ತಿ.ನರಸೀಪುರ: ಮಳೆಯಿಂದಾದ ಬೆಳೆ ನಷ್ಟಕ್ಕೆ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ರೈತ ಸಂಘಟನೆಗಳ ಒಕ್ಕೂಟದ ಸದಸ್ಯರು, ಮಳೆ ಗಾಳಿಯಿಂದಾದ ಬೆಳೆಗೆ ಸಮರ್ಪಕವಾಗಿ ನಷ್ಟ ಪರಿಹಾರ ನೀಡದ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್ ಹಾಗೂ ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ರೈತರು ಬರಗಾಲದ ಸಂಕಷ್ಟದಲ್ಲಿದ್ದು ಕೃಷಿ ಚಟುವಟಿಕೆ ನಡೆಸಲು ಆರ್ಥಿಕ ಮುಗ್ಗಟ್ಟು ಎದುರಿಸುವಂತಾಗಿದೆ. ಪ್ರತಿಯೊಬ್ಬ ರೈತನಿಗೂ ಬರ ಪರಿಹಾರ ದೊರಕಿದರೆ ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗುತ್ತದೆ. ಹಾಗಾಗಿ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಘೋಷಣೆ ಮಾಡಿದ ಕಬ್ಬಿನ ಹೆಚ್ಚುವರಿ ದರ ಟನ್ ಕಬ್ಬಿಗೆ 150 ರೂ .ನಿಗದಿ ಮಾಡಿರುವುದನ್ನು ಬಣ್ಣಾರಿ ಸಕ್ಕರೆ ಕಾರ್ಖಾನೆಯು ರೈತರಿಗೆ ಪಾವತಿ ಮಾಡಿಲ್ಲ. ಈ ಬರಗಾಲ ಸಂಕಷ್ಟದಲ್ಲಿ ರೈತರಿಗೆ ಹಣ ಕೊಡಿಸಿದರೆ ನೆರವಾಗಲಿದೆ. ಕಬ್ಬಿನ ಇಳುವರಿಯಲ್ಲಿ ಮೋಸ ಹಾಗೂ ತೂಕದಲ್ಲಿ ಮೋಸ ಕಬ್ಬಿನ ಉಪ ಉತ್ಪನ್ನಗಳ ಲಾಭದಲ್ಲಿ ಲಾಭ ಹಂಚಿಕೆಯಲ್ಲಿ ಮೋಸ ಪರಿಶೀಲನೆ ನಡೆಸಲು ಸಕ್ಕರೆ ಅಭಿವೃದ್ಧಿ ಆಯುಕ್ತರ ಸಮಿತಿ ರಚಿಸಲಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು
ಭಾರಿ ಮಳೆ ಗಾಳಿಯಿಂದ ತಾಲೂಕಿನ ರೈತರ ಬಾಳೆ, ಕಬ್ಬು, ಇನ್ನಿತರೆ ಬೆಳೆಗಳು ಸಾಕಷ್ಟು ಹಾನಿಯಾಗಿದೆ. ಇಂತಹ ರೈತರಿಗೆ ನ್ಯಾಯಯುತ ಪರಿಹಾರ ಕೊಡಿಸಬೇಕು. ಮಳೆಗಾಲ ಆರಂಭವಾಗಿರುವ ಕಾರಣ ಕೃಷಿ ಚಟುವಟಿಕೆ ಮಾಡಲು ಹಾಗೂ ಬಾವಿಗಳ ಅಂತರ್ಜಲ ವೃದ್ಧಿಗೆ ತಾಲೂಕಿನ ಎಲ್ಲಾ ಕೆರೆ, ಕಟ್ಟೆಗಳ ಹಾಗೂ ಕಾಲುವೆಗಳ ಹೂಳೆತ್ತುವ ಕಾರ್ಯ ಕೈಗೊಳ್ಳಬೇಕು. ಬರ ಪರಿಹಾರ ಜಂಟಿ ಖಾತೆದಾರರು, ಬಗರ್ ಹುಕುಂ ಸಾಗುವಳಿದಾರರು ಹಾಗೂ ಗೇಣಿದಾರ ಸಾಗುವಳಿ ರೈತರಿಗೂ ಪರಿಹಾರ ಸಿಗದಿರುವ ಹಿನ್ನೆಲೆಯಲ್ಲಿ ಇಂತವರಿಗೂ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬ್ಯಾಂಕುಗಳ ಮುಂದೆ ರೈತರಿಗೆ ದೊರಕುವ ಸಾಲ ಮತ್ತು ಸೌಲಭ್ಯಗಳ ನಾಮ ಫಲಕ ಹಾಕಬೇಕು. ಜತೆಗೆ ಸರ್ಕಾರದ ಸಹಾಯ ಧನ, ಪಿಂಚಣಿ ಹಣ ಹಾಗೂ ಪರಿಹಾರ ಹಣ ಇನ್ನಿತರೆ ಸಬ್ಸಿಡಿ ಹಣವನ್ನು ರೈತರ ಸಾಲದ ಖಾತೆಗೆ ಜಮಾ ಮಾಡಿಕೊಳ್ಳುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ವಸೂಲಿ ಗೂಂಡಾಗಳನ್ನು ಬಳಸಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಖಾಸಗಿ ಶಾಲಾ, ಕಾಲೇಜುಗಳಲ್ಲಿ ಗ್ರಾಮೀಣ ಭಾಗದ ರೈತರ ಮಕ್ಕಳು, ಕೂಲಿ ಕಾರ್ಮಿಕರ ಮಕ್ಕಳ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪಡೆದುಕೊಳ್ಳಲು ಡೋನೆಶನ್ ಮತ್ತು ಶುಲ್ಕ ಸುಲಿಗೆ ಮಾಡುತ್ತಿದ್ದು, ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ನಂತರ ಶಿರಸ್ತೇದಾರ್ ಮಂಜುಳಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಕಿರಗಸೂರು ಪ್ರಸಾದ್ ನಾಯಕ್, ತಾಲೂಕು ಮಹಿಳಾ ಅಧ್ಯಕ್ಷೆ ಎನ್.ರೂಪ, ಕುರುಬೂರು ಪ್ರದೀಪ್, ಬೆನಕನಹಳ್ಳಿ ಪರಶಿವಮೂರ್ತಿ, ಕುಂತನಹಳ್ಳಿ ಸ್ವಾಮಿ, ಸೀಹಳ್ಳಿ ರವಿ, ಕುಪ್ಯ ಪುಟ್ಟಸ್ವಾಮಿ, ಬಿ.ಬೆಟ್ಟಹಳ್ಳಿ ರಾಮಲಿಂಗಯ್ಯ, ಬನ್ನೂರು ಸೂರಿ,ಬಿ.ಆರ್.ಚೆಲುವೇಗೌಡ, ವಾಚ್ ಕುಮಾರ, ನಿಂಗರಾಜು, ಶಾಂತರಾಜು, ಎಸ್.ರಾಜೇಶ್, ಅಪ್ಪಣ್ಣ, ಎನ್.ರವಿಕುಮಾರ್, ಆರ್.ಬಸವರಾಜು ಮತ್ತಿತರರಿದ್ದರು.