* ಕಿರುವಾರ ಎಸ್.ಸುದರ್ಶನ್ ಕೋಲಾರ
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವಿಭಜನೆಯ ಚಟುವಟಿಕೆಗಳು ಚುರುಕಿನಿಂದ ನಡೆಯುತ್ತಿದ್ದು, ಅಧಿಕಾರಿಗಳು ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದ್ದಾರೆ ಎಂಬುದು ಚರ್ಚೆಗೆ ಗ್ರಾಸವಾಗಿದೆ. ಮೊದಲ ಹಂತದಲ್ಲಿ ಅಧಿಕಾರಿಗಳು ಹಂಚಿಕೆಯಾಗಿದ್ದು, ಸುಮಾರು 74 ಮಂದಿಯನ್ನು ಏಕಾಏಕಿಯಾಗಿ ವರ್ಗಾವಣೆ ಮಾಡಲಾಗಿತ್ತು. ಇದು ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ನಂತರ ಒಕ್ಕೂಟದ ನಿರ್ದೇಶಕ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲು ಅಧಿಕಾರಿಗಳೇ ನಿರ್ಧಾರ ಕೈಗೊಂಡು ಕ್ಷೇತ್ರಗಳ ವಿಂಗಡಣೆ ಮಾಡಿ ಸಹಕಾರ ಇಲಾಖೆಗೆ ಪಟ್ಟಿ ಸಲ್ಲಿಸಿದ್ದರು.
ಈ ತೀರ್ಮಾನವನ್ನು ಅಧಿಕಾರಿಗಳು ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರ ಸೂಚನೆ ಮೇರೆಗೆ ಮಾಡಿದ್ದಾರೆ ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮಾಜಿ ನಿರ್ದೇಶಕರು, ಜಿಲ್ಲೆಯ ವಿವಿಧ ಹಾಲು ಸಂಗಳ ಅಧ್ಯಕ್ಷರು ಆರೋಪಿಸಿದ್ದರು.
ಅಲ್ಲದೆ ಪಟ್ಟಿಗೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಡೇರಿ ಅಧ್ಯಕ್ಷರು ಕೋರ್ಟ್ ಮೊರೆ ಹೋಗಿ ಕ್ಷೇತ್ರ ವಿಂಗಡಣೆಗೆ ತಡೆಯಾಜ್ಞೆ ತಂದರು. ಜತೆಗೆ ಸರ್ವ ಸದಸ್ಯರ ಸಭೆ ಕರೆದು ಸದಸ್ಯರಿಂದ ಒಮ್ಮತದ ಅಭಿಪ್ರಾಯ ಪಡೆದು ಕ್ಷೇತ್ರ ವಿಂಡಗಣೆ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಿತ್ತು. ಆದರೆ ಅಧಿಕಾರಿಗಳ ಬೇಜವಾಬ್ದಾರಿಯು ಇಷ್ಟೆಲ್ಲ ಬೆಳವಣಿಗೆಗಳಿಗೆ ಕಾರಣವಾಗಿದೆ.
ಒಟ್ಟಾರೆ ಅಧಿಕಾರಿಗಳ ತೀರ್ಮಾನಕ್ಕೆ ಹಿನ್ನಡೆಯಾಗಿದ್ದರು ಸಹ ಒಂದಲ್ಲ ಒಂದು ರೀತಿ ಹಗರಣಗಳಲ್ಲಿ ಅಧಿಕಾರಿಗಳು ಭಾಗಿಯಾಗುತ್ತಿದ್ದಾರೆ ಎಂದು ಕೆಲ ಡೇರಿ ಅಧ್ಯಕ್ಷರು ಆರೋಪಿಸಿದ್ದು, ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಹಾಲು ಮಹಾ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಿಗೆ, ಅಧ್ಯಕ್ಷರಿಗೆ ದೂರು ಸಲ್ಲಿಸಿದ್ದಾರೆ.
ಒಕ್ಕಟದ ಆಡಳಿತ ಮಂಡಳಿಯ ಅಧಿಕಾರವಧಿಯು ಮುಗಿದ ನಂತರ ಅಧಿಕಾರಿಗಳು ಕಾರ್ಯ ವ್ಯಾಪ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಒಕ್ಕೂಟವು ರೈತರ ಸಂಸ್ಥೆಯಾಗಿದ್ದು ಸಮರ್ಪಕ ಸೌಲಭ್ಯ ಕಲ್ಪಿಸುವಲ್ಲಿ ವಿಲರಾಗಿದ್ದಾರೆ ಎಂದು ದೂರಿದ್ದಾರೆ.
ಸಂಸ್ಥೆ ಹೆಸರಿಗೆ ಅಪಖ್ಯಾತಿ ಉಂಟು ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ ತಪು$್ಪ ಅಭಿಪ್ರಾಯ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಸಂಸ್ಥೆಗೆ ಆರ್ಥಿಕ ನಷ್ಟವುಂಟು ಮಾಡುತ್ತಿದ್ದಾರೆ. ಇದಕ್ಕೆ ನೇರವಾಗಿ ಕಾರಣವಾಗಿರುವ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ, ಆಡಳಿತ ವ್ಯವಸ್ಥಾಪಕ ನಾಗೇಶ್ ಅವರನ್ನು ಸೇವೆಯಿಂದ ಅಮಾನತು ಪಡಿಸಿ ಉನ್ನತ ಮಟ್ಟದ ತನಿಖೆ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ಕಾನೂನು ಬಾಹಿರವಾಗಿ ಕ್ಷೇತ್ರ ವಿಂಗಂಡಣೆ ಮಾಡಿದ ನಾಗೇಶ್ ಮತ್ತು ಗೋಪಾಲಮೂರ್ತಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು.
* ರಾಜಕೀಯ ಹಿತಕ್ಕಾಗಿ ಅಧಿಕಾರಿಗಳ ಕಾರ್ಯ
ಒಕ್ಕೂಟದ ನಿರ್ದೇಶಕರ ಕ್ಷೇತ್ರ ವಿಂಗಡಣೆ ವೈಜ್ಞಾನಿಕವಾಗಿ ಆಗಿಲ್ಲ, ಕ್ಷೇತ್ರ ವಿಂಗಡಣೆ ಮುಂಚೆ ಆಕ್ಷೇಪ ಕರೆದಿಲ್ಲ. ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಸಿಲ್ಲ, ಪಟ್ಟಿ ಸಲ್ಲಿಸಲು ಆಡಳಿತಾಧಿಕಾರಿಗಳ ಅನುಮೋದನೆ ಪಡೆದುಕೊಂಡಿಲ್ಲ. ನೇರ ಕೆಲ ರಾಜಕೀಯ ವ್ಯಕ್ತಿಗಳ ಹಿತಕ್ಕಾಗಿ ಏಕಪಕ್ಷೀಯವಾಗಿ ಕ್ಷೇತ್ರ ವಿಂಗಡಣೆ ಪಟ್ಟಿ ಸಿದ್ಧಪಡಿಸಿದ್ದಾರೆ. ಒತ್ತಾಯ ಪೂರ್ವಕವಾಗಿ ಸಹಕಾರ ಇಲಾಖೆ ಅನುಮತಿ ಪಡೆದು ಆಡಳಿತ ಮಂಡಳಿ ಸದಸ್ಯರ ಚುನಾವಣೆಗೆ ಮುಂದಾಗುವ ಮೂಲಕ ಸಂಸ್ಥೆಗೆ ಧಕ್ಕೆಯುಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
* ದಿವಾಳಿಯಾಗುವ ಆತಂಕ
ಒಕ್ಕೂಟದಲ್ಲಿ ಬಂಡವಾಳ ಕ್ರೋಡಿಕರಣ ಮಾಡಿಕೊಳ್ಳದೆ ಏಕಕಾಲಕ್ಕೆ ಮೂರೂ ಯೋಜನೆಗಳನ್ನ ಪ್ರಾರಂಭ ಮಾಡಿರುವ ಕಾರಣ ಸಂಸ್ಥೆ ಆರ್ಥಿಕ ದಿವಾಳಿಯಾಗುವ ಆತಂಕ ಎದುರಾಗಿದೆ. ಬಂಡವಾಳಕ್ಕಾಗಿ <100 ಕೋಟಿ ಓವರ್ ಟ್ರಾನ್ಸ್ ಹಣ ಬ್ಯಾಂಕುಗಳಿಂದ ಸಾಲದ ರೂಪದಲ್ಲಿ ಪಡೆದು ಬ್ಯಾಂಕ್ಗಳಿಗೆ ಪ್ರತಿ ತಿಂಗಳು ಸುಮಾರು 30 ಲಕ್ಷಕ್ಕೂ ಮೇಲ್ಪಟ್ಟು ಬಡ್ಡಿ ಪಾವತಿ ಮಾಡುವ ಮೂಲಕ ಸಂಸ್ಥೆಗೆ ಆರ್ಥಿಕ ನಷ್ಟ ಉಂಟು ಮಾಡಲಾಗುತ್ತಿದೆ.
* ಬೆಣ್ಣೆ, ಹಾಲಿನ ಪುಡಿ ದಾಸ್ತಾನು
ಮಾರುಕಟ್ಟೆ ದರ ಪರಾಮರ್ಶಿಸಿ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡದೆ ಹಾಗೆ ದಾಸ್ತಾನು ಮಾಡಿ ಇಟ್ಟುಕೊಂಡಿದ್ದಾರೆ. ಬೆಣ್ಣೆ, ಹಾಲಿನಪುಡಿ ಮಾರಾಟ ಮಾಡದೆ ಸಾವಿರಾರು ಟನ್ ದಾಸ್ತಾನು ಇಟ್ಟುಕೊಂಡಿದ್ದಾರೆ. ಅಧಿಕಾರಿಗಳ ಕಾರ್ಯವೈಖರಿಯಿಂದ ರೈತರು ಹೈನೋದ್ಯಮದಿಂದ ಹಿಂದೆ ಸರಿಯುವ ಪರಿಸ್ಥಿತಿ ತಂದೊಡ್ಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
* ಅನಧಿಕೃತ ವೇತನ ಪಾವತಿ
ಚಾಮರಾಜನಗರ ಒಕ್ಕೂಟದಲ್ಲಿ ಸಹಾಯಕ ವ್ಯವಸ್ಥಾಪಕ ಆಗಿದ್ದ ಸುಹಾಸ್ ಹಿಂದೆ ಚಿಕ್ಕಬಳ್ಳಾಪುರದ ಮೆಗಾ ಡೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕೋಚಿಮುಲ್ ವಿಭಜನೆಯಾದ ನಂತರ ಅವರನ್ನು ಚಾಮರಾಜನಗರ ಒಕ್ಕೂಟಕ್ಕೆ ವಾಪಸ್ ಕಳುಹಿಸಬೇಕಾಗಿತ್ತು. ಆದರೆ ಕೋಮುಲ್ ಅಧಿಕಾರಿಗಳು ಸುಹಾಸ್ನನ್ನು ಚಿಕ್ಕಬಳ್ಳಾಪುರದಲ್ಲೇ ಉಳಿಸಿಕೊಂಡಿದ್ದು, ಕೋಲಾರ ಒಕ್ಕೂಟದಿಂದ ವೇತನ ನೀಡುತ್ತಾರೆ ಎಂಬ ಆರೋಪ ಕೇಳಿ ಬಂದಿದೆ. ಸುಹಾಸ್ ಕಾರ್ಯಹಿರ್ವಹಿಸುವ ಹುದ್ದೆ ಖಾಲಿ ಇಲ್ಲದಿದ್ದರೂ ಅಧಿಕಾರಿಗಳು ಆಡಳಿತಾಧಿಕಾರಿ ಅನುಮತಿ ಪಡೆಯದೆ ಅನಧಿಕೃತ ವೇತನ ಪಾವತಿ ಮಾಡುತ್ತಿದ್ದಾರೆ. ಸುಹಾಸ್ನನ್ನು ಈ ಕೂಡಲೇ ವಾಪಸ್ ಕಳುಹಿಸಬೇಕು, ನಿವೃತ್ತ ವ್ಯವಸ್ಥಾಪಕ ತಿಪ್ಪಾರೆಡ್ಡಿ ಮಗ ಎಂಬ ಮುಲಾಜಿಗೆ ಒಳಗಾಗಿರುವ ಅಧಿಕಾರಿಗಳು ಹುದ್ದೆ ಖಾಲಿ ಇಲ್ಲದಿದ್ದರೂ ಸಹ ಅನಧಿಕೃತವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಕೋಟ್...
ಒಕ್ಕೂಟದಿಂದ ಹಾಲು ಸಂಗಳಿಗೆ ಸಕಾಲಕ್ಕೆ ಹಣ ಬಟವಾಡೆ ಆಗುತ್ತಿಲ್ಲ. ಸಂದ ಆರ್ಥಿಕ ಪರಿಸ್ಥಿತಿಯ ಮೇರೆಗೆ ಹಾಲು ಉತ್ಪಾದಕರಿಗೆ ಬಿಲ್ ಪಾವತಿ ಮಾಡಲಾಗುತ್ತಿದೆ. ಅಧಿಕಾರಿಗಳು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ.
- ಹೆಸರು ಹೇಳಲಿಚ್ಚಿಸದ ಡೇರಿ ಅಧ್ಯಕ್ಷ, ಕೋಲಾರ