ನ್ಯೂಸ್

ಮಾದಿಗ ಸಮುದಾಯಕ್ಕೆ 6% ಮೀಸಲು ಹಂಚಿಕೆಗೆ ಆಗ್ರಹ | Finalized in the 19th cabinet meeting

ಮೃತ್ಯುಂಜಯ ಕಪಗಲ್

ಬೆಂಗಳೂರು: ಹೆಚ್ಚಿನ ಮೀಸಲಾತಿ ಕೇಳದೆ ಮಾದಿಗ ಸಮಾಜ, ಶ್ರೀಮಠ ಎಲ್ಲರನ್ನು ಒಟ್ಟಿಗೆ ಕರೆದೊಯ್ಯುವ ಆಶಯಕ್ಕೆ ಬದ್ಧವಾಗಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಎಲ್ಲ ಆಯೋಗಗಳು ಒಪ್ಪಿರುವಂತೆ ನಮ್ಮ ಪಾಲಿನ ಶೇಕಡ 6ರಷ್ಟು ಮೀಸಲಾತಿ ಕೊಡಿ. ಉಳಿದದ್ದನ್ನು ಸಮಯಾವಕಾಶ ಪಡೆದು ಬಗೆಹರಿಸಬೇಕು ಎಂದು ಶ್ರೀ ಶಿವಶರಣ ಮಾದಾರಚನ್ನಯ್ಯ ಗುರುಪೀಠ ಟ್ರಸ್ಟ್ ನ ಪೀಠಾಧ್ಯಕ್ಷ ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ.

ಪರಿಶಿಷ್ಟರ 101 ಜಾತಿಗಳಿಗೆ ಮೀಸಲು ವರ್ಗೀಕರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದಾಗ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. 19ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಹಂಚಿಕೆ ಸೂತ್ರ ಅಂತಿಮಗೊಳಿಸಬೇಕು ಎಂದು ಹೇಳಿದ್ದಾರೆ.

ಸಚಿವ ಸಂಪುಟ ಉಪಸಮಿತಿ ರಚನೆಗೆ ನಮ್ಮ ಬೆಂಬಲವಿಲ್ಲ. ಆಯೋಗ ರಚನೆಯೂ ನಮ್ಮ ಬೇಡಿಕೆಯಾಗಿರಲಿಲ್ಲ.‌ ಈ ವಿಚಾರದಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಹಾಗೂ ಹಿಂದುಳಿದಿರುವಿಕೆ ಪ್ರಮಾಣ ಹೆಚ್ಚಿರುವುದು ಅಧ್ಯಯನ ವರದಿ ದತ್ತಾಂಶಗಳ ಸಹಿತ ವಿವರಿಸಿದೆ. ಆದರೂ ಹೆಚ್ಚಿನ ಮೀಸಲಾತಿ ಕೇಳುತ್ತಿಲ್ಲ ಎಂದು ಶ್ರೀ ಮಾದಾರಚನ್ನಯ್ಯ ಸ್ವಾಮೀಜಿ ಹೇಳಿದ್ದಾರೆ‌.

ಕರಗಿದ ಗುಂಪು

ಈ ಹಿಂದೆ ಒಳಮೀಸಲಾತಿಯೇ ಬೇಡ ಅನ್ನುವವರಿದ್ದರು. ಈಗ ಆ ಗುಂಪು ಕರಗಿ ಹೋಗಿದೆ. ಈಗ ಇರುವುದು ತಮ್ಮ ಸಮುದಾಯಗಳಿಗೆ ಪಾಲು ಪಡೆಯುವುದಾಗಿದೆ. ಶ್ರೀಮಠ ಮೊದಲಿನಿಂದಲೂ ಮಾದಿಗ ಮತ್ತದರ ಉಪಜಾತಿಗಳೂ ಸೇರಿ ಎಲ್ಲ 101 ಜಾತಿಗಳ ಹಿತಕಾಯಲು ಬಯಸುತ್ತದೆ ಎಂದಿದ್ದಾರೆ.

ಮಾದಿಗ ಸಮಾಜದ ಕೆಲ ಉಪಜಾತಿಗಳನ್ನು ಅನ್ಯ ಗುಂಪುಗಳಿಗೆ ಸೇರಿಸಿರುವುದರಿಂದ ನಮ್ಮ ಸಮಾಜದ ಜನಸಂಖ್ಯೆ ಕಡಿಮೆಯಾಗಿದೆ ಎನ್ನುವ ಭಾವನೆಯಿದೆ. ಕೊನೆಯ ಐದನೇ ಗುಂಪಿನಲ್ಲಿರುವ ಆದಿ ಕರ್ನಾಟಕ, ಆದಿ ಆಂಧ್ರ ಮತ್ತು ಆದಿ ದ್ರಾವಿಡ ಜಾತಿಗಳಲ್ಲೂ ನಮ್ಮ ಸಮುದಾಯದ ಪೌರ ಕಾರ್ಮಿಕರಿದ್ದಾರೆ. ಹಿಂದುಳಿರುವಿಕೆಯಲ್ಲಿ ಮಾದಿಗ ಸಮಯದಾಯದವರು ಸಂತ್ರಸ್ತರಾಗಿದ್ದಾರೆ ಎಂದು ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ ಹೇಳಿದ್ದಾರೆ.