ನಾಗಮಂಗಲ ತಾಲೂಕು ಆಡಳಿತ ಸೌಧದ ಮುಂಭಾಗ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. 
ನ್ಯೂಸ್

2 ಸಾವಿರ ಕೋಟಿ ರೂ. ಪರಿಹಾರಕ್ಕೆ ಆಗ್ರಹ

ನಾಗಮಂಗಲ: ಬರಪೀಡಿತ ಮಂಡ್ಯ ಜಿಲ್ಲೆಗೆ 2 ಸಾವಿರ ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವ ಜತೆಗೆ ರೈತರು ಮತ್ತು ಕೂಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ತಾಲೂಕು ಆಡಳಿತ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘಟನೆಯ ನೂರಾರು ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ-ಸಾಮಾನ್ಯರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಧಿಕ್ಕಾರ ಕೂಗಿದರು.
ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಕೆಲ ಕಾಲ ಧರಣಿ ನಡೆಸಿದ ವೇಳೆ ಸಂಘಟನೆಯ ರಾಜ್ಯ ಪ್ರಧಾನಕಾರ್ಯದರ್ಶಿ ದೇವಿ ಮಾತನಾಡಿ, ರಾಜ್ಯ ಸರ್ಕಾರವು ಮಂಡ್ಯ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿರುವುದು ಸ್ವಾಗತಾರ್ಹ. ಆದರೆ ಈ ಘೋಷಣೆ ಕೇವಲ ಕಾಗದ ಪತ್ರಗಳ ಮೇಲೆ ಉಳಿಯದೆ ಅದಕ್ಕೆ ಪೂರಕವಾಗಿ ಪರಿಹಾರ ಕ್ರಮಗಳನ್ನು ತಕ್ಷಣ ಜಾರಿಗೊಳಿಸುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಿಲ್ಲೆಯ ಜನರ ನೆರವಿಗೆ ನಿಲ್ಲಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸುಶೀಲಾ ಮಾತನಾಡಿ, ಕಾವೇರಿ ನದಿ ನೀರಿನ ವಿಚಾರದಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು. ವಿರೋಧ ಪಕ್ಷಗಳೂ ಇಂತಹ ವಿಚಾರದಲ್ಲಿ ಯಾವುದೇ ಬೇಡಿಕೆಯನ್ನು ಮಂಡಿಸುತ್ತಿಲ್ಲ. ರಾಜಕೀಯ ಪಕ್ಷಗಳ ಇಂತಹ ಬೇಜವಾಬ್ದಾರಿ ನಡೆಯನ್ನು ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಸಂಕಷ್ಟದ ಸಮಯದಲ್ಲಿ ಉಂಟಾಗುತ್ತಿರುವ ಆತಂಕ ಮತ್ತು ಅಭ್ರದ್ರತೆಯನ್ನು ದೂರ ಮಾಡಲು ಸಂಬಂಧಿಸಿದ ಪ್ರಾಧಿಕಾರಗಳು ಮತ್ತು ಕೇಂದ್ರ ಸರ್ಕಾರ ಶಾಶ್ವತ ಸಂಕಷ್ಟ ಪರಿಹಾರ ಸೂತ್ರವನ್ನು ರೂಪಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರಕ್ಕೆ ಮನವಿ: ರೈತರ ಬೆಳೆ ನಷ್ಟಕ್ಕೆ ಎಕರೆಗೆ 50 ಸಾವಿರ ರೂ. ಪರಿಹಾರ ಮತ್ತು ಕೂಲಿಕಾರರ ಕೂಲಿ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು. ವಿಬಿ-ಜಿ ರಾಮ್ ಜಿ ಯೋಜನೆಯಡಿ ದಿನಗೂಲಿ 700 ರೂ.ಗೆ ಹೆಚ್ಚಿಸಿ ವಾರ್ಷಿಕ ಕುಟುಂಬಕ್ಕೆ 200 ದಿನ ಕೆಲಸ ನೀಡಬೇಕು. ಜಿಲ್ಲೆಯ ಎಲ್ಲ ರೈತರು, ಕೂಲಿಕಾರರ ಮಹಿಳಾ ಸ್ವ-ಸಹಾಯ ಸಂಘ ಹಾಗೂ ಮೈಕ್ರೋ ಫೈನಾನ್ಸ್‌ಗಳ ಸಾಲ ಮನ್ನಾ ಮಾಡಬೇಕು. ರೈತ ಕೂಲಿಕಾರರಿಂದ ಯಾವುದೇ ಕಂದಾಯ ಹಾಗೂ ಬ್ಯಾಂಕ್ ಸಾಲಗಳನ್ನು ಬಲವಂತವಾಗಿ ವಸೂಲಿ ಮಾಡಬಾರದು ಎಂದು ಆಗ್ರಹಿಸಿ ತಹಸೀಲ್ದಾರ್ ಡಾ.ಅಶೋಕ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷೆ ಪ್ರೇಮಮ್ಮ, ಕಾರ್ಯದರ್ಶಿ ವರಲಕ್ಷ್ಮೀ, ಖಜಾಂಚಿ ಮಂಜುಳಾ, ಲಕ್ಷಮ್ಮ, ರಾಧಿಕಾ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.