ಸರ್ಕಾರಿ ಪ್ರೌಢಶಾಲೆಗೆ ಹಿಂದಿ ಶಿಕ್ಷಕರನ್ನು ನೇಮಕ ಮಾಡುವಂತೆ ಒತ್ತಾಯಿಸಿ, ಹುತ್ತೂರು ಗ್ರಾಮಸ್ಥರು, ಕೋಲಾರ ನಗರದ ಬಿಇಒ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 
ನ್ಯೂಸ್

ಹಿಂದಿ ಶಿಕ್ಷಕರ ನೇಮಕಕ್ಕೆ ಪಟ್ಟು

ಕೋಲಾರ: ತಾಲೂಕಿನ ಹುತ್ತೂರು ಸರ್ಕಾರಿ ಪ್ರೌಢಶಾಲೆಗೆ ಹಿಂದಿ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿ, ಹುತ್ತೂರು ಗ್ರಾಮಸ್ಥರು ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ಮುಖಂಡ ಸತೀಶ್ ಮಾತನಾಡಿ, ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳು ಕಳೆದರೂ ಪ್ರೌಢಶಾಲೆಗೆ ಹಿಂದಿ ಶಿಕ್ಷಕರನ್ನು ನೇಮಕ ಮಾಡಿಲ್ಲ. ಇದರಿಂದಾಗಿ ಶಾಲೆಯ ಮಕ್ಕಳಿಗೆ ತೊಂದರೆಯಾಗುತ್ತಿದ್ದು, ಹಲವು ಬಾರಿ ಸಮಸ್ಯೆ ಕುರಿತು ಇಲಾಖಾಽಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿ ಕ್ರಮಕೈಗೊಂಡಿಲ್ಲ ಎಂದು ದೂರಿದರು.

ಶಿಕ್ಷಕರ ಕೊರತೆಯಿಂದ ಮಕ್ಕಳು ಹಿಂದಿ ಕಲಿಕೆಯಲ್ಲಿ ಹಿಂದೆ ಬಿದ್ದಿದ್ದಾರೆ. ಪರೀಕ್ಷೆಗಳಲ್ಲಿ ಮಕ್ಕಳಿಗೆ ಸಮಸ್ಯೆಯಾಗುವ ಸಾಧ್ಯತೆಗಳಿವೆ, ಹೀಗಾಗಿ ಕೂಡಲೇ ಹಿಂದಿ ಶಿಕ್ಷಕರನ್ನು ನಿಯೋಜನೆ ಮಾಡಬೇಕು ಎಂದು ಒತ್ತಾಯಿಸಿದರು.

ಮಕ್ಕಳ ಹಿತದೃಷ್ಟಿಯಿಂದ ಶಿಕ್ಷಕರನ್ನು ನಿಯೋಜನೆ ಮಾಡಿಕೊಡುವಂತೆ ಮನವಿ ಮಾಡಿದರೆ ಅಽಕಾರಿಗಳು ಸ್ಪಂದಿಸುತ್ತಿಲ್ಲ. ನಮ್ಮ ಸಮಸ್ಯೆ ಹೇಳಿಕೊಳ್ಳಲು ಮುಂದಾದರೆ ಅಽಕಾರಿಗಳು ದೌರ್ಜನ್ಯವೆಸಗುತ್ತಿದ್ದಾರೆ ಎಂದು ಆರೋಪಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ರವಿ ಮಾತನಾಡಿ, ಕಳೆದ ಶೈಕ್ಷಣಿಕ ವರ್ಷವೂ ಹಿಂದಿ ಶಿಕ್ಷಕರನ್ನು ನಿಯೋಜನೆ ಮಾಡಲು ಸಾಕಷ್ಟು ಒತ್ತಡ ಹೇರಲಾಗಿತ್ತು. ಈ ವರ್ಷವೂ ಹಿಂದಿ ಶಿಕ್ಷಕರನ್ನು ವ್ಯವಸ್ಥೆ ಮಾಡಿಕೊಟ್ಟಿಲ್ಲ. ಇದರಿಂದಾಗಿ ಮಕ್ಕಳಿಗೆ ತೊಂದರೆಯಾಗುತ್ತಿದೆ. ಹಲವಾರು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಡಿಡಿಪಿಐ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೆವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ರಾಜ್‌ಕುಮಾರ್, ರಾಜು ಇದ್ದರು.

* ಕ್ಯಾಮರಾ ಕಿತ್ತುಕೊಳ್ಳಲು ಯತ್ನ

ಬಿಇಒ ಅವರಿಗೆ ಗ್ರಾಮಸ್ಥರು ಹಿಂದಿ ಶಿಕ್ಷಕರನ್ನು ನಿಯೋಜನೆ ಮಾಡಿಕೊಡುವಂತೆ ಮನವಿ ಮಾಡಲು ಮುಂದಾಗಿದ್ದನ್ನು ಚಿತ್ರೀಕರಿಸಲು ವರದಿಗಾರರು ಮುಂದಾದಾಗ, ಇಲಾಖೆಯ ಇಸಿಒ ಮುನಿರತ್ನಶೆಟ್ಟಿ ಮಾಧ್ಯಮ ಪ್ರತಿನಿಧಿಗಳ ಕ್ಯಾಮರಾ ಕಿತ್ತುಕೊಂಡು ದೌರ್ಜನ್ಯಯುತವಾಗಿ ಹಲ್ಲೆ ಮಾಡಲು ಯತ್ನಿಸಿದ ಘಟನೆ ನಡೆಯಿತು.

ಕೋಟ್....

ಹೊತ್ತೂರು ಪ್ರೌಢ ಶಾಲೆಗೆ ಸಿರೇಸಂದ್ರ ಹಿರಿಯ ಪ್ರಾಥಮಿಕ ಶಾಲೆಯ ಹಿಂದಿ ಸಹಶಿಕ್ಷಕ ಎಂ.ವಿಜಯ್‌ಕುಮಾರ್ ಅವರನ್ನು ನಿಯೋಜನೆ ಮಾಡಲಾಗಿದೆ. ಆದರೆ, ಅವರು ಶಾಲೆಗೆ ಹೋಗುತ್ತಿಲ್ಲ.

- ಮಧುಮಾಲತಿ ಪಡುವಣೆ, ಬಿಇಒ, ಕೋಲಾರ