ಶಿವಮೊಗ್ಗ: ಸಾಗರ ತಾಲೂಕಿನ ಪತ್ರಕರ್ತ ಮಹೇಶ್ ಹೆಗಡೆ ಅವರಿಗೆ ಜೀವ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ವಸ್ತುನಿಷ್ಠವಾಗಿ ವರದಿ ಮಾಡುವುದು ಪತ್ರಕರ್ತರ ಕರ್ತವ್ಯ. ಆದರೆ ತಮ್ಮ ವಿರುದ್ಧ ಸುದ್ದಿ ಬರೆಯಲಾಗಿದೆ ಎಂದು ಭಾವಿಸಿ ಹಲ್ಲೆ ಮಾಡುವುದು, ಜೀವ ಬೆದರಿಕೆ ಹಾಕುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಹಾಗಾಗಿ ಪತ್ರಕರ್ತನ ಮೇಲೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿದರು.
ಸಂಘದ ರಾಜ್ಯ ಸಮಿತಿ ಸದಸ್ಯಎನ್.ರವಿಕುಮಾರ್, ರಾಷ್ಟ್ರೀಯ ಸಮಿತಿ ಬಂಡಿಗಡಿ ನಂಜುಂಡಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಹಾಲಸ್ವಾಮಿ, ಕೆ.ಎಸ್.ಹುಚ್ರಾಯಪ್ಪ, ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್, ನಗರ ಕಾರ್ಯದರ್ಶಿ ಕೆ.ಆರ್.ಸೋಮನಾಥ್ ಮತ್ತಿತರರಿದ್ದರು.