದಿ ತಯಾರಿಸಲಾಗಿದೆ ಎಂದು ನೆಕ್ಷಜನ್ ವಿವರಿಸಿದೆ. 2030ರ ವೇಳೆಗೆ ಕೃಷಿ ಕ್ಷೇತ್ರದಲ್ಲಿ ಡ್ರೋನ್​ಗಳಿಗೆ ಶೇಕಡ 40ರಷ್ಟು ಬೇಡಿಕೆ ಹೆಚ್ಚಾಗಲಿದೆ ಎಂದಿದೆ. ಜಾಗತಿಕವಾಗಿಯೂ ಕೃಷಿ ಕ್ಷೇತ್ರದಲ್ಲಿನ ಡ್ರೋನ್​ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ಒಂದು ಕ್ಷೇತ್ರದಲ್ಲಿಯೇ ಸುಮಾರು 51 ಸಾವಿರ ಕೋಟಿ ರೂ. ವಹಿವಾಟು 2030ರ ವೇಳೆಗೆ ನಡೆಯಲಿದೆ ಎಂದು ತಿಳಿಸಿದೆ. ಇದೇ ಜುಲೈ 31, ಆಗಸ್ಟ್ 1 ಮತ್ತು 2ರಂದು ರಾಜಧಾನಿ ದೆಹಲಿಯಲ್ಲಿ ಡ್ರೋನ್ ಇಂಟರ್​ನ್ಯಾಷನಲ್ ಎಕ್ಸ್​ಪೋ-2025 ನಡೆಯಲಿದ್ದು, ಇದಕ್ಕಾಗಿ ಭಾರತದ ಕಂಪನಿಗಳು ತಯಾರಿ ಮಾಡಿಕೊಳ್ಳುತ್ತಿವೆ.